ADVERTISEMENT

ಲಂಚ ಪಡೆದವನಿಗೆ ಸಂಬಳ!

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 19:51 IST
Last Updated 29 ಜನವರಿ 2015, 19:51 IST

ಬಸವಕಲ್ಯಾಣ (ಬೀದರ್‌ ಜಿಲ್ಲೆ): ತಹಶೀಲ್ದಾರ್ ಕಚೇರಿಯ ಶಿರಸ್ತೇದಾ­ರನೊಬ್ಬ ಮತದಾರರ ಗುರುತಿನ ಚೀಟಿ ಮಾಡಿಸಿಕೊಡುವುದಾಗಿ ಹೇಳಿ ತೆಗೆದು­ಕೊಂಡಿದ್ದ ₨ 50 ಲಂಚವನ್ನು ಉಪ ಲೋಕಾ­ಯುಕ್ತ ಎಸ್.ಬಿ.­ಮಜಗೆ ಅವರು ಗುರುವಾರ ವ್ಯಕ್ತಿಗೆ ಹಿಂದಿರು­ಗಿಸುವಂತೆ ಮಾಡಿದರು.

ಕಚೇರಿ ಭೇಟಿಗೆ ಮಜಗೆ ಅವರು ಬಂದಾಗ ಸ್ಥಳ­ದಲ್ಲಿದ್ದ ವ್ಯಕ್ತಿಯೊಬ್ಬರು ‘ಮತದಾರರ ಗುರುತಿನಚೀಟಿ ಮಾಡಿಸಿ ಕೊಡುವುದಕ್ಕಾಗಿ ಶಿರಸ್ತೇದಾರ್‌ ಶ್ರೀಶೈಲ ₨50 ಲಂಚ­ವನ್ನು ಪಡೆದಿದ್ದಾರೆ’ ಎಂದು ದೂರಿದರು. ಆಗ ಮಜಗೆ ಅವರು ‘ಹಣವನ್ನು ತಕ್ಷಣ ವಾಪಸು ನೀಡ­­­ಬೇಕು, ಮುಂದೆ ಲಂಚವನ್ನು ತೆಗೆದುಕೊಳ್ಳ­ಬಾರದು’ ಎಂದು ಶ್ರೀಶೈಲ ಅವರಿಗೆ ತಾಕೀತು ಮಾಡಿದರು.

ಹಣ ಹಿಂದಿರುಗಿಸಿದ ಶ್ರೀಶೈಲ ಗಾಬರಿ­ಗೊಂಡರು. ಮೈ ಬೆವರಿತು. ತಲೆ ಸುತ್ತಿ ನೆಲದ ಮೇಲೆ ಕುಳಿತುಕೊಂಡರು. ಬಳಿಕ ಸುಧಾರಿಸಿಕೊಂಡು  ‘ನನಗೆ ಏಳು ತಿಂಗ­ಳಿಂದ ಸಂಬಳವೇ  ಆಗಿಲ್ಲ. ಸಂಕಟ ಅನುಭ­ವಿಸುತ್ತಿದ್ದೇನೆ. ಸಂಬಳ­ವನ್ನು ಕೊಡಿಸಬೇಕು’ ಎಂದು ಮಜಗೆ ಅವರಿಗೆ ವಿನಂತಿಸಿದರು.

ಅವರ ಪರಿಸ್ಥಿತಿ ಕಂಡು ಮಜಗೆ ಕನಿಕರಪಟ್ಟು ತಕ್ಷಣವೇ ತಹಶೀಲ್ದಾರ್ ಪಲ್ಲವಿ ಬೆಳಕೇರೆ ಅವರನ್ನು ಕರೆದು ಸಂಬಳವನ್ನು ನೀಡುವಂತೆ ಸೂಚಿಸಿದರು.

‘ಶ್ರೀಶೈಲ ಬೇರೆಡೆಯಿಂದ ಇಲ್ಲಿಗೆ ವರ್ಗವಾಗಿ ಬಂದಿದ್ದು ಅವರ ಸಂಬಳದ ಚೆಕ್ ಉಪ ಖಜಾನೆ ಅಧಿಕಾರಿಗಳ ಕಚೇರಿಯಲ್ಲಿದೆ. ಅದನ್ನು ತರಿಸಬೇ­ಕಾಗಿದೆ’ ಎಂದು ತಹಶೀಲ್ದಾರ್ ಸ್ಪಷ್ಟಪಡಿಸಿದರು. ಕೂಡಲೇ ₨70 ಸಾವಿರ ಚೆಕ್ ತರಿಸಿಕೊಟ್ಟರು.

ಪಟ್ಟಣಕ್ಕೆ ಬೆಳಿಗ್ಗೆ ಬಂದ ಉಪ ಲೋಕಾಯುಕ್ತರು ಸಂಜೆಯತನಕ ಇದ್ದರು. ಆ ಕಡೆ ಈ ಕಡೆ ಹೋದಂತೆ ಮಾಡಿ ತಹಶೀಲ್ದಾರ್ ಕಚೇರಿಗೆ ಮೂರು ಸಲ ಭೇಟಿ ನೀಡಿದರು.

ಕಚೇರಿಯ ವರಾಂಡದಲ್ಲಿ ನಿಂತಿದ್ದ ಜನರನ್ನು ಮಾತ­ನಾಡಿಸಿ ‘ಇಲ್ಲಿಗೆ ಏತಕ್ಕೆ ಬಂದಿದ್ದೀರಾ? ಏನು ಕೆಲಸ ಇದೆ?’ ಎಂದು ಪದೇ ಪದೇ ವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.