ADVERTISEMENT

ರಾಜ್ಯದಲ್ಲೂ ನೂಡಲ್ಸ್ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2015, 19:30 IST
Last Updated 2 ಜೂನ್ 2015, 19:30 IST

ಬೆಂಗಳೂರು: ಮ್ಯಾಗಿ, ಟಾಪ್‌ರಾಮನ್‌  ಸೇರಿದಂತೆ ವಿವಿಧ ಹೆಸರಿನ ನೂಡಲ್ಸ್‌ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ಬಂದ ನಂತರ ಅವುಗಳ ನಿಷೇಧ ಕುರಿತು ತೀರ್ಮಾನ ಮಾಡಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ಮಂಗಳವಾರ ತಿಳಿಸಿದರು.

ನೂಡಲ್ಸ್‌ನಲ್ಲಿ ಸೀಸ ಸೇರಿದಂತೆ ಇತರ ಅಪಾಯಕಾರಿ ರಾಸಾಯನಿಕ ಅಂಶಗಳು ಇವೆ ಎನ್ನುವ ಕಾರಣಕ್ಕೆ ಕೇರಳ ಸರ್ಕಾರ ಅದನ್ನು ನಿಷೇಧಿಸಿದ್ದು, ಅದಕ್ಕೆ ರಾಜ್ಯ ಸರ್ಕಾರವೂ ವೇದಿಕೆ ಸಿದ್ಧಪಡಿಸುತ್ತಿದೆ ಎನ್ನಲಾಗಿದೆ.

ಮೈಸೂರಿನ ಸರ್ಕಾರಿ ಪ್ರಯೋಗಾಲಯ ಮತ್ತು ಬೆಂಗಳೂರಿನ 2 ಖಾಸಗಿ ಪ್ರಯೋಗಾಲಯಗಳಲ್ಲಿ ನೂಡಲ್ಸ್‌ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಬೇರೆ ರಾಜ್ಯಗಳಲ್ಲಿನ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲೂ ಪರೀಕ್ಷೆ ಮಾಡಿಸಲಾಗುವುದು ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ನೂಡಲ್ಸ್‌ ತಯಾರಿಸುವ ಕೈಗಾರಿಕೆಗಳಿಗೂ ಭೇಟಿ ನೀಡಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಬೀಡಿ, ಸಿಗರೇಟ್ ಚಿಲ್ಲರೆ ಮಾರಾಟಕ್ಕೆ ನಿಷೇಧ?:  ಬೀಡಿ ಮತ್ತು ಸಿಗರೇಟ್‌ಗಳನ್ನು  ಚಿಲ್ಲರೆಯಾಗಿ ಮಾರಾಟ ಮಾಡುವುದಕ್ಕೆ ನಿಷೇಧ ಹೇರಲು ಆರೋಗ್ಯ ಇಲಾಖೆ ಪ್ರಸ್ತಾವ ಸಲ್ಲಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯುವ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.