ADVERTISEMENT

ಮೋಡ ಬಿತ್ತನೆ: ರೇಡಾರ್‌ ಸ್ಥಾಪನೆ ಇಂದು?

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2017, 19:30 IST
Last Updated 21 ಆಗಸ್ಟ್ 2017, 19:30 IST

ಗದಗ: ಮೋಡ ಬಿತ್ತನೆಗೆ ಸೋಮವಾರ ಬೆಂಗಳೂರಿನಲ್ಲಿ ಚಾಲನೆ ಸಿಕ್ಕಿದೆ. ಆದರೆ, ಗದುಗಿನಲ್ಲಿ ಸೋಮವಾರ ಸಂಜೆಯವರೆಗೆ ರೇಡಾರ್‌ ಕೇಂದ್ರ ಸ್ಥಾಪನೆಯಾಗಿಲ್ಲ.
‘ಗದಗ– ಹುಬ್ಬಳ್ಳಿ ರಸ್ತೆಯಲ್ಲಿರುವ ಕೈಗಾರಿಕಾ ವಸಾಹತು ಪ್ರದೇಶದಲ್ಲಿ, ರೇಡಾರ್‌ ಸ್ಥಾಪಿಸಲು ಸ್ಥಳ ನಿಗದಿಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಉಪಕರಣಗಳು ಮಂಗಳವಾರ ಬರುವ ಸಾಧ್ಯತೆ ಇದೆ. ಅಂದಿನಿಂದಲೇ ರೇಡಾರ್‌ ಕೇಂದ್ರ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ’ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಇಲ್ಲಿಂದ 200 ಕಿ.ಮೀ ಸುತ್ತಳತೆಯಲ್ಲಿ ಬರುವ ಹಾವೇರಿ, ಕೊಪ್ಪಳ, ಬಾಗಲಕೋಟೆ, ಧಾರವಾಡ, ಬಳ್ಳಾರಿ, ಬೆಳಗಾವಿ, ಉತ್ತರ ಕನ್ನಡ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಮಳೆ ಸುರಿಸಬಲ್ಲ ದಟ್ಟವಾದ ಮೋಡಗಳನ್ನು ಗುರುತಿಸಲಾಗುತ್ತದೆ. ಆ ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಮೋಡ ಬಿತ್ತನೆ ನಡೆಸಲು ಉದ್ದೇಶಿಸಲಾಗಿದೆ.

2003ರಲ್ಲಿ ‘ಪ್ರಾಜೆಕ್ಟ್‌ ವರುಣ’ ಹೆಸರಿನಲ್ಲಿ ರಾಜ್ಯದಲ್ಲಿ ಮೋಡ ಬಿತ್ತನೆ ನಡೆದಾಗ ಗದುಗಿನ ಜಿಲ್ಲಾಧಿಕಾರಿ ಕಟ್ಟಡದಲ್ಲಿ ರೇಡಾರ್‌ ಸ್ಥಾಪಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.