ADVERTISEMENT

ರಾಜ್ಯದತ್ತ ಕಾಂಗ್ರೆಸ್‌, ಬಿಜೆಪಿ ವರಿಷ್ಠರ ಚಿತ್ತ

ಸಿದ್ದಯ್ಯ ಹಿರೇಮಠ
Published 14 ಏಪ್ರಿಲ್ 2017, 19:30 IST
Last Updated 14 ಏಪ್ರಿಲ್ 2017, 19:30 IST
ರಾಜ್ಯದತ್ತ ಕಾಂಗ್ರೆಸ್‌, ಬಿಜೆಪಿ ವರಿಷ್ಠರ ಚಿತ್ತ
ರಾಜ್ಯದತ್ತ ಕಾಂಗ್ರೆಸ್‌, ಬಿಜೆಪಿ ವರಿಷ್ಠರ ಚಿತ್ತ   

ನವದೆಹಲಿ: ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯ ಫಲಿತಾಂಶ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬೆಳವಣಿಗೆಗಳಿಗೆ ಕಾರಣವಾಗಿದೆ.
ಈ ಫಲಿತಾಂಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ‘ಆತ್ಮವಿಶ್ವಾಸ’ ಹೆಚ್ಚಿದೆ.

ವಿದೇಶದಲ್ಲಿ ಚಿಕಿತ್ಸೆ ಪಡೆದು ಮರಳಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಶನಿವಾರ ಮಧ್ಯಾಹ್ನ ಭೇಟಿಯಾಗಲಿರುವ ಮುಖ್ಯಮಂತ್ರಿ ಹಾಗೂ ಮಂತ್ರಿಮಂಡಲದ ಹಿರಿಯ ಸದಸ್ಯರು, ಅನೇಕ ದಿನಗಳಿಂದ ನನೆಗುದಿಗೆ ಬಿದ್ದಿರುವ ಸಚಿವ ಸಂಪುಟದ ವಿಸ್ತರಣೆ, ವಿಧಾನ ಪರಿಷತ್‌ ಸದಸ್ಯರ ನಾಮ ನಿರ್ದೇಶನ ಪ್ರಕ್ರಿಯೆಗೆ ಒಪ್ಪಿಗೆ ಪಡೆಯುವ ಸಾಧ್ಯತೆಗಳಿವೆ.

ಗುಂಡ್ಲುಪೇಟೆಯಲ್ಲಿ ಗೆದ್ದಿರುವ ಎಚ್‌.ಎಸ್‌. ಮಹದೇವ ಪ್ರಸಾದ್ ಅವರ ಪತ್ನಿ ಮೋಹನ್‌ಕುಮಾರಿ ಅವರಿಗೆ ಸಚಿವ ಸ್ಥಾನ ನೀಡುವ ಇರಾದೆಯೂ ಮುಖ್ಯಮಂತ್ರಿಯವರಲ್ಲಿದ್ದು, ಖಾಲಿ ಇರುವ ಇನ್ನೊಂದು ಸ್ಥಾನಕ್ಕೂ ತಮ್ಮ ಆಪ್ತರತ್ತ ಒಲವು ತೋರಿ ಹೈಕಮಾಂಡ್‌ನ ಹಸಿರು ನಿಶಾನೆಗೆ ಬೇಡಿಕೆ ಇರಿಸಲಿದ್ದಾರೆ ಎನ್ನಲಾಗಿದೆ.

ಆದರೆ, ‘ಮುಂಬರುವ ವಿಧಾನಸಭೆ ಚುನಾವಣೆಗೆ ಈ ಫಲಿತಾಂಶವು ದಿಕ್ಸೂಚಿಯಲ್ಲ’ ಎಂಬ ಹೇಳಿಕೆಗಳು ಸ್ವತಃ ಸಿದ್ದರಾಮಯ್ಯ ಹಾಗೂ ಲೋಕಸಭೆಯ ಕಾಂಗ್ರೆಸ್‌ ಗುಂಪಿನ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಂದ ಹೊರ ಹೊಮ್ಮಿರುವುದರಿಂದ, ‘ಉಪಚುನಾವಣೆಯ ನಂತರ ಪಕ್ಷವು ರಾಜ್ಯದಲ್ಲಿ ಸಾಕಷ್ಟು ಬದಲಾವಣೆಗಳಿಗೆ ತೆರೆದುಕೊಳ್ಳುವ ಸಾಧ್ಯತೆಗಳಿವೆ’ ಎಂದು ಕೆಲವು ದಿನಗಳಿಂದ ಕೇಳಿ ಬರುತ್ತಿರುವ ಮಾತುಗಳನ್ನು ತಳ್ಳಿಹಾಕುವಂತೆಯೂ ಇಲ್ಲ.
ಪಕ್ಷದ ಉಸ್ತುವಾರಿ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆಯೂ ಹೈಕಮಾಂಡ್‌ ಇದೇ ವೇಳೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.

ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿ, ಅಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪಕ್ಷವನ್ನು ಸನ್ನದ್ಧಗೊಳಿಸಬೇಕೆಂಬ ರಾಜ್ಯ ಮುಖಂಡರ ಬೇಡಿಕೆಗೆ ಅನುಗುಣವಾಗಿ ಹೈಕಮಾಂಡ್‌ ದಿಟ್ಟ ಹೆಜ್ಜೆ ಇರಿಸಬಹುದು ಎಂಬ ನಿರೀಕ್ಷೆಯೂ ಪಕ್ಷದ ಕಾರ್ಯಕರ್ತರಲ್ಲಿ ಮನೆಮಾಡಿದೆ.

ಮಹತ್ವದ ನಿರ್ಣಯ: ಎಸ್‌.ಎಂ. ಕೃಷ್ಣ ಅವರು ಬಿಜೆಪಿಗೆ ಸೇರಿರುವುದು, ಇನ್ನಿಬ್ಬರು ಪ್ರಮುಖ ಮುಖಂಡರಾದ ಜಾಫರ್‌ ಷರೀಫ್‌, ಎಂ.ವಿ. ರಾಜಶೇಖರನ್‌ ಅವರು ಉತ್ತರ ಪ್ರದೇಶ ಚುನಾವಣೆಯಲ್ಲಿ ಯಶಸ್ಸು ಸಾಧಿಸಿರುವ ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿ ಮತ್ತು ಕೇಂದ್ರದ ಆಡಳಿತವನ್ನು ಕೊಂಡಾಡಿರುವುದು ಕಾಂಗ್ರೆಸ್‌ ಹೈಕಮಾಂಡ್‌ನಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಹಾಗಾಗಿ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಬಹುದಾಗಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕರೆ ಬಂದಿಲ್ಲ: ಸರ್ಕಾರದಲ್ಲಿನ ವಿದ್ಯಮಾನಗಳು, ರಾಜ್ಯ ಕಾಂಗ್ರೆಸ್‌ನಲ್ಲಿನ ಬೆಳವಣಿಗೆಗಳ ಕುರಿತು ಚರ್ಚಿಸಿ ದೂರು ನೀಡಲು, ಸೋನಿಯಾ ಗಾಂಧಿ ಅವರ ಆಹ್ವಾನದ ಮೇರೆಗೆ ದೆಹಲಿಗೆ ಬಂದಿರುವ ಮಾಜಿ ಸಚಿವ ಎಚ್‌.ವಿಶ್ವನಾಥ್‌ ಅವರಿಗೆ ಶುಕ್ರವಾರ ಭೇಟಿ ಸಾಧ್ಯವಾಗಿಲ್ಲ.

ಸಿದ್ದರಾಮಯ್ಯ ಕಾರ್ಯವೈಖರಿ ಕುರಿತು ಪಕ್ಷದಲ್ಲಿನ ಕೆಲ ಮುಖಂಡರಂತೆಯೇ ತೀವ್ರ ಅಸಮಾಧಾನ ಹೊಂಡಿರುವ ವಿಶ್ವನಾಥ್‌, ‘ಉಪ ಚುನಾವಣೆ ಫಲಿತಾಂಶವು ಪಕ್ಷದ ಪರವೇ ಆಗಿರುವುದರಿಂದ ಈಗ ಭೇಟಿ ಪ್ರಸ್ತುತವಲ್ಲ’ ಎಂದೇ ಭಾವಿಸಿದಂತಿದ್ದು, ಸದ್ಯಕ್ಕೆ ಹೈಕಮಾಂಡ್‌ ಭೇಟಿ ಸೂಕ್ತವಲ್ಲ ಎಂಬ ನಿರ್ಧಾರಕ್ಕೂ ಬರಲು ಕಾರಣವಾಗಿದೆ. ಆದರೆ, ಶನಿವಾರ ಸೋನಿಯಾ ಅವರಿಂದ ಕರೆ ಬಂದರೂ ಬರಬಹುದು ಎಂಬ ನಿರೀಕ್ಷೆ ಇದೆ. ಒಂದೊಮ್ಮೆ ಈ ಭೇಟಿ ಸಾಧ್ಯವಾದಲ್ಲಿ ಪರಿಣಾಮಗಳೂ ಗಂಭೀರ ಸ್ವರೂಪದಲ್ಲಿರಲಿವೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಸಮರ್ಥನೆಯ ಹಾದಿ: ಶ್ರೀನಿವಾಸ್‌ ಪ್ರಸಾದ್‌ ಅವರನ್ನು ಪಕ್ಷದ ತೆಕ್ಕೆಗೆ ಪಡೆದು, ನಂಜನಗೂಡು, ಗುಂಡ್ಲುಪೇಟೆ ಕ್ಷೇತ್ರದಲ್ಲಿ ಜಿದ್ದಾಜಿದ್ದಿಗೆ ಬಿದ್ದಂತೆಯೇ ಚುನಾವಣೆ ಎದುರಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಲ್ಲೂ ಫಲಿತಾಂಶ ಆಘಾತ ಮೂಡಿಸಿದೆ.

ಅಂತೆಯೇ ಅವರು ಹೈಕಮಾಂಡ್‌ ಎದುರು ಯಾವ ರೀತಿಯ ‘ಸಮರ್ಥನೆ’ಗೆ ಸಿದ್ಧರಾಗಿರಬಹುದು ಎಂಬ ಚರ್ಚೆ ಪಕ್ಷದಲ್ಲೇ ಆರಂಭವಾಗಿದೆ.
ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಕುರಿತು ಕೇಂದ್ರದ ವರಿಷ್ಠರಿಗೆ ಆಶಾದಾಯಕ ಸಂದೇಶ ಸಾರಬೇಕೆಂಬ ಇಚ್ಛೆ ಹೊಂದಿದ್ದ ಯಡಿಯೂರಪ್ಪ ಮತ್ತು ಬೆಂಬಲಿಗರಲ್ಲಿ ‘ಆಘಾತಕಾರಿ ಫಲಿತಾಂಶ’ದಿಂದ ಕೊಂಚ ಹಿನ್ನಡೆ ಆಗಿದೆ.

ಈ ಫಲಿತಾಂಶವು, ಚುನಾವಣೆಗೆ ಸಂಬಂಧಿಸಿದ ಸಂಪೂರ್ಣ ಪ್ರಕ್ರಿಯೆಯನ್ನು ತಮ್ಮ ಸುಪರ್ದಿಗೆ ಪಡೆಯುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರ ಹಾದಿಯನ್ನು ಸುಲಭ ಆಗಿಸಲಿದೆಯೇ ಎಂಬ ಚರ್ಚೆಗೂ ಗ್ರಾಸ ಒದಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.