ADVERTISEMENT

ರಾಜಣ್ಣ ಹೇಳಿಕೆಗೆ ರಮೇಶ್‌ ಕುಮಾರ್ ಬೆಂಬಲ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST
ಕೆ.ಆರ್. ರಮೇಶ್ ಕುಮಾರ್
ಕೆ.ಆರ್. ರಮೇಶ್ ಕುಮಾರ್   

ಬೆಂಗಳೂರು:  ‘ಕಾಂಗ್ರೆಸ್‌ ಪಕ್ಷದಲ್ಲಿರುವ ಕೆಲವರನ್ನು ಉದ್ದೇಶಿಸಿ ಮಧುಗಿರಿ ಶಾಸಕ ಕೆ.ಎನ್‌. ರಾಜಣ್ಣ ಹಾಗೆ ಹೇಳಿರಬಹುದು. ಆದರೆ, ಪಕ್ಷದ ವಿರುದ್ಧ ಹೇಳಿಕೆ ನೀಡುವುದು ಅವರ ಉದ್ದೇಶ ಆಗಿರಲಿಕ್ಕಿಲ್ಲ’ ಎಂದು ಆರೋಗ್ಯ ಸಚಿವ ಕೆ.ಆರ್. ರಮೇಶ್‌ ಕುಮಾರ್ ವ್ಯಾಖ್ಯಾನಿಸಿದ್ದಾರೆ.

‘ಕಾಂಗ್ರೆಸ್‌ ಕಳ್ಳರ ಪಕ್ಷ’ ಎಂದು ರಾಜಣ್ಣ ಟೀಕಿಸಿದ್ದಾರೆ ಎಂಬ ವಿಡಿಯೊ ವೈರಲ್ ಆಗಿದೆ.

ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ರಮೇಶ್ ಕುಮಾರ್, ‘ರಾಜಣ್ಣ ಅವರ ವ್ಯಕ್ತಿತ್ವ ಎಂತಹದ್ದು ಎಂದು ನನಗೆ ಚೆನ್ನಾಗಿ ಗೊತ್ತಿದೆ. ಹೋರಾಟ ನಡೆಸಿ ಅವರು ಪಕ್ಷ ಕಟ್ಟಿದ್ದಾರೆ. ಅವರನ್ನು ನಿರ್ಲಕ್ಷ್ಯಿಸಿದಾಗ ಸಹಜವಾಗಿಯೇ ನೋವಾಗುತ್ತದೆ. ಅದೇ ನೋವಿನಲ್ಲಿ ಈ ರೀತಿ ಹೇಳಿರಬಹುದೇ ವಿನಾ ಪಕ್ಷವನ್ನು ಟೀಕಿಸುವ ದುರುದ್ದೇಶ ಅವರಿಗೆ ಇದ್ದಂತಿಲ್ಲ’ ಎಂದರು.‌

ADVERTISEMENT

‘ಪಕ್ಷದಲ್ಲಿ ಇದ್ದುಕೊಂಡು ಕಾಂಗ್ರೆಸ್‌ ನಲ್ಲಿ ಎಲ್ಲವೂ ಸರಿಯಿಲ್ಲ ಎಂದು ಹೇಳುವ ಧೈರ್ಯ ಮಾಡಿದ್ದಕ್ಕಾಗಿ ನಾನು ಅವರನ್ನು ಮೆಚ್ಚುತ್ತೇನೆ ಹಾಗೂ ಸಮರ್ಥಿಸುತ್ತೇನೆ. ಅವರ ಹೇಳಿಕೆಯನ್ನು ತಿರುಚಿ ಪಕ್ಷ ವಿರೋಧಿ ಚಟುವಟಿಕೆ ಎಂದು ಬಿಂಬಿಸುವುದು ಬೇಡ’ ಎಂದು ಮನವಿ ಮಾಡಿದರು.

ಅಧಿವೇಶನ: ‘ಖಾಸಗಿ ಆಸ್ಪತ್ರೆಗಳಲ್ಲಿ ವಸೂಲಿ ಮಾಡುತ್ತಿರುವ ದುಬಾರಿ ಶುಲ್ಕ ನಿಯಂತ್ರಿಸುವ ಮಸೂದೆಗೆ ಅನುಮೋದನೆ ಪಡೆಯಲು ಅಕ್ಟೋಬರ್‌ ನಲ್ಲಿ ವಿಧಾನಮಂಡಲ ಅಧಿವೇಶನ ನಡೆಸುವ ಉದ್ದೇಶವಿದೆ. ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದೂ ಅವರು ತಿಳಿಸಿದರು.‌

‘ಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರ ಮನೆ ಮತ್ತು ಕಚೇರಿ ಮನೆಯ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿಗೂ ಅವರ ಮಾವ ಎಸ್.ಎಂ. ಕೃಷ್ಣ ಅವರಿಗೂ ಸಂಬಂಧ ಕಲ್ಪಿಸುವುದು ಸರಿಯಲ್ಲ. ಸಿದ್ಧಾರ್ಥ ವ್ಯಾಪಾರಸ್ಥರಾಗಿದ್ದು, ಅವರ ವಹಿವಾಟಿನ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಅವರು ತಪ್ಪು ಲೆಕ್ಕ ಕೊಟ್ಟಿದ್ದರೆ ದಂಡ ವಿಧಿಸುತ್ತಾರೆ’ ಎಂದು ರಮೇಶ್‌ ಕುಮಾರ್ ಹೇಳಿದರು.

‘ಸುದೀರ್ಘ ಕಾಲ ರಾಜಕಾರಣದಲ್ಲಿದ್ದ ಕೃಷ್ಣ ಪರಿಪಕ್ವ ರಾಜಕಾರಣಿ. ಅವರ ಬಗ್ಗೆ ನನಗೆ ಗೌರವ ಇದೆ’ ಎಂದರು.

ರಾಜಣ್ಣ ಹೇಳಿಕೆ ಪರಿಶೀಲಿಸುತ್ತೇನೆ: ಸಿಎಂ

ಕೊಪ್ಪಳ: ‘ಮಧುಗಿರಿ ಶಾಸಕ ಕೆ.ಎನ್‌.ರಾಜಣ್ಣ ಅವರು ಕಾಂಗ್ರೆಸ್‌ ಕಳ್ಳರ ಪಕ್ಷ ಎಂದು ಯಾವ ಅರ್ಥದಲ್ಲಿ ಹೇಳಿದ್ದಾರೆ ಎನ್ನುವುದನ್ನು ನೋಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜಣ್ಣ ಹೇಳಿಕೆ ಪರಿಶೀಲಿಸುತ್ತೇನೆ. ಅವರೊಂದಿಗೂ ಮಾತನಾಡುತ್ತೇನೆ’ ಎಂದರು.

‘ಸುಳ್ಳೇ ಸಿದ್ದರಾಮಯ್ಯನವರ ಸರ್ಕಾರದ ಮನೆ ದೇವರು’ ಎಂದು ಬಿಜೆಪಿ ಶಾಸಕ ಲಕ್ಷ್ಮಣ ಸವದಿ ಅವರು ಕುಷ್ಟಗಿಯಲ್ಲಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ವಿಧಾನಸೌಧದಲ್ಲಿ ನೀಲಿಚಿತ್ರ ನೋಡಿದ ಅವರೇನು ಹೇಳುವುದು’ ಎಂದು ಸಿಡಿಮಿಡಿಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.