ADVERTISEMENT

ರೂ 680 ಕೋಟಿ ಖೋತಾ?

ರಾಜ್ಯದ ಅಬಕಾರಿ ವರಮಾನ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2014, 19:30 IST
Last Updated 18 ಡಿಸೆಂಬರ್ 2014, 19:30 IST

ಸುವರ್ಣ ವಿಧಾನಸೌಧ (ಬೆಳಗಾವಿ): ರಾಜ್ಯದ ಅಬಕಾರಿ ವರಮಾನ ಈ ಬಾರಿ ರೂ 680 ಕೋಟಿ ಕಡಿಮೆಯಾಗುವ  ಸಂಭವವಿದೆ ಎಂದು ರಾಜ್ಯ ಹಣಕಾಸಿನ ಮಧ್ಯ ವಾರ್ಷಿಕ ಪರಿಶೀಲನಾ ವರದಿ ಹೇಳಿದೆ.

ವರದಿಯನ್ನು ಗುರುವಾರ ವಿಧಾನ­ಸಭೆಯಲ್ಲಿ ಮಂಡಿಸಲಾಯಿತು. ಈ ಸಲ ರೂ 14,430 ಕೋಟಿ ಅಬಕಾರಿ ವರ­ಮಾನ ಸಂಗ್ರಹ ಗುರಿ ಹೊಂದಲಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಇದು ಶೇ 8.6ರಷ್ಟು ಹೆಚ್ಚು. ಆದರೆ ಮೊದಲ ಎರಡು ತ್ರೈಮಾಸಿಕ ಜಮೆಯನ್ನು ಅವಲೋಕಿಸಿದರೆ ವರಮಾನ  ಕಡಿಮೆ­ಯಾಗಲಿದೆ ಎಂದು ವರದಿ ಹೇಳಿದೆ.

ರೂ 7146 ಕೋಟಿ ಸಾಲ

2014-–15ನೇ ಸಾಲಿನ ಮೊದಲ 6 ತಿಂಗಳಿನಲ್ಲಿ ರಾಜ್ಯ ಸರ್ಕಾರ ರೂ 7,142 ಕೋಟಿ ಸಾಲ ಮಾಡಿದೆ. ಪ್ರಸಕ್ತ ಆರ್ಥಿಕ ವರ್ಷ ರೂ 19,142 ಕೋಟಿ ಮಾರುಕಟ್ಟೆ ಸಾಲ ಪಡೆಯಲು ಕೇಂದ್ರದ ಅನುಮೋದನೆ ಕೇಳಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ರೂ 8,500 ಕೋಟಿ ಸಾಲ ಪಡೆಯಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಈ ಪೈಕಿ ರೂ 6,500 ಕೋಟಿ ಸಾಲ ಪಡೆಯಲಾಗಿದೆ.

ADVERTISEMENT

ವರದಿಯ ಮುಖ್ಯಾಂಶಗಳು: ಇತ್ತೀಚಿನ ದಿನಗಳಲ್ಲಿ ಮಾರ್ಗಸೂಚಿ ದರಗಳ ಪರಿಷ್ಕರಣೆಯಿಂದಾಗಿ ನೋಂದಣಿ ಮತ್ತು ಮುದ್ರಾಂಕ  ಶುಲ್ಕದ ಆದಾಯ ಹೆಚ್ಚಾಗಿದೆ. ಆದರೆ ಮುಂಬರುವ ತಿಂಗಳುಗಳಲ್ಲಿ ನೋಂದಣಿ ಇಳಿಮುಖ­ವಾಗುವ ಸಂಭವ ಇದ್ದು ಈ ಆದಾಯದಲ್ಲಿಯೂ ಕೊರತೆಯಾಗ­ಬಹುದು. ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹಣೆಯಲ್ಲಿಯೂ ಅಲ್ಪ ಪ್ರಮಾಣದ ಏರಿಕೆ ಮಾತ್ರ ಆಗಿರುವ ಕಾರಣ ಕೇಂದ್ರದಿಂದ ರಾಜ್ಯಕ್ಕೆ ಹಂಚಿಕೆಯಾಗುವ ಹಣದ ಪ್ರಮಾಣವೂ ಕಡಿಮೆಯಾಗಬಹುದು.

ಅಬಕಾರಿ ಆದಾಯ ಸಂಗ್ರಹಣೆಯ ಕೊರತೆಯನ್ನು ಬಿಟ್ಟರೆ ಪ್ರಮುಖ ತೆರಿಗೆಗಳು ಮತ್ತು ತೆರಿಗೆಯೇತರ ಆದಾಯದಲ್ಲಿ ಅಂದಾಜನ್ನು ತಲುಪುವ ನಿರೀಕ್ಷೆಯಿದೆ. ಬಜೆಟ್‌ನಲ್ಲಿ ಅಂದಾಜಿಸಲಾದ ಗುರಿಯನ್ನು ಮುಟ್ಟಲು ಪರಿಣಾಮಕಾರಿ ತೆರಿಗೆ ಸಂಗ್ರಹ, ನಿರಂತರ ಪುನರಾವಲೋಕನ ಹಾಗೂ ಮೇಲ್ವಿಚಾರಣೆ ನಡೆಸಬೇಕು. ತೆರಿಗೆಯೇತರ ರಾಜಸ್ವ ಸಂಗ್ರಹಕ್ಕೂ ಆದ್ಯತೆ ನೀಡಬೇಕು ಎಂದು ವರದಿ ಸಲಹೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.