ADVERTISEMENT

ರಕ್ಷಣೆ ನೀಡಲು ಕುಲಸಚಿವರ ಮನವಿ’!

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಸೂಪರಿಂಟೆಂಡೆಂಟ್‌ಎಚ್‌.ಎಂ. ಸೋಮನಾಥ ಅವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ವಿ.ವಿ ಕುಲಸಚಿವ ಡಿ. ಪಾಂಡುರಂಗಬಾಬು ಕಮಲಾಪುರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ.

‘ವಿಶ್ವವಿದ್ಯಾಲಯದಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ದುರ್ಬಳಕೆ ಮತ್ತು ಭ್ರಷ್ಟಾಚಾರ ಕುರಿತು ರಾಜ್ಯಪಾಲರಿಗೆ ತಿಳಿಸಿದ್ದರಿಂದ ನನಗೆ ಮಾನಸಿಕ ಕಿರುಕುಳ, ಚಿತ್ರಹಿಂಸೆ ನೀಡಲಾಗುತ್ತಿದೆ. ನನ್ನ ಕುಟುಂಬದಲ್ಲಿ ಏನೇ ಅನಾಹುತ ಸಂಭವಿಸಿದರೂ ಅದಕ್ಕೆ ವಿ.ವಿ ಹಿರಿಯ ಅಧಿಕಾರಿಗಳೇ ಹೊಣೆ’ ಎಂದು ಸೋಮನಾಥ ದೂರಿದ್ದರು. ಅವರು ಈ ಸಂಬಂಧ ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಅವರಿಗೆ ಭಾನುವಾರ ಇಮೇಲ್‌ ಮೂಲಕ ದೂರು ಸಲ್ಲಿಸಿದ್ದರು.

‘ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸೋಮನಾಥ್‌ ಪತ್ರಿಕೆಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಹಾಗಾಗಿ ಅವರಿಗೆ ಸೂಕ್ತ ರಕ್ಷಣೆ ಕೊಡಬೇಕೆಂದು ಠಾಣೆಗೆ ಮನವಿ ಸಲ್ಲಿಸಲಾಗಿದೆ’ ಎಂದು ಪಾಂಡುರಂಗಬಾಬು ಬುಧವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಸೋಮನಾಥ ಅವರಿಗೆ ರಕ್ಷಣೆ ಒದಗಿಸಬೇಕೆಂದು ಕುಲಸಚಿವರು ಮನವಿ ಸಲ್ಲಿಸಿದ್ದಾರೆ ಎಂದು ಸಬ್‌ಇನ್‌ಸ್ಪೆಕ್ಟರ್‌ ಭೀಮನಗೌಡ  ಖಚಿತಪಡಿಸಿದರು.
‘ಸೋಮನಾಥ ಅವರನ್ನು ಭೇಟಿಯಾಗಿ, ಆತ್ಮಹತ್ಯೆ ಮಾಡಿಕೊಳ್ಳದಂತೆ ತಿಳಿಹೇಳಲಾಗಿದೆ. ಈ ಕುರಿತು ಲಿಖಿತ ರೂಪದಲ್ಲಿ ಬರೆದು ಕೊಡುವಂತೆ ಸೂಚಿಸಲಾಗಿದೆ. ಏನೇ ಭಿನ್ನಾಭಿಪ್ರಾಯಗಳಿದ್ದರೂ ಪರಸ್ಪರ ಕುಳಿತುಕೊಂಡು ಬಗೆಹರಿಸಿಕೊಳ್ಳುವಂತೆ ಸಲಹೆ ಮಾಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.