ADVERTISEMENT

ರಾಜ್ಯದ ಹಲವೆಡೆ ಮಳೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2016, 19:49 IST
Last Updated 8 ಜೂನ್ 2016, 19:49 IST
ರಾಜ್ಯದ ಹಲವೆಡೆ ಮಳೆ
ರಾಜ್ಯದ ಹಲವೆಡೆ ಮಳೆ   

ಬೆಂಗಳೂರು: ಕೊಡಗು ಜಿಲ್ಲೆಯಾದ್ಯಂತ ಬುಧವಾರ ಸಹ ಮಳೆಯ ಆರ್ಭಟ ಮುಂದುವರಿದಿದೆ. ಮಂಗಳವಾರ ಸಂಜೆಯಿಂದ ಬಿಡುವು ಕೊಟ್ಟಿದ್ದ ಮಳೆ ಬುಧವಾರ ಮಧ್ಯಾಹ್ನದ ಬಳಿಕ ಬಿರುಸುಗೊಂಡಿತು. ಮಡಿಕೇರಿ ನಗರದಲ್ಲಿ ಗುಡುಗು ಸಹಿತ ಮಳೆಯಾಯಿತು.

ತಲಕಾವೇರಿ, ಭಾಗಮಂಡಲ, ನಾಪೋಕ್ಲು, ಕಕ್ಕಬ್ಬೆ, ಮೂರ್ನಾಡು ಸುತ್ತಮುತ್ತ ಭಾರಿ ಮಳೆ ಸುರಿಯುತ್ತಿದೆ. ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪಲು ಸುತ್ತಮುತ್ತ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6ರ ವರೆಗೆ ನಿರಂತರವಾಗಿ ಮಳೆಯಾಗಿದೆ.

ಚಿತ್ರದುರ್ಗ  ಜಿಲ್ಲೆಯ ಹಲವೆಡೆ ಬುಧವಾರ ಮಧ್ಯಾಹ್ನದಿಂದ ಸಂಜೆಯವರೆಗೆ ಮಳೆಯಾಗಿದೆ. ಶಿವಮೊಗ್ಗ  ಜಿಲ್ಲೆಯಾದ್ಯಂತ ಬುಧವಾರ ಸಂಜೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ದಾವಣಗೆರೆ ನಗರ ಹಾಗೂ ತಾಲ್ಲೂಕು ಹೆಚ್ಚಿನ ಭಾಗದಲ್ಲಿ ಬುಧವಾರ ಗುಡುಗು ಸಹಿತ ಮಳೆಯಾಯಿತು. 

ಸಿಡಿಲಿಗೆ ಇಬ್ಬರು ಬಲಿ: ಮುಂಬೈ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ಬುಧವಾರ ರಭಸದ ಮಳೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸಿಡಿಲಿಗೆ ಇಬ್ಬರು ಬಲಿಯಾಗಿದ್ದರೆ, ಹಾವೇರಿ ಜಿಲ್ಲೆಯಲ್ಲಿ ಏಳು ಕಾರ್ಮಿಕರು ಗಾಯಗೊಂಡಿದ್ದಾರೆ.

ಬೆಳಗಾವಿಯ ಹುಕ್ಕೇರಿ ತಾಲ್ಲೂಕಿನ ಬಾಡ ಗ್ರಾಮದಲ್ಲಿ  ಹೊಲದಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜ ನಾಯಕಮನಿ (23) ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ. ಬೆಳಗಾವಿ ತಾಲ್ಲೂಕಿನ ಉಚಗಾಂವ್ ಗ್ರಾಮದ ಹೊಲದಲ್ಲಿ ಮೆಣಸಿನಕಾಯಿ ಬಿಡಿಸುವಾಗ ಸಿಡಿಲು ಬಡಿದು ರೂಪಾ ಕೊಣೆರಿ ಪುನ್ನಾಜಿತೆ (35) ಮೃತಪಟ್ಟಿದ್ದಾರೆ. 

ಹಾವೇರಿ ತಾಲ್ಲೂಕಿನ ದೇವಗಿರಿ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಏಳು ಕಾರ್ಮಿಕರು ಸಿಡಿಲಿನಿಂದ ಗಾಯಗೊಂಡಿದ್ದಾರೆ. ಬಳ್ಳಾರಿ, ಬಾಗಲಕೋಟೆ, ಬೆಳಗಾವಿ, ಉತ್ತರ ಕನ್ನಡ ಮತ್ತು ಹಾವೇರಿ ಜಿಲ್ಲೆಯಲ್ಲಿ ಬುಧವಾರ ಭಾರಿ ಮಳೆಯಾಗಿದ್ದರೆ ಧಾರವಾಡದಲ್ಲಿ ಇಡೀ ದಿನ ಜಿಟಿ ಜಿಟಿ ಮಳೆಯಾಗಿದೆ. ಗದಗ ಜಿಲ್ಲೆಯಲ್ಲಿ ತುಂತುರು ಮಳೆಯಾಗಿದೆ.

ಹುಬ್ಬಳ್ಳಿಯಲ್ಲಿಯೂ ಸ್ವಲ್ಪ ಹೊತ್ತು ಜಿಟಿ ಜಿಟಿ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮತ್ತು ಘಟ್ಟಪ್ರದೇಶ ಸೇರಿದಂತೆ ಜಿಲ್ಲೆಯಾದ್ಯಂತ ಮಳೆಯಾಗಿದ್ದು, ಶಿರಸಿ ತಾಲ್ಲೂಕಿನಲ್ಲಿ ಸುಮಾರು 2 ತಾಸಿಗೂ ಹೆಚ್ಚು ರಭಸದ ಮಳೆಯಾಗಿದೆ. ಬಳ್ಳಾರಿ ಜಿಲ್ಲೆಯ ಹೊಳಲು ಗ್ರಾಮದಲ್ಲಿ ಧಾರಾಕಾರ ಮಳೆಯಿಂದಾಗಿ ಮನೆ ಮತ್ತು ಅಂಗಡಿಗಳಿಗೆ ನೀರು ನುಗ್ಗಿದೆ.

ಇದಲ್ಲದೇ ರೈತರ ಕಣಗಳಿಗೆ ನೀರು ನುಗ್ಗಿ, ಬಣಿವೆಗಳು ಜಲಾವೃತವಾಗಿವೆ. ಬೀದರ್ ನಗರದಲ್ಲಿ ಬುಧವಾರ ಬೆಳಗಿನ ಜಾವ ಒಂದೂವರೆ ಗಂಟೆ ಕಾಲ ಭಾರಿ ಮಳೆ ಸುರಿಯಿತು.  ಮಳೆ ಅಬ್ಬರಕ್ಕೆ ಪಾಲಿಟೆಕ್ನಿಕ್ ಕಾಲೇಜಿನ ಆವರಣ ಗೋಡೆ ಕುಸಿದು ಕೆಲವು ಮನೆಗಳಿಗೆ ನೀರು ನುಗ್ಗಿದೆ. ಮನೆ ಅಂಗಳದಲ್ಲಿ ಕಟ್ಟಿದ್ದ ಹಸು ನೀರಿನಲ್ಲಿ ಮುಳುಗಿ ಮೃತಪಟ್ಟಿದೆ.

ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಾದ್ಯಂತ ಬುಧವಾರ ನಸುಕಿನ ಜಾವ ಸುಮಾರು ಒಂದೂವರೆ ತಾಸು ಭಾರಿ ಮಳೆ ಸುರಿಯಿತು. ಇದರಿಂದ ದೇಗಲಮಡಿ ಗ್ರಾಮದಲ್ಲಿ ಸುಮಾರು 40ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.

ಭದ್ರಾವತಿಯಲ್ಲಿ 8 ಸೆಂ.ಮೀ ಮಳೆ
ಬೆಂಗಳೂರು: ಬುಧವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಕರಾವಳಿ ಮತ್ತು ಉತ್ತರ ಒಳನಾಡಿನ ಹಲವೆಡೆ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ 8 ಸೆಂ.ಮೀ ಮಳೆಯಾಗಿದೆ. ಬೀದರ್, ಚಿಂಚೋಳಿ, ಆಗುಂಬೆ, ಕೊಟ್ಟಿಗೆಹಾರ, ಎಚ್.ಬಿ.ಹಳ್ಳಿ 5, ಬೇವೂರ್ 4, ಸುಬ್ರಹ್ಮಣ್ಯ, ಮಂಕಿ, ಸೊರಬ, ಕಳಸ, ಪಾವಗಡ 3, ಮಂಗಳೂರು, ಕಾರ್ಕಳ, ಕುಂದಾಪುರ, ಕಾರವಾರ, ಗೌರಿಬಿದ ನೂರು, ಕೊರಟಗೆರೆ 2, ಮಡಿಕೇರಿಯಲ್ಲಿ 1 ಸೆಂ.ಮೀ ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿ ಹಾಗೂ ರಾಜ್ಯದ ಕೆಲವೆಡೆ ಸಾಧಾರಣ ಮಳೆಯಾಗಲಿದೆ. ಜೂನ್ 9 ರಿಂದ 13 ರವರೆಗೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಧಿಕ ಮಳೆ ಸುರಿಯುವ ಸಂಭವವಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಬೀಳುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.