ADVERTISEMENT

ಮ್ಯಾಜಿಸ್ಟಿರಿಯಲ್ ತನಿಖೆ ಆರಂಭ

ಕೂಡಗಿ ಗೋಲಿಬಾರ್ ಪ್ರಕರಣ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 19:30 IST
Last Updated 28 ಜುಲೈ 2014, 19:30 IST

ವಿಜಾಪುರ: ಕೂಡಗಿ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿ­ದಂತೆ ರಾಜ್ಯ ಸರ್ಕಾರದ ನಿರ್ದೇಶನದಂತೆ ಮ್ಯಾಜಿಸ್ಟಿರಿಯಲ್ ತನಿಖೆಗೆ ಸೋಮವಾರ ಚಾಲನೆ ನೀಡಲಾಯಿತು.

ಜಿಲ್ಲಾಧಿಕಾರಿಗಳ ನ್ಯಾಯಾಲಯ­ದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್‌ ಅಧಿಕಾರಿಗಳ ವಿಚಾರಣೆ ನಡೆಸಿ, ಲಿಖಿತ ಹೇಳಿಕೆ ಪಡೆಯಲಾಯಿತು ಎಂದು ಜಿಲ್ಲಾಧಿ­ಕಾರಿ ಡಿ.ರಂದೀಪ್‌ ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಘಟನೆಯಲ್ಲಿ ಗುಂಡೇಟು ತಗುಲಿ ತೀವ್ರವಾಗಿ ಗಾಯಗೊಂಡು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುತ್ತಗಿಯ ಚಂದಪ್ಪ ಹಾಲಪ್ಪ ಶೇಡಿ, ಮಸೂತಿಯ ಸದಾಶಿವ ಮಲ್ಲಪ್ಪ ಗಣಾಚಾರಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲದ ಕಾರಣ ಶನಿವಾರವೇ ಅಲ್ಲಿಗೆ ತೆರಳಿ ಹೇಳಿಕೆ ಪಡೆಯಲಾಗಿದೆ. ಜತೆಗೆ ವಿಡಿಯೊ ಚಿತ್ರೀಕರಣ ಸಹ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರ ಹೇಳಿಕೆಗಳನ್ನು ಪಡೆಯಲಾಗಿದೆ ಎಂದು ಹೇಳಿದರು.

‘ಕಂದಾಯ, ಪೊಲೀಸ್ ಇಲಾಖೆ, ಎನ್‌ಟಿಪಿಸಿ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಲಾಗಿದೆ. ಒಟ್ಟು 35 ರಿಂದ 40 ಜನರ ವಿಚಾರಣೆ ನಡೆಸಲಾಗುವುದು. ಗುಂಡು ತಗುಲಿದವರಿಗೆ, ಗಾಯಾಳು­ಗಳಿಗೆ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರಿಂದ ಜುಲೈ 30 ರಂದು  ಹೇಳಿಕೆ ಪಡೆಯ­ಲಾಗುವುದು. ಎನ್‌ಟಿಪಿಸಿ ಅಧಿಕಾರಿಗಳ ಹೇಳಿಕೆ ಪಡೆದ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ರೈತ ಮುಖಂಡರನ್ನು ಭೇಟಿಯಾಗಿ ಹೇಳಿಕೆ ಪಡೆಯಲಾಗುವುದು ಎಂದು ಹೇಳಿದರು.

ನಿಗದಿತ ಸಮಯದೊಳಗೆ ವಿಚಾರಣೆ ಪೂರ್ಣಗೊಳ್ಳದಿದ್ದರೆ ವಿಸ್ತರಿಸ­ಲಾಗು­ವುದು. ಆಗಸ್ಟ್‌ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.