ADVERTISEMENT

ಮೋಟಮ್ಮ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2015, 20:05 IST
Last Updated 4 ಅಕ್ಟೋಬರ್ 2015, 20:05 IST

ಬೆಂಗಳೂರು:  ತಮ್ಮಿಂದ ಬಲವಂತವಾಗಿ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು, ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯೆ ಮೋಟಮ್ಮ, ಅವರ ಪುತ್ರ ಪ್ರೀತಮ್ ಹಾಗೂ ಆಪ್ತ ಸಹಾಯಕ ಮಹೇಶ್ ವಿರುದ್ಧ ನಗರದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.

ಹೆಬ್ಬಾಳದ ನಿವಾಸಿಯಾಗಿರುವ ಅನಿತಾ ಸೆಪ್ಟೆಂಬರ್ 28ರಂದು ದೂರು ನೀಡಿದ್ದು, ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

‘ಮೇ 10ರಂದು ಮೋಟಮ್ಮ, ಅವರ ಪುತ್ರ ಹಾಗೂ ಆಪ್ತ ಸಹಾಯಕರು ನನ್ನನ್ನು ಸಂಜಯನಗರ ಪೊಲೀಸ್ ಠಾಣೆಗೆ ವಿಚಾರಣೆ ನೆಪದಲ್ಲಿ ಕರೆಸಿಕೊಂಡಿದ್ದರು. ಈ ವೇಳೆ ನಿನ್ನ ಪತಿ ಲಕ್ಷ್ಮೀಕಾಂತ್ ತಮಗೆ ₹ 30 ಲಕ್ಷ ನೀಡಬೇಕು ಎಂದು ಹೇಳಿದರು. ನಂತರ ತನ್ನಿಂದ ₹ 22 ಲಕ್ಷವನ್ನು ಬಲವಂತವಾಗಿ ಪಡೆದುಕೊಂಡರಲ್ಲದೆ, ತನ್ನ ಕಾರು ಜಪ್ತಿ ಮಾಡಿದ್ದಾರೆ’ ಎಂದು ಅನಿತಾ ದೂರಿನಲ್ಲಿ ತಿಳಿಸಿದ್ದಾರೆ.

ಸಂಚು: ಈ ಕುರಿತು ಪ್ರತಿಕ್ರಿಯಿಸಿದ ಮೋಟಮ್ಮ, ‘ನನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಸಚಿವ ಸ್ಥಾನಕ್ಕೆ ನನ್ನ ಹೆಸರು ಕೇಳಿ ಬರುತ್ತಿರುವುದರಿಂದ ಹೆಸರಿಗೆ ಮಸಿ ಬಳಿಯಲು ಈ ರೀತಿ ಸಂಚು ರೂಪಿಸಲಾಗಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ. ಅಲ್ಲದೆ, ದೂರುದಾರರ ಪರಿಚಯವೇ ನನಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.