ADVERTISEMENT

ಯುವಕನ ಕೈಹಿಡಿದ ಮೊಲ ಸಾಕಣೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 7:23 IST
Last Updated 24 ಸೆಪ್ಟೆಂಬರ್ 2017, 7:23 IST
ಯುವಕನ ಕೈಹಿಡಿದ ಮೊಲ ಸಾಕಣೆ
ಯುವಕನ ಕೈಹಿಡಿದ ಮೊಲ ಸಾಕಣೆ   

–ಶಿ.ಗು.ಹಿರೇಮಠ ಅಮೀನಗಡ

*

ಅಮೀನಗಡ ಸಮೀಪದ ಕುಣಿಬೆಂಚಿ ಗ್ರಾಮದ ಎಂ.ಎಬಿ.ಎಡ್ ಓದಿದ ಯುವಕ ನಾಗನಗೌಡ ನೀಲನಗೌಡ ಪಾಟೀಲ ಶಿಕ್ಷಕನಾಗಬೇಕೆಂಬ ಮಹತ್ವಕಾಂಕ್ಷೆಯಿಂದ ಶ್ರಮಪಟ್ಟು ಅಧ್ಯಯನ ಮಾಡಿ ಸಿ.ಇ.ಟಿ ಪರೀಕ್ಷೆ ಬರೆದರು. ಹೀಗೆ ಅನೇಕ ಸಲ ಸಿ.ಇ.ಟಿ ಬರೆದರೂ ಕಡಿಮೆ ಅಂಕ ಗಳಿಸಿ ಶಿಕ್ಷಕನಾಗುವ ಅವರ ಕನಸು ಈಡೇರಲಿಲ್ಲ. ಆದರೆ ಸ್ವಯಂ ಉದ್ಯೋಗ ಆತನ ಕೈಹಿಡಿದಿದೆ.

ADVERTISEMENT

12 ಎಕರೆ ಹೊಲ ತನಗಿದ್ದರೂ ನೀರಿಲ್ಲದೇ ಚಿಂತೆ ಕಾಡಿತ್ತು. ಆದರೆ ಉತ್ಸಾಹ ಕಳೆದುಕೊಳ್ಳಲಿಲ್ಲ. ಸ್ವಯಂ ಉದ್ಯೋಗ ಮಾಡಬೇಕೆಂಬ ಉದ್ದೇಶದಿಂದ ಅವರಿವರನ್ನು ಸಂಪರ್ಕಿಸಿದರು. ಕೊನೆಗೆ ಮೊಲ ಸಾಕಣೆ ಮಾಡಲು ತೀರ್ಮಾನಿಸಿದರು. ನಾಗನಗೌಡ 8 ವರ್ಷದಿಂದ ಮೊಲ ಸಾಕಾಣಿಕೆ ಮಾಡುತ್ತಿದ್ದು ಬದುಕು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

‘ಸದ್ಯ ಅವನ ಮೊಲ ಸಾಕಾಣಿಕೆ ಕೇಂದ್ರದಲ್ಲಿ 600 ಮೊಲಗಳಿವೆ. ಒಂದು ಮೊಲ 6 ರಿಂದ 12 ಮರಿಗಳನ್ನು ಹಾಕುತ್ತವೆ. ವರ್ಷಕ್ಕೆ ಐದಾರು ಬಾರಿ ಮರಿಹಾಕುತ್ತವೆ. ಒಂದು ಯೂನಿಟ್‌ನಲ್ಲಿ ಏಳು ಹೆಣ್ಣು ಹಾಗೂ ಮೂರು ಗಂಡು ಮೊಲಗಳು ಸೇರಿ ಒಟ್ಟು ಹತ್ತು ಮೊಲಗಳು ಇರುತ್ತವೆ. ಮೊಲ ಸಾಕಲು ಮೊದಲು ಬೇಕಿರುವುದು ಸ್ವಚ್ಛತೆ ಹಾಗೂ ಶುದ್ಧತೆ. ಸಾಕಾಣಿಕೆ ಕೇಂದ್ರವನ್ನು ಪ್ರತಿ ನಿತ್ಯ ನಾಲ್ಕು ಬಾರಿ ಸ್ವಚ್ಛಗೊಳಿಸಲಾಗುವುದು’ ಎನ್ನುತ್ತಾರೆ ನಾಗನಗೌಡ.

ಮೊಲಗಳಿಗೆ ಕದುರಿಮೆಂತ್ಯ, ಹೆಡ್ಜಲೂಸರ್, ಸೆಣಬು, ಮೆಕ್ಕೆಜೋಳ, ಗರಕಿ, ರಾಗಿಹುಲ್ಲು ಆಹಾರವನ್ನಾಗಿ ನೀಡಲಾಗುತ್ತದೆ. ಮೊಳೆತ ಕಾಳುಗಳನ್ನೂ ನೀಡಿದರೆ ಸಂತಾನೋತ್ಪತ್ತಿಗೆ ತುಂಬಾ ಅನುಕೂಲ. ಪ್ರತಿ ತಿಂಗಳಿಗೆ 700 ರಿಂದ 800 ಮೊಲದ ಮರಿಗಳನ್ನು ಮಾರಾಟ ಮಾಡಲಾಗುತ್ತಿದೆ. ಮೊಲಗಳು ಮರಿಹಾಕಿದ 120ನೇ ದಿನಕ್ಕೆ ಮಾರಾಟ ಮಾಡಲು ಸೂಕ್ತ. ಒಂದು ಮೊಲದ ಮರಿ 2 ಕೆ.ಜಿ ತೂಕ ಬರುತ್ತಿದ್ದು ಒಂದು ಕೆ.ಜಿಗೆ ₹ 300ರಂತೆ ಮಾರಾಟಮಾಡುತ್ತೇವೆ ಎನ್ನುತ್ತಾರೆ.

ಇವರ ಮೊಲಗಳು ಬಾಗಲಕೋಟ ತೋಟಗಾರಿಕೆ ವಿಜ್ಞಾನ ಮೇಳ, ಚಾಲಿಕ್ಯ ಉತ್ಸವ, ಭೀಮನಗುಡಿ ಉತ್ಸವದಲ್ಲಿ ಪ್ರದರ್ಶಗೊಂಡಿವೆ. ಕೋಣಮ್ಮದೇವಿ ಮೊಲ ಸಾಕಣೆ ಕೇಂದ್ರದಲ್ಲಿ ಒಟ್ಟು 6 ತಳಿ ಮೊಲಗಳಿವೆ. ನ್ಯೂಜಿಲ್ಯಾಂಡ್ ವೈಟ್, ಕ್ಯಾಲಿಫೋರ್ನಿಯಾ, ಸೋವಿಯತ್‌ ಚಿಂಚಲ, ರಷಿಯನ್‌ ಜಿಗ್ರೆಂಟ್‌, ಡಚ್ ಹೀಗೆ ನಾನಾ ತಳಿಗಳಿವೆ. ಕೇವಲ ಮಾಂಸಕ್ಕಾಗಿ ಅಲ್ಲದೇ ಪ್ರದರ್ಶನ ಹಾಗೂ ಸಾಕಣೆ ಕುರಿತು ಯುವಕರಿಗೆ ಮಾರ್ಗದರ್ಶನ ಮಾಡಲಾಗುತ್ತಿದೆ. ತುಪ್ಪಳ ಮತ್ತು ಚರ್ಮದಿಂದ ತುಂಬಾ ಲಾಭವಿದೆ.

ಮೊಲ ಹಾಕು ಹಿಕ್ಕಿಯಿಂದ ಒಂದು ತಿಮಗಳಿಗೆ ಒಂದು ಕ್ವಿಂಟಲ್ ಗೊಬ್ಬರ ಸಿಗುತ್ತದೆ. ಒಂದು ಕ್ವಿಂಟಲ್ ಗೊಬ್ಬರದಿಂದ ₹ 5 ಸಾವಿರ ದೊರೆಯುತ್ತದೆ. ಮೊಲದ ರಕ್ಷಣೆಗೆ ಬೇಕಾಗುವ ಪಂಜರವನ್ನು (ಜಾಲರಿ) ಇವರೇ ಸಿದ್ಧಪಡಿಸುತ್ತಾರೆ. ಒಂದು ಜಾಲರಿಗೆ 18 ಸಾವಿರರಂತೆ ಮಾರಾಟ ಮಾಡುತ್ತಾರೆ. ಒಂದು ಯೂನಿಟ್‌ನಲ್ಲಿ ಹತ್ತು ಮೊಲಗಳನ್ನು ಸಾಕಬಹುದು.

ಬೇಸಿಗೆ ಕಾಲದಲ್ಲಿ ಬಹಳ ಮುತುವರ್ಜಿ ವಹಿಸಬೇಕು. ಆದಷ್ಟೂ ವಾತಾವರಣ ತಂಪು ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಮೊಲಗಳಿಗೆ ನೆಗಡಿ. ಶೀತ, ಅತಿಸಾರ, ಕಜ್ಜಿ ರೋಗಗಳು ಸಾಮಾನ್ಯ. ರೋಗಗಳನ್ನು ಗುಣಪಡಿಸಲು ಔಷಧಿ ಮತ್ತು ಇನ್ನಿತರ ಕಿಟ್‌ಗಳು ಇಟ್ಟುಕೊಂಡಿರುತ್ತಾರೆ. ಪದವಿ ಮತ್ತ ಸ್ನಾತಕೋತ್ತ ಪದವಿ ಪೂರೈಸಿ ಕೆಲಸಕ್ಕಾಗಿ ಅಲೆಯುವ ಎಷ್ಟೋ ಯುವಕರಿಗೆ ಯುವಕ ನಾಗನಗೌಡ ಆದರ್ಶವಾಗಿ ನಿಲ್ಲತ್ತಾರೆ. ನಾಗನಗೌಡ ಸಂಪರ್ಕಕ್ಕೆ 9880855594.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.