ADVERTISEMENT

ರಾಜ್ಯದ ಆದಾಯ ನುಂಗಿದ ನೋಟು ರದ್ದು

ಸ್ಥಿರಾಸ್ತಿಗಳ ಮಾರಾಟ ಮತ್ತು ಮರುಮಾರಾಟ ಪ್ರಕ್ರಿಯೆಗಳು ಗಣನೀಯ ಇಳಿಕೆ

ನಿಸರ್ಗ ಎಂ.ಎನ್‌
Published 13 ಮಾರ್ಚ್ 2017, 19:30 IST
Last Updated 13 ಮಾರ್ಚ್ 2017, 19:30 IST
ರಾಜ್ಯದ ಆದಾಯ ನುಂಗಿದ ನೋಟು ರದ್ದು
ರಾಜ್ಯದ ಆದಾಯ ನುಂಗಿದ ನೋಟು ರದ್ದು   

ಬೆಂಗಳೂರು: ಸಂಪತ್ತಿನ ಅಕ್ರಮ ಕ್ರೋಡೀಕರಣ ಹಾಗೂ ಕಪ್ಪು ಹಣ ತಡೆಯುವ ಉದ್ದೇಶದಿಂದ ಕಳೆದ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರದ   ಕೈಗೊಂಡ ನೋಟು  ರದ್ದತಿ ನಿರ್ಧಾರವು ರಾಜ್ಯದ ರಿಯಲ್ ಎಸ್ಟೆಟ್ ಉದ್ಯಮಕ್ಕೆ ಭಾರಿ ಹೊಡೆತ ಕೊಟ್ಟಿದ್ದು, ರಾಜ್ಯ ಸರ್ಕಾರದ ಆದಾಯಕ್ಕೂ ಕತ್ತರಿ ಹಾಕಿದೆ.

₹1000 ಮತ್ತು  ₹500  ಮುಖಬೆಲೆಯ ನೋಟುಗಳ ರದ್ದತಿಯಿಂದ ರಾಜ್ಯದೆಲ್ಲೆಡೆ, ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ, ಸ್ಥಿರಾಸ್ತಿಗಳ ಮಾರಾಟ ಮತ್ತು ಮರುಮಾರಾಟ ಪ್ರಕ್ರಿಯೆಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿವೆ. ಪರಿಣಾಮ, ಕೇವಲ ಮೂರು ತಿಂಗಳಿನಲ್ಲಿಯೇ ಮುದ್ರಾಂಕ ಮತ್ತು ನೋಂದಣಿ (ಸ್ಟಾಂಪ್ಸ್ ಅಂಡ್ ರಿಜಿಸ್ಟ್ರೇಷನ್ಸ್) ಯಲ್ಲಿ ಸರ್ಕಾರಕ್ಕೆ ಸುಮಾರು 608 ಕೋಟಿಯಷ್ಟು ಕಡಿಮೆಯಾಗಿದೆ.

ಮಾರಾಟದಲ್ಲಿ ಇಳಿಮುಖ: ಹಿಂದಿನ ವರ್ಷದಲ್ಲಿ ನಡೆದ ಸ್ಥಿರಾಸ್ತಿಗಳ ಮಾರಾಟ ಮತ್ತು ನೋಂದಣಿ ಸಂಖ್ಯೆಗಳನ್ನು ಆಧರಿಸಿ ಮುದ್ರಾಂಕ ಮತ್ತು ನೋಂದಣಿ ಇಲಾಖೆಯು ಮುಂದಿನ ವರ್ಷಕ್ಕೆ ಆಸ್ತಿ ಮಾರಾಟ ಮತ್ತು ಶುಲ್ಕ ಸಂಗ್ರಹ ಗುರಿ ನಿಗದಿ ಮಾಡುವುದು ವಾಡಿಕೆ.

ADVERTISEMENT

ಅದರಂತೆ, ನೋಟು ರದ್ದಾದ ಮೂರು ತಿಂಗಳ ನಂತರದಲ್ಲಿ ಕನಿಷ್ಠ 4,65,108 (ಕಳೆದ ಸಾಲಿನಲ್ಲಿ ಇದೇ ಅವಧಿಯಲ್ಲಿ ನೋಂದಣಿಯಾಗಿದ್ದ ಆಸ್ತಿಗಳ ಸಂಖ್ಯೆ) ಸ್ಥಿರಾಸ್ತಿಗಳ ಮಾರಾಟ ಆಗುತ್ತದೆ ಎಂದು ಇಲಾಖೆ ಅಂದಾಜಿಸಿತ್ತು.   ಆದರೆ, ಈ ಅವಧಿಯಲ್ಲಿ ನೋಂದಣಿಯಾದ ಆಸ್ತಿಗಳ ಸಂಖ್ಯೆ 3,52,377 ಎನ್ನುತ್ತವೆ ಇಲಾಖೆಯಲ್ಲಿನ ಅಂಕಿ-ಅಂಶ.

ಇಲಾಖೆಯು ಮುದ್ರಾಂಕ ಮತ್ತು ನೋಂದಣಿ ಶುಲ್ಕ ರೂಪದಲ್ಲಿ ₹ 2,444 ಕೋಟಿ ಆದಾಯ ಸಂಗ್ರಹಿಸುವ ಗುರಿ ಹಾಕಿಕೊಂಡಿತ್ತು. ಆದರೆ, ಸಂಗ್ರಹವಾದ ಮೊತ್ತ  ₹ 1,835.23 ಕೋಟಿ.  ಇದೇ ರೀತಿ ನಗರದ ವಹಿವಾಟಿನ ಮೇಲೂ ಪರಿಣಾಮ ಬೀರಿದೆ.

ಇದೇ ಅವಧಿ (2016 ನವೆಂಬರ್‌ನಿಂದ 2017 ಜನವರಿ)ಯಲ್ಲಿ ಬೆಂಗಳೂರಿನಲ್ಲಿ ಕನಿಷ್ಠ 95,679 ಆಸ್ತಿಗಳ ನೋಂದಣಿಯ ನಿರೀಕ್ಷೆ ಹಾಕಿಕೊಳ್ಳಲಾಗಿತ್ತು. ಆದರೆ, ಕೇವಲ 82,640 ಆಸ್ತಿಗಳು ನೋಂದಣಿಯಾದವು. ಬೆಂಗಳೂರಿನಲ್ಲಿ ಇಲಾಖೆಯು ಈ ಅವಧಿಯಲ್ಲಿ ₹1,611.43 ಕೋಟಿ ಆದಾಯ ಸಂಗ್ರಹ ಗುರಿ ಹಾಕಿಕೊಂಡಿತ್ತು. ಆದರೆ, ಸಂಗ್ರಹವಾದ ಮೊತ್ತ ₹1,317.53 ಕೋಟಿ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಭಾರಿ ಹೊಡೆತ: ಈ ಮೂರು ತಿಂಗಳಲ್ಲಿ  ನೋಂದಣಿಯಾದ ಆಸ್ತಿಗಳಲ್ಲಿ ಬಹುತೇಕ ನೋಟು ರದ್ಧತಿಗೂ ಮೊದಲೇ ಒಪ್ಪಂದ ಆಗಿದ್ದ ಆಸ್ತಿಗಳಾಗಿದ್ದವು.

‘ಮಾರ್ಚ್ ಬಳಿಕ ಆಸ್ತಿಗಳ ಮಾರಾಟ ಮತ್ತಷ್ಟು ಪ್ರಮಾಣದಲ್ಲಿ ಕುಸಿಯಲಿದ್ದು, ರಾಜ್ಯ ಸರ್ಕಾರಕ್ಕೆ ಈ ವರ್ಷಾಂತ್ಯದಲ್ಲಿ ಕನಿಷ್ಠ ₹3000 ಕೋಟಿ ಆದಾಯ ಕಡಿಮೆಯಾಗುವ ಸಾಧ್ಯತೆಯಿದೆ’ ಎಂದು ಹೆಸರು ಬಹಿರಂಗ ಪಡಿಸಿಕೊಳ್ಳಲು ಇಚ್ಛಿಸದ ಅಧಿಕಾರಿಯೊಬ್ಬರು  ತಿಳಿಸಿದರು.

ಅಪಾರ್ಟ್‌ಮೆಂಟ್ ಕೊಳ್ಳುವವರಿಲ್ಲ: ಇನ್ನು ಕನಿಷ್ಠ ಎರಡು ವರ್ಷ ವಸತಿ ನಿವೇಶನಗಳು, ಕೃಷಿ ಭೂಮಿ ಮತ್ತು ಅಪಾರ್ಟ್‌ಮೆಂಟ್‌ಗಳ ಮಾರಾಟ ಮತ್ತು ಮರುಮಾರಾಟ ಪ್ರಕ್ರಿಯೆ ಚೇತರಿಸಿಕೊಳ್ಳುವುದಿಲ್ಲ ಎನ್ನುತ್ತಾರೆ ಅವರು.

ಕಳೆದ ವರ್ಷದ (ರಾಜ್ಯ)ಅಂಕಿ ಅಂಶ ನವೆಂಬರ್ 2015 ರಿಂದ ಫೆ. 6, 2016ವರೆಗೆ
* 5,07,625 ನೋಂದಣಿಯಾದ ಆಸ್ತಿ ಸಂಖ್ಯೆ

* ₹1,959 ಕೋಟಿ ಸಂಗ್ರಹಿತ ಶುಲ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.