ADVERTISEMENT

‘ಮೊಬೈಲ್‌ ಆ್ಯಪ್‌ ಮೂಲಕ ಬೆಳೆ ಸಮೀಕ್ಷೆ’

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 20:08 IST
Last Updated 22 ಸೆಪ್ಟೆಂಬರ್ 2017, 20:08 IST
ರಾಮನಗರದ ತಾಲ್ಲೂಕಿನ ಮೇದಾರದೊಡ್ಡಿ ಬಳಿ ಶಿವಲಿಂಗಯ್ಯ ಅವರ ಹೊಲದಲ್ಲಿ ಬೆಳೆದಿರುವ ಸಿರಿಧಾನ್ಯದ ಬೆಳೆಯನ್ನು ಕೃಷಿ ಸಚಿವ ಕೃಷ್ಣ ಬೈರೇಗೌಡ ವೀಕ್ಷಿಸಿದರು
ರಾಮನಗರದ ತಾಲ್ಲೂಕಿನ ಮೇದಾರದೊಡ್ಡಿ ಬಳಿ ಶಿವಲಿಂಗಯ್ಯ ಅವರ ಹೊಲದಲ್ಲಿ ಬೆಳೆದಿರುವ ಸಿರಿಧಾನ್ಯದ ಬೆಳೆಯನ್ನು ಕೃಷಿ ಸಚಿವ ಕೃಷ್ಣ ಬೈರೇಗೌಡ ವೀಕ್ಷಿಸಿದರು   

ರಾಮನಗರ: ‘ರಾಜ್ಯದಾದ್ಯಂತ ಮೊಬೈಲ್ ಆ್ಯಪ್‌ ಬಳಸಿಕೊಂಡು ಬೆಳೆಗಳ ಸಮೀಕ್ಷೆ ಕಾರ್ಯವು ಭರದಿಂದ ಸಾಗಿದೆ. ಇನ್ನೊಂದು ತಿಂಗಳಿನಲ್ಲಿ ಕರ್ನಾಟಕದ ಕೃಷಿ ಚಟುವಟಿಕೆಗಳ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ತಾಲ್ಲೂಕಿನ ಹುಣಸನಹಳ್ಳಿ ಗ್ರಾಮದ ಹೊಲದಲ್ಲಿ ಮೊಬೈಲ್‌ ಆ್ಯಪ್‌ ಬಳಸಿ ಕೃಷಿ ದತ್ತಾಂಶ ಸಂಗ್ರಹ ಕಾರ್ಯವನ್ನು ಪ್ರಾಯೋಗಿಕವಾಗಿ ಪರಿಶೀಲಿಸಿದ ಅವರು ಯೋಜನೆಯ ಕುರಿತು ಪತ್ರಕರ್ತರಿಗೆ ಮಾಹಿತಿ ನೀಡಿದರು.

‘ರಾಜ್ಯದಲ್ಲಿ ಸುಮಾರು 30–40 ವರ್ಷಗಳಿಂದ ಕೃಷಿ ಸಮೀಕ್ಷೆ ಕಾರ್ಯವೇ ನಡೆದಿಲ್ಲ. ಅರ್ಧದಷ್ಟು ಪಹಣಿಗಳಲ್ಲಿ ಬೆಳೆಗಳ ಬಗ್ಗೆ ಮಾಹಿತಿಯೇ ಇಲ್ಲ. ಕೇವಲ ಅಂದಾಜಿನ ಪ್ರಕಾರವೇ ಬೆಳೆವಾರು ಮಾಹಿತಿ, ಉತ್ಪನ್ನ ಹಾಗೂ ಬೆಳೆನಷ್ಟವನ್ನು ಲೆಕ್ಕಹಾಕಲಾಗುತ್ತಿದೆ. ಇದನ್ನು ತಪ್ಪಿಸುವ ಸಲುವಾಗಿ ಇದೀಗ ಮೊಬೈಲ್ ತಂತ್ರಾಂಶ ಬಳಸಿ ಕೃಷಿ ಸಂಬಂಧಿ ದತ್ತಾಂಶ ಸಂಗ್ರಹ ಕಾರ್ಯವನ್ನು ಆರಂಭಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ವಿವಿಧ ಇಲಾಖೆಗಳ ಸಿಬ್ಬಂದಿ ರೈತರ ಜಮೀನುಗಳಿಗೆ ತೆರಳಿ, ಅಲ್ಲಿ ಬೆಳೆದಿರುವ ಬೆಳೆಗಳನ್ನು ನಮೂದಿಸಿಕೊಂಡು, ವಿಸ್ತೀರ್ಣ ದಾಖಲಿಸಿಕೊಳ್ಳಲಿದ್ದಾರೆ. ಅದನ್ನು ಆ್ಯಪ್‌ ಮೂಲಕ ಭೂಮಿ ತಂತ್ರಾಂಶಕ್ಕೆ ಸೇರಿಸಲಾಗುವುದು. ಭೂಮಾಲೀಕರ ಆಧಾರ್ ಸಂಖ್ಯೆಯನ್ನೂ ಪಡೆಯಲಾಗುವುದು. ಇದರಿಂದ ಮುಂದೆ ರೈತರ ಪಹಣಿಗಳಲ್ಲಿ ಅವರು ಬೆಳೆದಿರುವ ಬೆಳೆಯೇ ನಮೂದಾಗಲಿದೆ’ ಎಂದು ತಿಳಿಸಿದರು.

‘ಮೊದಲ ಹಂತದಲ್ಲಿ ಆಯಾ ಜಿಲ್ಲೆಗಳ ಹೆಚ್ಚುವರಿ ಜಿಲ್ಲಾಧಿಕಾರಿಗಳೇ ಖುದ್ದು ಈ ಕಾರ್ಯ ಮಾಡಿದ್ದಾರೆ. ಎರಡನೇ ಹಂತದಲ್ಲಿ ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಮೊದಲಾದ ಇಲಾಖೆಗಳ 20 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಈ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದರು.

ಸಿರಿಧಾನ್ಯ ಬೆಳೆ ವೀಕ್ಷಣೆ: ತಾಲ್ಲೂಕಿನ ಮೇದಾರದೊಡ್ಡಿ ಬಳಿ ಶಿವಲಿಂಗಯ್ಯ ಅವರ ಹೊಲದಲ್ಲಿ ಬೆಳೆದಿರುವ ಸಿರಿಧಾನ್ಯದ ಬೆಳೆಯನ್ನು ಸಚಿವರು ವೀಕ್ಷಿಸಿದರು.

‘ನವಣೆ, ಸಾಮೆ, ಅರ್ಕದಂತಹ ಸಿರಿಧಾನ್ಯಗಳನ್ನು ಬೆಳೆಯುವ ಕೃಷಿ ಪ್ರದೇಶ ರಾಜ್ಯದಲ್ಲಿ ದುಪ್ಪಟ್ಟಾಗಿದೆ. ಕಳೆದ ವರ್ಷ ರಾಜ್ಯದಲ್ಲಿ 19ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಸಿರಿಧಾನ್ಯವನ್ನು ಬೆಳೆಯಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 33 ಸಾವಿರ ಹೆಕ್ಟರ್ ಪ್ರದೇಶಕ್ಕೆ ಅದು ವಿಸ್ತೀರ್ಣಗೊಂಡಿದೆ’ ಎಂದು ಅವರು ತಿಳಿಸಿದರು.

‘ಬೆಂಗಳೂರಿನಲ್ಲಿ ಮುಂದಿನ ವರ್ಷದ ಜನವರಿಯಲ್ಲಿ ಅಂತರರಾಷ್ಟ್ರೀಯ ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗುವುದು, ಅಲ್ಲಿ ಬಿಸ್ಕೆಟ್‌, ನೂಡಲ್ಸ್, ಬ್ರೆಡ್ ಇತ್ಯಾದಿ ಪದಾರ್ಥಗಳನ್ನು ತಯಾರಿಸುವ ಕುರಿತು ತಿಳಿಸಿಕೊಡುವ ಮೂಲಕ ಸಿರಿಧಾನ್ಯಗಳಿಗೆ ಬೇಡಿಕೆ ಸೃಷ್ಟಿ ಮಾಡುವಂತೆ ಸರ್ಕಾರದಿಂದ ಯತ್ನಿಸಲಾಗುವುದು’ ಎಂದು ಅವರು ಹೇಳಿದರು. ‘ಸಿರಿಧಾನ್ಯ ಬೆಳೆಗೆ ಸರ್ಕಾರ ಬೆಂಬಲಬೆಲೆ ನಿಗದಿಪಡಿಸಿದ್ದು, ಪ್ರತಿ ಹೆಕ್ಟೇರ್‌ಗೆ ₹2,500 ನೀಡುತ್ತಿದೆ’ ಎಂದರು.

ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಇ–ಗವರ್ನೆನ್ಸ್‌ ಘಟಕದ ಸುನಿಲ್ ಪನ್ವಾರ್, ಜಿಲ್ಲಾಧಿಕಾರಿ ಬಿ.ಆರ್. ಮಮತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್. ಲತಾ, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ದೀಪಜಾ, ಸಿರಿಧಾನ್ಯ ಬೆಳೆಗಾರ ಶಿವಲಿಂಗಯ್ಯ, ಸ್ಥಳೀಯ ಮುಖಂಡರಾದ ನಂಜಪ್ಪ, ಗಿರಿಗೌಡ, ವಿ.ಎಚ್‌. ರಾಜು ಹಾಗೂ ಸುತ್ತಲಿನ ರೈತರು ಪಾಲ್ಗೊಂಡಿದ್ದರು.

ವಿವಿಧೆಡೆ ಭೇಟಿ

ಸಚಿವ ಕೃಷ್ಣ ಬೈರೇಗೌಡ ಹಾಗೂ ಅಧಿಕಾರಿಗಳು ಕೈಲಾಂಚ ಹೋಬಳಿಯ ಗೌಡಯ್ಯನ ದೊಡ್ಡಿಗೆ ಭೇಟಿ ನೀಡಿ ಕೃಷಿ ಯಂತ್ರಧಾರೆ ಕೇಂದ್ರದ ಕಾರ್ಯವೈಖರಿ ಹಾಗೂ ಕೈಲಾಂಚದಲ್ಲಿ ಕೃಷಿ ಭಾಗ್ಯ ಯೋಜನೆಯಡಿ ರಾಗಿ, ತೊಗರಿ ಹಾಗೂ ಹಿಪ್ಪುನೇರಳೆ ಬೆಳೆಗಳನ್ನು ವೀಕ್ಷಿಸಿದರು.

* ಮೊಬೈಲ್‌ ಆ್ಯಪ್‌ ಮೂಲಕ ಬೆಳೆ ಸಮೀಕ್ಷೆ ಕಾರ್ಯವು ಮಹತ್ವದ ಬದಲಾವಣೆ ತರಲಿದೆ. ಇದರಿಂದ ಕೃಷಿ ಚಟುವಟಿಕೆಗಳ ಸ್ಪಷ್ಟ ಚಿತ್ರಣ ಸಿಗಲಿದೆ

–ಕೃಷ್ಣ ಬೈರೇಗೌಡ, ಕೃಷಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.