ADVERTISEMENT

ರಾಘವೇಶ್ವರರ ತಪಾಸಣೆಗೆ ಹೈಕೋರ್ಟ್‌ ತಡೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 19:30 IST
Last Updated 20 ಅಕ್ಟೋಬರ್ 2014, 19:30 IST

ಬೆಂಗಳೂರು: ಅತ್ಯಾಚಾರದ ಆರೋಪ ಎದುರಿಸು­ತ್ತಿ­­ರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ವೈದ್ಯಕೀಯ ಪರೀಕ್ಷೆಗೆ ನ್ಯಾಯ­ಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಹೈಕೋರ್ಟ್‌ ಏಕಸದಸ್ಯ ಪೀಠ ಸೋಮವಾರ ಮಧ್ಯಾಂತರ ತಡೆ ನೀಡಿದೆ.

‘ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಶ್ರೀಗಳನ್ನು ವೈದ್ಯಕೀಯ ಪರೀ­ಕ್ಷೆಗೆ ಒಳಪಡಿಸಲು ಸಿಐಡಿ ಪೊಲೀಸರು ನಿರ್ಧರಿಸಿ­ದ್ದಾರೆ. ಈ ಸಂಬಂಧ ಅವರಿಗೆ ನೋಟಿಸ್‌ ನೀಡಲಾ­ಗಿದ್ದು, ಮಂಗಳವಾರ (ಅ.21) ಬೆಳಿಗ್ಗೆ 9 ಗಂಟೆ 10 ನಿಮಿಷಕ್ಕೆ ಖಾಲಿ ಹೊಟ್ಟೆಯಲ್ಲಿ ಬೆಂಗಳೂರಿನ ವಿಕ್ಟೋ­ರಿಯಾ ಆಸ್ಪತ್ರೆಗೆ ಹಾಜರಾಗು­ವಂತೆ ಸೂಚಿಸಲಾಗಿದೆ. ಆದರೆ ಈ ವೈದ್ಯಕೀಯ ಪರೀಕ್ಷೆ ಯಾವುದೆಂಬುದನ್ನು ನಿಖರವಾಗಿ ವಿವರಿ­ಸಿಲ್ಲ. ಆದ್ದರಿಂದ ಪೊಲೀಸರ ಈ ಕ್ರಮ ಸಂವಿಧಾನದ ಅನುಚ್ಛೇದ 21ರ ಉಲ್ಲಂಘನೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹರಣ. ಹಾಗಾಗಿ ಈ ವೈದ್ಯಕೀಯ ಪರೀಕ್ಷೆಗೆ ತಡೆ ನೀಡಬೇಕು’ ಎಂದು ಅರ್ಜಿದಾರರ ಪರ ಹಿರಿಯ ವಕೀಲರಾದ ಕೆ.ಜಿ.ರಾಘ­ವನ್‌ ವಾದಿಸಿದರು.

ಸರ್ಕಾರಿ ವಕೀಲ ವಿಶ್ವೇಶ್ವರ ಅವರು ಆಕ್ಷೇಪಣೆಗೆ ಕಾಲಾವಕಾಶ ಕೋರಿದರು. ಆದರೆ ನ್ಯಾಯ­ಮೂರ್ತಿ­­ಗಳು, ‘ಅರ್ಜಿದಾರರನ್ನು ಈಗಾಗಲೇ ಸಿಐಡಿ ಪೊಲೀ­ಸರು ಸುದೀರ್ಘವಾಗಿ ವಿಚಾರಣೆ ನಡೆಸಿದ್ದಾರೆ. ಪೊಲೀಸರಿಗೆ ನೀಡಿರುವ ಹೇಳಿಕೆ­ಯಲ್ಲಿ ಸ್ವಾಮೀಜಿ, ನಾನೊಬ್ಬ ಸಾಮಾನ್ಯ ಮನುಷ್ಯ. ಲೈಂಗಿಕ ಕ್ರಿಯೆ ನಡೆಸುವ ಸಾಮರ್ಥ್ಯ ನನಗಿದೆ ಎಂಬ ವಿವರಗಳನ್ನು ನೀಡಿದ್ದಾರೆ. ಘಟನೆ 2010ರಿಂದ ನಡೆದಿದೆ ಎಂದು ಅತ್ಯಾಚಾರ­ಕ್ಕೊಳ­ಗಾದ ಮಹಿಳೆ ದೂರಿನಲ್ಲಿ ಹೇಳಿದ್ದಾರೆ. ಹೀಗಿರು­ವಾಗ ಈಗ ವೈದ್ಯಕೀಯ ಪರೀಕ್ಷೆ ನಡೆಸಿದರೆ ಏನಾದರೂ ಪ್ರಯೋಜನ ಇರುತ್ತದೆಯೇ’ ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿದರು. ‘ಒಂದು ವೇಳೆ ಘಟನೆ ನಡೆದ ತಕ್ಷಣ ಪರೀಕ್ಷೆ ನಡೆಸಿದ್ದರೆ ಏನಾ­ದರೂ ಪ್ರಯೋಜನವಾಗುತ್ತಿತ್ತಲ್ಲವೇ’ ಎಂದೂ   ಅಭಿಪ್ರಾಯಪಟ್ಟರು.

‘ವೈದ್ಯಕೀಯ ಪರೀಕ್ಷೆಯನ್ನು ಮಂಗಳವಾರವೇ (ಅ.21) ನಡೆಸಲು ಸಿಐಡಿ ಉದ್ದೇಶಿಸಿದೆ. ಈ ಸಮಯ­ದಲ್ಲಿ ಪ್ರತಿವಾದಿಗಳಾದ ಸಿಐಡಿ ಪೊಲೀಸರ ಆಕ್ಷೇಪಣೆ­ಯನ್ನು ಕಾಯುತ್ತಾ ಕೂರಲು ಸಾಧ್ಯ­ವಿಲ್ಲ. ಹಾಗೊಂದು ವೇಳೆ ಆಕ್ಷೇಪಣೆ ಆಲಿ­­ಸಿದ ನಂತರ ಆದೇಶ ನೀಡಿದರೆ ಅದು ನಿಷ್ಪ್ರಯೋಜಕ­ವಾಗುತ್ತದೆ. ಆದ್ದರಿಂದ ನಾಳಿನ (ಮಂಗಳವಾರದ) ಪರೀಕ್ಷೆಗೆ ಮಧ್ಯಾಂತರ ತಡೆ ನೀಡಲಾಗುತ್ತಿದೆ’ ಎಂದು ನ್ಯಾಯ­ಮೂರ್ತಿಗಳು ಪ್ರಕಟಿಸಿದರು. ಆಗ ಮಧ್ಯಪ್ರವೇಶಿಸಿದ ವಕೀಲ ಶಂಕರಪ್ಪ (ರಾಮಕಥಾ ಗಾಯಕಿ ಪುತ್ರಿ ಪರ ವಕೀಲ) ಆಕ್ಷೇಪಣೆ ವ್ಯಕ್ತಪಡಿಸಿ, ‘ನಮಗೂ ಈ ಪ್ರಕರಣದ ವಿಚಾರಣೆ­ಯಲ್ಲಿ ಪಾಲ್ಗೊಳ್ಳಲು ಅವ­ಕಾಶ ನೀಡಬೇಕು’ ಎಂದು ಮನವಿ ಮಾಡಿದರು. ಆದರೆ ನ್ಯಾಯಪೀಠವು ಮಾನ್ಯ ಮಾಡಲಿಲ್ಲ.

ಸ್ವಾಮೀಜಿ ವಿರುದ್ಧ ಷಡ್ಯಂತ್ರ
ಬೆಂಗಳೂರು:
‘ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ಜೊತೆಯಲ್ಲಿ ಪರಿವಾರದವರು ಸದಾ ಇರುತ್ತಾರೆ. ಇಂತಹ ಸ್ಥಿತಿಯಲ್ಲಿ ಅವರು ಲೈಂಗಿಕ ದೌರ್ಜನ್ಯ ಎಸಗಲು ಸಾಧ್ಯ ಇಲ್ಲ. ಸ್ವಾಮೀಜಿ ಅವರ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ’ ಎಂದು ರಾಮಕಥಾ ಕಲಾವಿದರು ಆರೋಪಿಸಿದರು.

ಕಲಾವಿದ ಬಿ.ಕೆ.ಎಸ್‌.ವರ್ಮ, ಹಿರಿಯ ಗಾಯಕ ಪಂಡಿತ್‌ ಪರಮೇಶ್ವರ ಹೆಗಡೆ, ಶಶಿಧರ ಕೋಟೆ, ಗರ್ತಿಕೆರೆ ರಾಘವೇಂದ್ರ, ಕವಿ ಗಜಾನನ ಶರ್ಮ ಮತ್ತಿತರರು ಸೋಮವಾರ ಪತ್ರಿಕಾ­ಗೋಷ್ಠಿಯಲ್ಲಿ ಮಾತನಾಡಿ, ‘ದಿವಾಕರ ಶಾಸ್ತ್ರಿ ದಂಪತಿ ತಮ್ಮ ಸ್ವಾರ್ಥ ಸಾಧನೆಗಾಗಿ ಕೆಲವು ಕಲಾವಿದರಿಗೆ ಮಾಡಿರುವ ಬೆದರಿಕೆ ಕರೆ ಹಾಗೂ ಸುಳ್ಳು ದೂರಿನಿಂದಾಗಿ ರಾಮಕಥಾ ಕಲಾವಿದರ ಕುಟುಂಬಗಳಿಗೆ ಮುಜುಗರ ಉಂಟಾಗಿದೆ. ಮಠದಲ್ಲಿ ಪ್ರೀತಿ, ಕರುಣೆ, ವಿಶ್ವಾಸದಿಂದ ಕಲಾವಿದರನ್ನು ಗೌರವಿ­ಸುವ ಸಂಸ್ಕೃತಿ ಇದೆಯೇ ಹೊರತು ಪ್ರೇಮಲತಾ ಆಪಾದಿಸಿರುವ ವಾತಾವರ­ಣವಲ್ಲ’ ಎಂದು ಸಮರ್ಥಿಸಿಕೊಂಡರು.

‘ರಾಮಕಥಾ ಪವಿತ್ರ ಕಾರ್ಯಕ್ರಮ. ನಾವೆಲ್ಲ ರಾಮಕಥಾ ಸಂದರ್ಭದಲ್ಲಿ ನಡೆದ ಘಟನೆಗಳಿಗೆ ಪ್ರತ್ಯಕ್ಷ ಸಾಕ್ಷಿಗಳು. ಇಲ್ಲಿ ಏಕಾಂತಕ್ಕೆ ಅವಕಾಶವೇ ಇಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT