ADVERTISEMENT

ರಾಹುಲ್ ಗಾಂಧಿ ಭೇಟಿ: ಸಿದ್ಧತೆಯ ಗಡಿಬಿಡಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2015, 20:18 IST
Last Updated 7 ಅಕ್ಟೋಬರ್ 2015, 20:18 IST

ಮಂಡ್ಯ: ಆತ್ಮಹತ್ಯೆ ಮಾಡಿಕೊಂಡ ಮಂಡ್ಯ ತಾಲ್ಲೂಕಿನ ಇಬ್ಬರು ರೈತರ ಮನೆಗಳಿಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಅ. 9ರಂದು ಕರೆದೊಯ್ಯಲು ನಿರ್ಧರಿಸಲಾಗಿದ್ದು, ಮೃತ ರೈತರ ಕುಟುಂಬದ ಸದಸ್ಯರನ್ನು ವಿ.ಸಿ ಫಾರಂಗೆ ಆಹ್ವಾನಿಸುವುದು ಕೈ ಬಿಡಲಾಗಿದೆ.

ಆತ್ಮಹತ್ಯೆ ಮಾಡಿಕೊಂಡ ಮೃತ ರೈತರ ಕುಟುಂಬದ ಸದಸ್ಯರನ್ನು ವಿ.ಸಿ ಫಾರಂಗೆ ಕರೆಸಿ, ರಾಹುಲ್‌ ಅವರಿಂದ ಸಾಂತ್ವನ ಹೇಳಿಸಲು ನಿರ್ಧರಿಸಲಾಗಿತ್ತು. ಈಗ ಅದರಲ್ಲಿ ಬದಲಾವಣೆ ಮಾಡಲಾಗಿದ್ದು, ಮಂಡ್ಯ ತಾಲ್ಲೂಕಿನ ಪಣಕನಹಳ್ಳಿ ಹಾಗೂ ಕೊತ್ತತ್ತಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತರ ಮನೆಗೆ ರಾಹುಲ್‌ ಗಾಂದಿ ಭೇಟಿ ನೀಡಿ, ಸಾಂತ್ವನ ಹೇಳಲಿದ್ದಾರೆ.

‘ಮೃತ ರೈತರ ಕುಟುಂಬದ ಸದಸ್ಯರನ್ನು ಆಹ್ವಾನಿಸುತ್ತಿಲ್ಲ. ಪ್ರಗತಿಪರ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ’ ಎನ್ನುತ್ತಾರೆ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್‌. ಆತ್ಮಾನಂದ. 

ಸಂವಾದದಲ್ಲಿ ಯಾರ್‌್ಯಾರು ಭಾಗಿ: ಜಿಲ್ಲೆಯ 50 ಪ್ರಗತಿಪರ ರೈತರನ್ನು ಆಯ್ಕೆ ಮಾಡಲಾಗಿದ್ದು, ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ವಿ.ಸಿ ಫಾರಂ ಕೃಷಿ ವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ 30 ವಿದ್ಯಾರ್ಥಿಗಳು (ಎಎಸ್‌ಸಿ ಅಗ್ರಿ, ಬಿಎಸ್‌ಸಿ ಅಗ್ರಿ ಹಾಗೂ ಡಿಪ್ಲೊಮಾ), ವಿ.ಸಿ ಫಾರಂ ಹಾಗೂ ಕಾಲೇಜಿನಲ್ಲಿರುವ 30 ಕೃಷಿ ವಿಜ್ಞಾನಿಗಳು ಸಂವಾದದಲ್ಲಿ ಭಾಗವಹಿಸಲಿದ್ದಾರೆ ಎನ್ನುತ್ತಾರೆ ವಿ.ಸಿ ಫಾರಂ ಡೀನ್‌ ಡಾ.ಟಿ. ಶಿವಶಂಕರ್‌.

ಸಿದ್ಧತೆಯ ಗಡಿಬಿಡಿ: ರಾಹುಲ್‌ ಭೇಟಿ ಅಂಗವಾಗಿ ವಿ.ಸಿ ಫಾರಂ, ಪಣಕನಹಳ್ಳಿ, ಕೊತ್ತತ್ತಿಯಲ್ಲಿ ಸಿದ್ಧತಾ ಕಾರ್ಯಗಳ ಗಡಿಬಿಡಿ ಶುರುವಾಗಿದೆ.

ರೈತರ ಮನೆಗಳಿಗೂ ಭೇಟಿ: ‘ನಾಲ್ಕು ದಿನಗಳಿಂದ ನಿತ್ಯ ಕೃಷಿ, ಪೊಲೀಸ್‌, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ನಿಮ್ಮ ಮನೆಗೆ ರಾಹುಲ್‌ ಗಾಂಧಿ ಅವರು ಬರಬಹುದು. ಅದಕ್ಕೆ ನೀವೆಲ್ಲ ಸಿದ್ಧರಾಗಿರಿ ಎಂದು ಹೇಳಿ ಹೋಗುತ್ತಿದ್ದಾರೆ’ ಎನ್ನುತ್ತಾರೆ ಪಣಕನಹಳ್ಳಿಯ ರೂಪಾ. ಕೊತ್ತತ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಮಾದೇಗೌಡ ಅವರ ಮನೆಗೂ ಅಧಿಕಾರಿಗಳು ಭೇಟಿ ನೀಡಿ, ರಾಹುಲ್‌ ಗಾಂಧಿ ಬರುತ್ತಾರೆ ಎಂದು ತಿಳಿಸಿದ್ದಾರೆ ಎನ್ನುತ್ತಾರೆ ಅವರ ಮಾವ ಎಂ. ನಂಜುಂಡೇಗೌಡ.
*
‘ರಾಹುಲ್ ಭೇಟಿ ರೈತರಿಗೆ ಶಾಪ’
ಬೆಂಗಳೂರು: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ ಎಂದು ಬಿಜೆಪಿ ವಕ್ತಾರ ಎಸ್. ಸುರೇಶ್ ಕುಮಾರ್ ವ್ಯಂಗ್ಯವಾಗಿ ಹೇಳಿದರು.

‘ಕಾಂಗ್ರೆಸ್ಸಿನ ರಾಜಕುಮಾರ ರಾಹುಲ್ ಅವರು ಬಂದಾಗ ಬಹಿರಂಗ ಸಮಾವೇಶ ನಡೆಸಲು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಒಂದು ಗ್ರಾಮದಲ್ಲಿ ಬೆಳೆದು ನಿಂತಿದ್ದ ಫಸಲನ್ನು ಕಟಾವು ಮಾಡಿದ್ದಾರೆ. ಇದಕ್ಕೆ ರಾಜ್ಯದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಉತ್ತರ ಕೊಡಬೇಕು’ ಎಂದು ಬುಧವಾರ ಆಗ್ರಹಿಸಿದರು.

ಬೆಂಗಳೂರಿನ ಬಿಪಿಒ ಉದ್ಯೋಗಿಯ ಮೇಲೆ ಟೆಂಪೊ ಟ್ರಾವೆಲರ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಬೆಂಗಳೂರಿನ ಚಿಕ್ಕಜಾಲದ ಬಾಲಕಿ ಸಂಗೀತಾ ಆತ್ಮಹತ್ಯೆ ‘ಪೊಲೀಸ್‌ ಇಲಾಖೆಯ ವೈಫಲ್ಯವನ್ನು ತೋರಿಸುತ್ತದೆ. ಪೊಲೀಸ್ ಇಲಾಖೆ ಇರುವುದು ಘಟನೆ ನಡೆದ ನಂತರ ಕ್ರಿಯಾಶೀಲವಾಗಲು ಅಲ್ಲ. ಇಂಥ ಘಟನೆಗಳನ್ನು ತಡೆಯುವ ಹೊಣೆ ಹೊರಬೇಕು’ ಎಂದು ಹೇಳಿದರು.

ಅಧ್ಯಕ್ಷರ ಆಯ್ಕೆ: ಬಿಜೆಪಿ ಆಂತರಿಕ ಚುನಾವಣಾ ಪ್ರಕ್ರಿಯೆ ಆರಂಭವಾಗಿದ್ದು, ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಡಿಸೆಂಬರ್‌ ಅಂತ್ಯಕ್ಕೆ ಮುನ್ನ ಪಕ್ಷದ ರಾಜ್ಯ ಘಟಕಕ್ಕೆ ಹೊಸ ಅಧ್ಯಕ್ಷರ ಆಯ್ಕೆಯೂ ಪೂರ್ಣಗೊಂಡಿರುತ್ತದೆ ಎಂದು ಪಕ್ಷದ ರಾಜ್ಯ ಘಟಕದ ಚುನಾವಣಾ ಅಧಿಕಾರಿ ಎಂ.ಬಿ. ಭಾನುಪ್ರಕಾಶ್ ಹೇಳಿದರು. ನ. 11ರಿಂದ 20ರ ನಡುವೆ ಮಂಡಲ ಅಧ್ಯಕ್ಷರ ಆಯ್ಕೆ, ನ. 21 ರಿಂದ 30ರ ನಡುವೆ ಜಿಲ್ಲಾ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದರು.
*
ರಾಹುಲ್‌ ಕಾರ್ಯಕ್ರಮಕ್ಕಾಗಿ ಹಾವೇರಿಯಲ್ಲಿ ಬೆಳೆ ನಾಶ ಮಾಡಿ ವೇದಿಕೆ ಸಿದ್ಧಪಡಿಸಿಲ್ಲ. ಬೆಳೆ ಕಟಾವು ಮಾಡಲಾಗಿತ್ತು. ಜಮೀನು ಮಾಲೀಕರ ಒಪ್ಪಿಗೆ ಪಡೆದು ವೇದಿಕೆ ನಿರ್ಮಿಸಲಾಗುತ್ತಿದೆ
– ಸಿದ್ದರಾಮಯ್ಯ ,
ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT