ADVERTISEMENT

ಮೋಹನ ಮುರಲಿಗೆ ಓಗೊಟ್ಟ ‘ಜೀವಯಾನ’

ಚ.ಹ.ರಘುನಾಥ
Published 31 ಜನವರಿ 2017, 19:30 IST
Last Updated 31 ಜನವರಿ 2017, 19:30 IST
ಮೋಹನ ಮುರಲಿಗೆ ಓಗೊಟ್ಟ ‘ಜೀವಯಾನ’
ಮೋಹನ ಮುರಲಿಗೆ ಓಗೊಟ್ಟ ‘ಜೀವಯಾನ’   

ಬೆಂಗಳೂರು: ‘ಮಾನಿನಿಯ ಮೊಲೆ ಹಿಡಿದ ಹಸ್ತಗಳಿಂದ / ನಿನ್ನ ಅಡಿ ಮುಟ್ಟಿರುವೆ / ಆ ಪುಲಕ ನಿನ್ನಡಿಯ ಮಿಡುಕಿಸಲಿ’. ಕವಿ ಎಸ್. ಮಂಜುನಾಥ್ ಅವರ ‘ಭಕ್ತಿ’ ಕವಿತೆಯ ಸಾಲುಗಳಿವು. ಇಂದ್ರಿಯ ಪುಲಕದ ಮೂಲಕ ದೇವರನ್ನು ಮಿಡುಕಿಸಲು ಹಂಬಲಿಸಿದ ಕವಿ, ತನ್ನ ಕಾವ್ಯದ ಮೂಲಕ ಕಾವ್ಯರಸಿಕರಲ್ಲಿ ಪುಲಕವನ್ನೂ ಉತ್ಸಾಹವನ್ನೂ ಉಂಟು ಮಾಡಿದವರು. ಸಮಕಾಲೀನ ಕನ್ನಡ ಕಾವ್ಯಕ್ಕೆ ಹೊಸ ಕಸುವು ತಂದುಕೊಟ್ಟ ಈ ಕವಿ ಈಗ ನೆನಪು.

‘ಜೀವಯಾನ’ ಮಂಜುನಾಥ್ ಅವರಿಗೆ ಹೆಸರು ತಂದುಕೊಟ್ಟ ಪ್ರಸಿದ್ಧ ಕವನಸಂಕಲನ. ‘ಜೀವಯಾನ’ ಸಂಕಲನದ ಬಗ್ಗೆ ಸ್ವತಃ ಮಂಜುನಾಥ್‌ ವಿಶೇಷ ಮೋಹ ಹೊಂದಿದ್ದರು. ‘ಜೀವಯಾನದ ಮಂಜುನಾಥ್’ ಹೆಸರಿನಲ್ಲಿ ಅವರು ಕೆಲವು ಕಾಲ ಸಾಹಿತ್ಯ ರಚನೆ ಮಾಡಿದ್ದರು. ‘ಜೀವಯಾನದ ಉದ್ದಕ್ಕೂ ಒಂದೆರಡಲ್ಲ, ಅನೇಕ ಸಾಲುಗಳು ನಮ್ಮನ್ನು ನೀರಿನ ಸುಳಿ ಸೆಳೆದುಕೊಳ್ಳುವಂತೆ ಸೆಳೆದುಕೊಳ್ಳುತ್ತವೆ. ಅವು ನಮ್ಮೊಳಗೇ ಇಳಿದು ಅಲ್ಲಾಡಿಸುತ್ತವೆ. ಇದು ಕಮ್ಮಿ ಕೃಪೆ ಅಲ್ಲ. ಬಿಡಿಬಿಡಿಯಾದ ಈ ಕವಿತೆಗಳು ಇಡಿಯಾಗಿ ಓದಿ ಮುಗಿಸಿದ ಮೇಲೆ ಜೀವಯಾನದ ಅಂಗಾಂಗಗಳಂತೆ ಒಂದೇ ಜೀವ ಆಗುತ್ತವೆ’ ಎನ್ನುವುದು ದೇವನೂರ ಮಹಾದೇವರ ಮೆಚ್ಚುಗೆಯ ಮಾತು.

ಮಂಜುನಾಥ್‌ ಕಳೆದ ನಾಲ್ಕು ದಶಕಗಳಿಂದ ಕವಿತೆಯನ್ನು ವ್ರತದಂತೆ ಆಚರಿಸಿದವರು. ಕಾವ್ಯ ಅವರಿಗೆ ಅಭಿವ್ಯಕ್ತಿಯ ಮಾಧ್ಯಮವಷ್ಟೇ ಆಗಿರಲಿಲ್ಲ; ಅವರ ಮಾತು–ಬದುಕನ್ನೂ ಕಾವ್ಯ ಆವರಿಸಿಕೊಂಡಿತ್ತು. ‘ಎಲ್ಲವನ್ನೂ ಒಳಗೊಳ್ಳುವ, ಸಹಿಸಿಕೊಳ್ಳುವ, ಹೃದ್ಗತ ಮಾಡಿಕೊಳ್ಳುವ ಅರಿವು ಕಾವ್ಯದಿಂದ ದೊರೆಯುತ್ತದೆ’ ಎನ್ನುವುದು ಅವರ ನಂಬಿಕೆಯಾಗಿತ್ತು. ಈ ಅರಿವನ್ನು ಹೊಂದುವ ನಿಟ್ಟಿನಲ್ಲಿ ಕಾವ್ಯದಲ್ಲಿ ಅಧ್ಯಾತ್ಮವನ್ನು ಅದ್ಭುತವಾಗಿ ತಂದ ಪ್ರತಿಭೆ ಅವರದು. ಅವರ ಕಾವ್ಯ–ಅಧ್ಯಾತ್ಮ ಬದುಕಿಗೆ ವಿಮುಖವಾಗಿರಲಿಲ್ಲ, ಅದು ಬದುಕಿನ ಚೆಲುವನ್ನು ಹೆಚ್ಚಿಸುವ ಔಷಧಿ ಗುಣದ್ದಾಗಿತ್ತು.

ADVERTISEMENT

ಕವಿ ಪು.ತಿ. ನರಸಿಂಹಾಚಾರ್ ಅವರೊಂದಿಗೆ ಮಂಜುನಾಥ್ ಅವರದು ಸಲುಗೆಯ ಒಡನಾಟ. ಈ ಸಖ್ಯದ ಕಾರಣದಿಂದಲೇ ಪುತಿನ ಅವರ ಕಾವ್ಯದ ಭಕ್ತಿಯ ಭಾವ, ಅಧ್ಯಾತ್ಮದ ಬೆಡಗು ಇವರ ಕಾವ್ಯದಲ್ಲೂ ಇತ್ತು. ಆಧುನಿಕ ಸಂದರ್ಭದಲ್ಲಿ ಮಂಜುನಾಥ್‌ರಂತೆ ಕಾವ್ಯದ ಮೂಲಕ ಭಕ್ತಿಯನ್ನು ಅನುಸಂಧಾನ ಮಾಡಿದ ಕವಿಗಳು ವಿರಳ. ಈ ಕಾಲದ ನುಡಿಗಟ್ಟು ಅವರ ಕಾವ್ಯದ ವಿಶೇಷ.

ಮಂಜುನಾಥ್ ಅವರದು ಓದುಗರನ್ನು ಬಸವಳಿಸುವ ಕಾವ್ಯವಲ್ಲ. ಸುಲಲಿತ ಶಿಲ್ಪ ಹಾಗೂ ಪ್ರಸನ್ನ ಗುಣಗಳು ಅವರ ಕಾವ್ಯದ ಶಕ್ತಿಯಾಗಿದ್ದವು. ಸಂಕೀರ್ಣ ಸಂಗತಿಗಳನ್ನು ಸರಳವಾಗಿ ದಾಟಿಸುವ ಕಸುಬುದಾರಿಕೆ ಅವರ ಕಾವ್ಯದಲ್ಲಿತ್ತು. ‘ಮಾಂಸದೊಳಗೂ ಧಾನ್ಯದೊಳಗೂ / ತರಕಾರಿಯೊಳಗೂ ಇರುವುದೊಂದೇ ರುಚಿ / ಭೂಮಿಯದು’ ಎನ್ನುವ ಸಾಲುಗಳನ್ನು, ಅವರ ಕಾವ್ಯದ ಪ್ರಣಾಳಿಕೆಯಂತೆಯೂ ಓದಿಕೊಳ್ಳಬಹುದು.

1962ರಲ್ಲಿ ಶಿವಮೊಗ್ಗ ಜಿಲ್ಲೆಯ ಜೋಗದಲ್ಲಿ ಹುಟ್ಟಿದ ಮಂಜುನಾಥ್, ಎಂಟು ಮಕ್ಕಳ ಕುಟುಂಬದಲ್ಲಿ ನಾಲ್ಕನೆಯವರು. ಜೋಗದ ಜಲಧಾರೆಯ ಬಿಸುಪು ಹಾಗೂ ಜೀವಂತಿಕೆಯನ್ನು ಅವರ ಕಾವ್ಯದಲ್ಲೂ ಕಾಣಬಹುದು. ಹಾಸನ, ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಅವರು ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಕೆ.ಆರ್. ನಗರದಲ್ಲಿ ‘ಬಿಎಸ್ಎನ್ಎಲ್’ ಕಚೇರಿಯಲ್ಲಿ ಗ್ರಾಹಕ ಸೇವಾಕೇಂದ್ರದ ಅಧಿಕಾರಿಯಾಗಿದ್ದರು. ನೌಕರಿಯ ಯಾಂತ್ರಿಕತೆಯನ್ನು ಕಾವ್ಯದ ಮೂಲಕ ಮೀರಹೊರಟ ಅವರು, ಕವಿತೆಯಲ್ಲದೆ ಬೇರೇನನ್ನೂ ಒಲ್ಲೆ ಎನ್ನುವಷ್ಟು ಕಡು ಕಾವ್ಯ­ಪ್ರೇಮಿಯಾಗಿದ್ದರು. ‘ಕವಿ’ ಎಂದು ಗುರ್ತಿಸಿಕೊಳ್ಳುವುದು ಅವರಿಗೆ ಆತ್ಮಗೌರವದ ಸಂಗತಿಯಾಗಿತ್ತು.

ತಮ್ಮ ಸಂಪರ್ಕಕ್ಕೆ ಬಂದವರೆಲ್ಲರಿಗೂ ಕಾವ್ಯದ ಸಂಭ್ರಮವನ್ನು ಹಂಚುತ್ತಿದ್ದ ಮಂಜುನಾಥ್್, ಕಾವ್ಯದ ಹೆಸರಿನಲ್ಲಿ ನಡೆಯುವ ದೊಂಬರಾಟದ ಕಟು ವಿಮರ್ಶಕರೂ ಆಗಿದ್ದರು. ಆ ಕಾರಣದಿಂದಲೇ  ಅವರು ಬಹುಮುಖ್ಯ ಕವಿಯಾಗಿದ್ದೂ, ಉತ್ಸವ ಮೂರ್ತಿಯಾಗುವ ಬಹುತೇಕ ಅವಕಾಶಗಳಿಂದ ವಂಚಿತರಾಗಿದ್ದರು. ಕಾವ್ಯ ಅವರ ಪಾಲಿಗೆ ಅಂತರಂಗ ಶುದ್ಧಿಯ ಪ್ರತೀಕವಾಗಿತ್ತು. ಮಾನವೀಯತೆಯನ್ನು ಉದ್ದೀಪಿಸುವ ಸ್ಪರ್ಶಮಣಿಯಾಗಿತ್ತು.

‘ಜೀವಯಾನ’, ‘ಹಕ್ಕಿಪಲ್ಟಿ’, ‘ಮೌನದ ಕಣಿವೆ’, ‘ಕಲ್ಲ ಪಾರಿವಾಳಗಳ ಬೇಟ’, ‘ಸುಮ್ಮನಿರುವ ಸುಮ್ಮಾನ’, ‘ಮಗಳು ಸೃಜಿಸಿದ ಸಮುದ್ರ’ ಅವರ ಪ್ರಮುಖ ಕವನಸಂಕಲನಗಳು. ಉತ್ತಮ ಅನುವಾದಕರೂ ಆಗಿದ್ದ ಅವರು ತಾವೋ ಪದ್ಯಗಳನ್ನು ಕನ್ನಡಕ್ಕೆ ತಂದಿದ್ದಾರೆ. ‘ಮುದ್ದಣ ಕಾವ್ಯ ಪ್ರಶಸ್ತಿ’, ‘ಪುತಿನ ಕಾವ್ಯ ಪ್ರಶಸ್ತಿ’ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಅವರ ಕೃತಿಗಳಿಗೆ ಸಂದಿದ್ದವು.

ಜ.31 ವರಕವಿ ಬೇಂದ್ರೆ  ಜನ್ಮದಿನ. ಈ ದಿನವನ್ನು ಕನ್ನಡ ಸಾಂಸ್ಕೃತಿಕ ಲೋಕ ‘ಕವಿದಿನ’ ಎಂದು ಆಚರಿಸುತ್ತದೆ. ಮಹಾನ್‌ ಕವಿಯೊಬ್ಬನ ಸ್ಮರಣೆಯ ದಿನ, ಮತ್ತೊಬ್ಬ ಕವಿ ಕಾಲನ ಕರೆಗೆ ಓಗೊಟ್ಟಿರುವುದು ಕಾಕತಾಳೀಯವೂ ಹೌದು, ಕಾವ್ಯನ್ಯಾಯವೂ ಹೌದು.

ಮಂಜುನಾಥ್  ಇನ್ನಿಲ್ಲ
ಮೈಸೂರು:
ಕವಿ ಎಸ್.ಮಂಜುನಾಥ್ (57) ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.

ಮೃತರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ. ಅಂತ್ಯಸಂಸ್ಕಾರ ಬುಧವಾರ ಮಧ್ಯಾಹ್ನ 1 ಗಂಟೆಗೆ ಕೆ.ಆರ್.ನಗರದ ರುದ್ರಭೂಮಿಯಲ್ಲಿ ನಡೆಯಲಿದೆ. ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು, ಮೂರು ದಿನಗಳ ಹಿಂದೆ ಅಪೊಲೊ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.