ADVERTISEMENT

ರಾಜ್ಯ ಸರ್ಕಾರದ ನಿರ್ಧಾರವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಖಂಡಿಸುತ್ತದೆ: ಶಾಮನೂರು ಶಿವಶಂಕರಪ್ಪ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 11:07 IST
Last Updated 20 ಮಾರ್ಚ್ 2018, 11:07 IST
ರಾಜ್ಯ ಸರ್ಕಾರದ ನಿರ್ಧಾರವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಖಂಡಿಸುತ್ತದೆ:  ಶಾಮನೂರು ಶಿವಶಂಕರಪ್ಪ
ರಾಜ್ಯ ಸರ್ಕಾರದ ನಿರ್ಧಾರವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಖಂಡಿಸುತ್ತದೆ: ಶಾಮನೂರು ಶಿವಶಂಕರಪ್ಪ   

ದಾವಣಗೆರೆ: ‘ಬಸವತತ್ವವನ್ನು ನಂಬುವವರಿಗೆ’ ಮಾತ್ರ ಪ್ರತ್ಯೇಕ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ಸಿಗಲಿದೆ ಎಂಬ ರಾಜ್ಯ ಸರ್ಕಾರದ ನಿರ್ಧಾರವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಖಂಡಿಸುತ್ತದೆ ಎಂದು ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.

ತಮ್ಮ ನಿವಾಸದಲ್ಲಿ ಮಂಗಳವಾರ ವೀರಶೈವ ಮಠಾಧೀಶರ ಜತೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಲಿಂಗಾಯತ ಹಾಗೂ ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರೆ ಸಂತಸವಾಗುತ್ತಿತ್ತು. ಆದರೆ, ‘ಬಸವತತ್ವ ಒಪ್ಪಿತ’ ಎಂಬ ಅಂಶ ಸೇರಿಸಿರುವುದು ಸರಿಯಲ್ಲ. ಬಸವಣ್ಣನ ತತ್ವಗಳನ್ನು ಒಪ್ಪುವುದು ಬಿಡುವುದು ಅವರವರಿಗೆ ಬಿಟ್ಟ ವಿಚಾರ’ ಎಂದು ವಾಗ್ದಾಳಿ ನಡೆಸಿದರು.

‘ಮಾಧ್ಯಮಗಳಲ್ಲಿ ಬಂದ ವರದಿ ನೋಡಿ ಸರ್ಕಾರದ ನಿರ್ಧಾರವನ್ನು ಮಹಾಸಭಾ ಸ್ವಾಗತಿಸುತ್ತದೆ ಎಂದು ಆತುರದ ಹೇಳಿಕೆ ನೀಡಿದ್ದೆ. ಬಳಿಕ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ನಿರ್ಧಾರ ಏಕಪಕ್ಷೀಯವಾಗಿದೆ ಎಂಬುದು ತಿಳಿದುಬಂತು. ಇದು ಅನ್ಯಾಯದ ಪರಮಾವಧಿ’ ಎಂದು ಶಾಮನೂರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ವೀರಶೈವ ಧರ್ಮ 12ನೇ ಶತಮಾನಕ್ಕಿಂತ ಮುಂಚಿತವಾಗಿ ಇರಲೇ ಇಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಪಂಚಾಚಾರ್ಯರು ಹುಟ್ಟುಹಾಕಿದ ವೀರಶೈವ ಧರ್ಮ ಪ್ರಾಚೀನವಾದುದು. ವೀರಶೈವ ಹಾಗೂ ಲಿಂಗಾಯತ ಎರಡೂ ಒಂದೇ ಎಂಬ ನಿರ್ಧಾರಕ್ಕೆ ಈಗಲೂ ಬದ್ಧವಾಗಿದ್ದು, ಸರ್ಕಾರದ ನಿರ್ಧಾರವನ್ನು ಒಪ್ಪುವ ಪ್ರಶ್ನೆಯೇ ಇಲ್ಲ ಎಂದರು.

ಎಲ್ಲ ಗೊಂದಲಗಳ ಕುರಿತು ಚರ್ಚಿಸಲು ಇದೇ 23ರಂದು ಬೆಂಗಳೂರಿನಲ್ಲಿ ಸಭೆ ಆಯೋಜಿಸಲಾಗಿದೆ. ಸರ್ಕಾರದ ನಿರ್ಧಾರಕ್ಕೆ ಪ್ರತಿಯಾಗಿ ಮಹಾಸಭಾದ ಮುಂದಿನ ನಡೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.