ADVERTISEMENT

ಮೌಢ್ಯ ಪ್ರಚೋದನೆಗೆ ಜೈಲು!

ಕಾನೂನು ಪರಿಶೀಲನಾ ಸಮಿತಿಗೆ ಕರಡು ಮಸೂದೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2015, 19:38 IST
Last Updated 26 ನವೆಂಬರ್ 2015, 19:38 IST

ಬೆಂಗಳೂರು: ಮೂಢನಂಬಿಕೆ ಆಚರಣೆಗಳನ್ನು ಉತ್ತೇಜಿಸುವ, ಪ್ರಚಾರ ಮಾಡುವ ಮತ್ತು ಆಚರಿಸುವ ಯಾವುದೇ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸುವ ಮಸೂದೆಯನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದೆ.

ಕರ್ನಾಟಕ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಮತ್ತು ನಿರ್ಮೂಲನೆ ಕರಡು ಮಸೂದೆ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಈ ಅಧಿವೇಶನದಲ್ಲೇ ಮಂಡಿಸುವ ಸಲುವಾಗಿ ಸಮಾಜ ಕಲ್ಯಾಣ ಇಲಾಖೆ ಮಸೂದೆ ಕರಡನ್ನು ಸಂಪುಟ ಸಭೆ ಮುಂದೆ ಮಂಡಿಸಿತ್ತು. ಆದರೆ ಇದನ್ನು ಕಾನೂನು ಇಲಾಖೆ ಮೂಲಕ ಸಂಪುಟ ಸಭೆಗೆ ತರದಿದ್ದ ಕಾರಣ, ಕಾನೂನು ಇಲಾಖೆಯ ಪರಿಶೀಲನಾ ಸಮಿತಿಗೆ ಒಪ್ಪಿಸಲು ಸಂಪುಟ ಸಭೆ ತೀರ್ಮಾನಿಸಿದೆ.

ಇದರಿಂದ ಈ ಅಧಿವೇಶನದಲ್ಲಿಯೇ ಮಸೂದೆಯನ್ನು ಮಂಡಿಸಿ, ಒಪ್ಪಿಗೆ ಪಡೆಯಲಾಗುತ್ತದೆ ಎನ್ನುವ ಊಹಾಪೋಹಗಳಿಗೆ ತೆರೆಬಿದ್ದಂತೆ ಆಗಿದೆ.
ಪರಿಶೀಲನಾ ಸಮಿತಿಯ ಅಧ್ಯಕ್ಷರೂ ಆದ ಕಾನೂನು ಸಚಿವ ಟಿ.ಬಿ.ಜಯಚಂದ್ರ  ಅವರು ಪರಾಮರ್ಶೆ ನಡೆಸಿದ ನಂತರವೇ ಪುನಃ ಈ ಕರಡು ಮಸೂದೆಯನ್ನು ಸಂಪುಟ ಸಭೆಯ ಮುಂದೆ ತರುವ ಸಾಧ್ಯತೆ ಇದೆ.
*
ಕರಡು ಮಸೂದೆಯಲ್ಲಿ ಏನಿದೆ?
* ಮೂಢನಂಬಿಕೆ ಪ್ರತಿಬಂಧಿಸುವ, ನಿರ್ಮೂಲನೆ ಮಾಡುವ ಮತ್ತು ನರಬಲಿ ನಿಷೇಧಿಸುವ ಹಾಗೂ ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶ

* ರಾಜ್ಯ ಮಟ್ಟದಲ್ಲಿ ಮೂಢನಂಬಿಕೆ ವಿರೋಧಿ ಪ್ರಾಧಿಕಾರ ಮತ್ತು ಜಿಲ್ಲಾ ಮಟ್ಟದಲ್ಲಿ ಮೂಢನಂಬಿಕೆ ಆಚರಣೆ ತಡೆ  ಜಾಗೃತಿ ಸಮಿತಿಗಳ ರಚನೆ

* ಪ್ರಾಧಿಕಾರಕ್ಕೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷರು. ಜಿಲ್ಲಾ ಮಟ್ಟದ ಸಮಿತಿಗಳಿಗೆ ಮ್ಯಾಜಿಸ್ಟ್ರೇಟ್‌ ದರ್ಜೆಗಿಂತ ಕಡಿಮೆ ಇಲ್ಲದ ಅಧಿಕಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸುವುದು

* ಆಚರಣೆಗಳಿಂದ ನಷ್ಟಕ್ಕೆ ಒಳಗಾಗುವವರಿಗೆ ಪರಿಹಾರ ನೀಡಲು ನಿಧಿ ಸ್ಥಾಪನೆ

* ಮೂಢನಂಬಿಕೆಗೆ ಉತ್ತೇಜನ ನೀಡುವವರಿಗೆ ಕನಿಷ್ಠ ಒಂದು ವರ್ಷ ಹಾಗೂ ಗರಿಷ್ಠ ಐದು ವರ್ಷದವರೆಗೆ  ಜೈಲು ಶಿಕ್ಷೆ, ₹25 ಸಾವಿರದಿಂದ 1 ಲಕ್ಷ ವರೆಗೆ ದಂಡ ವಿಧಿಸಲು ಅವಕಾಶ.

* ಹೊಸ ವ್ಯವಸ್ಥೆ ಜಾರಿಗೆ ₹1.5 ಕೋಟಿ ವೆಚ್ಚದ ಅಂದಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT