ADVERTISEMENT

ರಾಮನಗರ ಕಾಂಗ್ರೆಸ್‌ ನಾಯಕರ ಅತೃಪ್ತಿ ಬಯಲು

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:37 IST
Last Updated 25 ಮೇ 2017, 19:37 IST
ಬೆಂಗಳೂರು: ರಾಮನಗರ ಜಿಲ್ಲೆಯ ಕಾಂಗ್ರೆಸ್‌ ನಾಯಕರ ನಡುವಿನ ಅಸಮಾಧಾನ ಗುರುವಾರ ಬಯಲಿಗೆ ಬಂದಿದೆ.
 
ಪ್ರಮುಖರ ಜೊತೆ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ನಡೆಸಿದ ಸಭೆಯಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಸೇರಿದಂತೆ ಕೆಲವು ಶಾಸಕರು ಭಾಗವಹಿಸಿದರು.
 
ಆದರೆ, ಶಾಸಕ ಯೋಗೇಶ್ವರ್ ಮತ್ತು ಮಾಗಡಿ ಕಾಂಗ್ರೆಸ್ ಮುಖಂಡ ಎ. ಮಂಜು ಗೈರಾಗಿದ್ದರು. 2013ರ ಚುನಾ ವಣೆಯಲ್ಲಿ ಸೋಲು ಕಂಡಿದ್ದ ಮಂಜು, ಜೆಡಿಎಸ್‌ ಭಿನ್ನಮತೀಯ ಶಾಸಕ ಎಚ್‌.ಸಿ. ಬಾಲಕೃಷ್ಣ ಅವರ ಕಾಂಗ್ರೆಸ್‌ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
 
ಸಭೆಯ ಬಳಿಕ ಮಾತನಾಡಿದ ಶಿವ ಕುಮಾರ್, ‘ಯೋಗೇಶ್ವರ್ ನಮ್ಮ ನಾಯಕರು. ಮಾಗಡಿ ಮಂಜು ಕೂಡಾ ನಮ್ಮವರೇ. ಜಿಲ್ಲೆಯಲ್ಲಿ ಯಾವುದೇ ಅಸಮಾಧಾನ ಇಲ್ಲ’ ಎಂದು ಸಮರ್ಥಿಸಿಕೊಂಡರು. 
 
ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ನಾಯಕರ ಸಭೆಯ ಸಂದರ್ಭದಲ್ಲಿ ಸಂಸದ ಕೆ.ಎಚ್. ಮುನಿಯಪ್ಪ ನಡೆಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.
‘ಎತ್ತಿನಹೊಳೆ ಯೋಜನೆ ಶೀಘ್ರ ಪೂರ್ಣಗೊಳಿಸಬೇಕು. ಇಲ್ಲವಾದರೆ ಜನರ ಬಳಿ ಹೋಗುವುದು ಕಷ್ಟವಾಗು ತ್ತದೆ’ ಎಂದು ಮುಖ್ಯಮಂತ್ರಿ ಎದುರೇ ಅತೃಪ್ತಿ ಹೊರಹಾಕಿದರು.
****
ಷರೀಫ್ ಗರಂ
ಕಾಂಗ್ರೆಸ್‌ನ ಹಿರಿಯ ಮುಖಂಡ ಸಿ.ಕೆ.ಜಾಫರ್‌ ಷರೀಫ್‌ ಅವರ ಮನೆಗೆ ತೆರಳಿ ವೇಣುಗೋಪಾಲ್‌ ಅವರು ಮಾತುಕತೆ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನ ಹಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಷರೀಫ್‌ ಅಸಮಾಧಾನ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.

ಸಿದ್ದರಾಮಯ್ಯ ವರ್ತನೆಯಿಂದ ಬೇಸತ್ತು ಎಸ್‌.ಎಂ. ಕೃಷ್ಣ ಪಕ್ಷ ತೊರೆದಿದ್ದಾರೆ. ಮತ್ತೊಬ್ಬ ಮುಖಂಡ ವಿಶ್ವನಾಥ್‌ ಅವರೂ ಪಕ್ಷ ತೊರೆಯುವ ಹಾದಿಯಲ್ಲಿದ್ದಾರೆ ಎಂದು ವೇಣುಗೋಪಾಲ್ ಅವರಿಗೆ ತಿಳಿಸಿದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್‌ ಅವರೂ ಜೊತೆಗಿದ್ದರು.

ADVERTISEMENT
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.