ADVERTISEMENT

ರಾಜಕೀಯ ಅಸ್ತ್ರವಾಗಿ ಬಳಕೆ

ಮಠಗಳಿಗೆ ಆಡಳಿತಾಧಿಕಾರಿ ನೇಮಕ ಮಸೂದೆಗೆ ಬಿಜೆಪಿ ವಿರೋಧ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 20:18 IST
Last Updated 22 ಡಿಸೆಂಬರ್ 2014, 20:18 IST

ನವದೆಹಲಿ: ಕೆಲ ನಿರ್ದಿಷ್ಟ ಸಂದರ್ಭ­ಗಳಲ್ಲಿ ಮಠಗಳಿಗೆ ಆಡಳಿತಾಧಿಕಾರಿ ನೇಮಿಸಲು ಅವಕಾಶ ಕಲ್ಪಿಸುವ ರಾಜ್ಯ ಸರ್ಕಾರದ ಉದ್ದೇಶಿತ ಮಸೂದೆ­ಯನ್ನು ಬಿಜೆಪಿ ಪ್ರಬಲವಾಗಿ ವಿರೋಧಿ­ಸಿದೆ. ಈ ಮಸೂದೆಯನ್ನು ­ಸಿದ್ದ­ರಾಮಯ್ಯ ಸರ್ಕಾ­ರದ ವಿರುದ್ಧ ‘ರಾಜಕೀಯ ಅಸ್ತ್ರ’ವಾಗಿ ಬಳಸಿಕೊಳ್ಳಲು ತೀರ್ಮಾನಿಸಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಸಂಸದ ಪ್ರಹ್ಲಾದ್‌ ಜೋಶಿ ಅವರ ಮನೆಯಲ್ಲಿ ಸೋಮವಾರ ರಾತ್ರಿ ಸೇರಿದ್ದ ಬಿಜೆಪಿ ಪ್ರಮುಖರ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳ­ಲಾಯಿತು. ಬಿಜೆಪಿಯ ಆಡ­ಳಿತ­ದಲ್ಲಿ ರೂಪಿಸಲಾಗಿದ್ದ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್‌ ಪಡೆದಿರುವ ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರ ಸರ್ಕಾರದ ನಡೆಯನ್ನು ಸಭೆಯಲ್ಲಿ ಕಟುವಾಗಿ ಟೀಕಿಸಲಾಯಿತು.

ರಾಜ್ಯ ಸರ್ಕಾರ ಹಿಂದೂಗಳನ್ನು ಕಡೆಗಣಿಸಿ, ಮತ್ತೊಂದು ಅಲ್ಪಸಂಖ್ಯಾತ ಕೋಮನ್ನು ಓಲೈಸಲು ಹೊರಟಿದೆ. ಅದಕ್ಕೆ ಅವಕಾಶ ಕೊಡುವುದಿಲ್ಲ. ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನ­ಗಳನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು ತೀವ್ರ ಹೋರಾಟ ರೂಪಿಸಲು ನಿರ್ಧರಿಸಲಾಯಿತು.

ಮಠಾಧೀಶರೊಂದಿಗೆ ಸಭೆ: ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದ ಮಠಗಳಿಗೆ ಆಡಳಿತಾಧಿ­ಕಾರಿ ನೇಮಿಸುವ ಮಸೂದೆಯ ಪರಿ­ಣಾಮ ಕುರಿತು ಚರ್ಚಿಸಲು ಸದ್ಯದಲ್ಲೇ ಮಠಾಧೀಶರ ಸಭೆ ಕರೆಯಲು ಬಿಜೆಪಿ ನಾಯಕರು ತೀರ್ಮಾನಿಸಿದರು. ಆದರೆ, ಹೋರಾಟ­ದಿಂದ ಮಠಾಧೀಶ­ರನ್ನು ದೂರವಿಡಲು ನಿರ್ಧರಿಸಿದರು.

ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಮಠಗಳು ಸಾಕಷ್ಟು ಕೊಡುಗೆ ನೀಡು­ತ್ತಿವೆ. ಅವನ್ನು ರಾಜ್ಯ ಸರ್ಕಾರ ಲಘು­ವಾಗಿ ಪರಿಗಣಿಸಬಾರದು ಎಂದು ಮನವಿ ಮಾಡಲಾಯಿತು. ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮಠಗಳಿಗೆ ಆಡಳಿತಾಧಿಕಾರಿ ನೇಮಿ­ಸುವ ಮಸೂದೆಯನ್ನು ಮಂಡಿಸ­ಲಾಗಿದೆ. ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂದಕ್ಕೆ ಪಡೆದು ಪ್ರಮಾದ ಮಾಡ­ಲಾಗಿದೆ ಎಂದು ಆರೋಪಿಸಲಾಯಿತು.

ಅರ್ಕಾವತಿ ಬಡಾವಣೆ ಜಮೀನ­ನನ್ನು ಡಿನೋಟಿಫಿಕೇಷನ್‌ ಮಾಡಿರು­ವು­ದರ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಲೂ ನಿಶ್ಚಯಿಸಲಾಯಿತು. ಪ್ರಹ್ಲಾದ್‌ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ.ಸದಾನಂದ ಗೌಡ, ಸಂಸದ ಬಿ.ಎಸ್‌. ಯಡಿಯೂ­ರಪ್ಪ, ಜಗದೀಶ ಶೆಟ್ಟರ್‌, ಸಂತೋಷ್‌, ರಾಜ್ಯ ಉಸ್ತುವಾರಿ ಮುರುಳೀಧರ್‌ ರಾವ್‌ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಭಾಗವಹಿಸಿದ್ದರು.

‘ಅರ್ಕಾವತಿ ಹಗರಣದಲ್ಲಿ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರೇ ಭಾಗಿ­ಯಾಗಿದ್ದಾರೆ. ಈ ಪ್ರಕರಣದ ವಿರುದ್ಧ ರಾಜಕೀಯ ಹೋರಾಟ­ಕ್ಕಿಂತಲೂ ಕಾನೂನು ಸಮರವೇ ಸೂಕ್ತ ಎಂದು ಹಲವು ಮುಖಂಡರು ಅಭಿಪ್ರಾಯ­ಪಟ್ಟರು’ ಎಂದು ಸಭೆಯ ನಂತರ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಕಳಂಕಿತ ಸಚಿವರ ಬಗ್ಗೆ ಬಿಜೆಪಿ ಬಳಿ ಅಗತ್ಯ ದಾಖಲೆಗಳಿದ್ದು, ಅವರ ವಿರುದ್ಧವೂ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.