ADVERTISEMENT

ರಾಘವೇಶ್ವರ ಶ್ರೀ ಪರ, ವಿರೋಧಿ ಗುಂಪಿನ ನಡುವೆ ಘರ್ಷಣೆ

ರಾಮಚಂದ್ರಾಪುರ ಮಠದ ಪೀಠ ತ್ಯಾಗಕ್ಕೆ ಒತ್ತಾಯಿಸಿ ಸಭೆ ನಡೆಸಲು ವಿರೋಧ

​ಪ್ರಜಾವಾಣಿ ವಾರ್ತೆ
Published 5 ಜೂನ್ 2016, 19:30 IST
Last Updated 5 ಜೂನ್ 2016, 19:30 IST
ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಪೀಠ ತ್ಯಾಗ ಮಾಡಬೇಕು ಎಂದು ಒತ್ತಾಯಿಸಿ ಸಾಗರದಲ್ಲಿ ಅಖಿಲ ಹವ್ಯಕ ಒಕ್ಕೂಟ ಭಾನುವಾರ ಆಯೋಜಿಸಿದ್ದ ಸಭೆಯ ಮುನ್ನ ಶ್ರೀಗಳ ಪರ ಹಾಗೂ ವಿರೋಧಿ ಗುಂಪು ನಡುವೆ ಘರ್ಷಣೆ ನಡೆಯಿತು.
ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಪೀಠ ತ್ಯಾಗ ಮಾಡಬೇಕು ಎಂದು ಒತ್ತಾಯಿಸಿ ಸಾಗರದಲ್ಲಿ ಅಖಿಲ ಹವ್ಯಕ ಒಕ್ಕೂಟ ಭಾನುವಾರ ಆಯೋಜಿಸಿದ್ದ ಸಭೆಯ ಮುನ್ನ ಶ್ರೀಗಳ ಪರ ಹಾಗೂ ವಿರೋಧಿ ಗುಂಪು ನಡುವೆ ಘರ್ಷಣೆ ನಡೆಯಿತು.   

ಸಾಗರ: ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಪೀಠ ತ್ಯಾಗ ಮಾಡಬೇಕು ಎಂದು ಒತ್ತಾಯಿಸಲು ಅಖಿಲ ಹವ್ಯಕ ಒಕ್ಕೂಟ ಇಲ್ಲಿನ ಬ್ರಾಸಂ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸಭೆಗೆ ರಾಘವೇಶ್ವರ ಶ್ರೀಗಳ ಪರ ಇರುವ ಗುಂಪು ವಿರೋಧ ವ್ಯಕ್ತಪಡಿಸಿದ ಕಾರಣ ಎರಡು ಗುಂಪಿನ ನಡುವೆ ಘರ್ಷಣೆ ನಡೆದಿದೆ.

ಪ್ರೇಮಲತಾ ಪ್ರಕರಣದಲ್ಲಿ  ನ್ಯಾಯಾಲಯ ರಾಘವೇಶ್ವರ ಶ್ರೀಗಳನ್ನು ನಿರ್ದೋಷಿ ಎಂದು ಘೋಷಿಸಿದ್ದರೂ ತೀರ್ಪಿನಲ್ಲಿ ಒಪ್ಪಿತ ಅನೈತಿಕ ಸಂಬಂಧ ನಡೆದಿದೆ ಎಂಬ ಅಂಶ ಉಲ್ಲೇಖವಾಗಿರುವುದರಿಂದ ಶ್ರೀಗಳು ಪೀಠದಲ್ಲಿ ಮುಂದುವರಿಯಬಾರದು ಎಂದು ಆಗ್ರಹಿಸಲು ಹವ್ಯಕ ಒಕ್ಕೂಟ ಸಭೆ ಕರೆದಿತ್ತು.

ರಾಘವೇಶ್ವರ ಶ್ರೀಗಳ ಪರ ಇರುವ ಗುಂಪು ಸಭೆ ಆರಂಭವಾಗುವ ಮುನ್ನ ಸಭಾಂಗಣದ ಮುಂಭಾಗದಲ್ಲಿ ಸೇರಿ ನಮಗೂ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಇದರಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ತೊಂದರೆಯಾಗಬಹುದು ಎನ್ನುವ ಕಾರಣಕ್ಕೆ ಪೊಲೀಸರು ಆ ಗುಂಪಿಗೆ ಸಭಾಂಗಣದ ಒಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ.

ಸಭಾಂಗಣದ ಹೊರಗಡೆ ಇದ್ದ ರಾಘವೇಶ್ವರ ಶ್ರೀಗಳ ಪರ ಇರುವ ಭಕ್ತರು ಶ್ರೀಗಳು ಪೀಠ ತ್ಯಾಗ ಮಾಡಬೇಕು ಎಂದು ಒತ್ತಾಯಿಸಿ ಸಭೆ ನಡೆಸುವವರಿಗೆ ಒಳಗೆ ಪ್ರವೇಶಿಸಲು ಅವಕಾಶವನ್ನೇ ನೀಡಲಿಲ್ಲ. ಸಭೆಯಲ್ಲಿ ಭಾಗವಹಿಸಬೇಕು ಎಂದು ಆಗಮಿಸಿದ್ದವರಿಗೆ ಚಪ್ಪಲಿ ಮತ್ತು ಪೊರಕೆ ಪ್ರದರ್ಶಿಸಿ ಅವಾಚ್ಯ ಶಬ್ದಗಳಿಂದ ಅವರನ್ನು ನಿಂದಿಸಲಾಯಿತು. ಈ ವೇಳೆಗೆ ನಡೆದ ತಳ್ಳಾಟದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

ಈ ನಡುವೆ ಹವ್ಯಕ ಒಕ್ಕೂಟದ ಪ್ರಮುಖರು ನಾವು ಸಭೆ ನಡೆಸಿಯೇ ತೀರುವುದಾಗಿ ಪಟ್ಟು ಹಿಡಿದರು. ಆಗ ಎರಡು ಗುಂಪುಗಳ ನಡುವೆ ಹಲವು ಬಾರಿ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತದೆ ಎನ್ನುವಾಗ  ಪೊಲೀಸರು ಲಾಠಿ ಪ್ರಹಾರ ನಡೆಸಲು ಮುಂದಾಗಿದ್ದರು.

ಆ ವೇಳೆಗೆ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಡಿ.ಎಂ.ಸತೀಶ್‌ಕುಮಾರ್, ತಹಶೀಲ್ದಾರ್ ಎನ್.ಟಿ. ಧರ್ಮೋಜಿರಾವ್ ಹಾಗೂ ಅಲ್ಲಿಯೇ ಉಪಸ್ಥಿತರಿದ್ದ ಡಿವೈಎಸ್ಪಿ ನಿಶಾ ಜೇಮ್ಸ್ ಉಭಯ ಬಣಗಳ ಪ್ರಮುಖರನ್ನು ಕರೆಯಿಸಿ ಮಾತುಕತೆ ನಡೆಯಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಈ ಮೊದಲೇ ನಿಯೋಜನೆಗೊಂಡಂತೆ ಬ್ರಾಸಂ ಸಭಾಂಗಣದಲ್ಲಿ ಸಭೆ ನಡೆದರೆ ಗಲಾಟೆ, ಘರ್ಷಣೆ ನಡೆಯುವ ಸಾಧ್ಯತೆ ಇರುವುದರಿಂದ ಅಲ್ಲಿ ಸಭೆ ನಡೆಸುವುದು ಬೇಡ ಎಂದು ತಾಲ್ಲೂಕು ಆಡಳಿತ ನೀಡಿದ ಸಲಹೆಗೆ ಒಪ್ಪಿಕೊಂಡ ಹವ್ಯಕ ಒಕ್ಕೂಟದ ಪ್ರಮುಖರು ನಂತರ ಸಭೆಯನ್ನು ಒಕ್ಕೂಟದ ಮುಖಂಡರಾದ ಅಶ್ವಿನಿಕುಮಾರ್ ಅವರ ಮನೆ ಆವರಣದಲ್ಲಿ ಸಭೆ ನಡೆಸಲು ತೀರ್ಮಾನಿಸಿ ಆ ಪ್ರಕಾರ ಅಲ್ಲಿ ಸಭೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.