ADVERTISEMENT

ಲಕ್ಷ್ಮಿ ಹೆಬ್ಬಾಳ್ಕರ್‌ರಿಂದ ಹಣ ಹಂಚಿಕೆ ಆರೋಪ: ವೈರಲ್ ಆದ ವಿಡಿಯೊ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2017, 18:18 IST
Last Updated 6 ಏಪ್ರಿಲ್ 2017, 18:18 IST
ಲಕ್ಷ್ಮಿ ಹೆಬ್ಬಾಳ್ಕರ್‌ರಿಂದ ಹಣ ಹಂಚಿಕೆ ಆರೋಪ: ವೈರಲ್ ಆದ ವಿಡಿಯೊ
ಲಕ್ಷ್ಮಿ ಹೆಬ್ಬಾಳ್ಕರ್‌ರಿಂದ ಹಣ ಹಂಚಿಕೆ ಆರೋಪ: ವೈರಲ್ ಆದ ವಿಡಿಯೊ   

ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯ ಅಣ್ಣೂರುಕೇರಿ ಗ್ರಾಮದಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಮನೆಯೊಂದರಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದಾರೆ ಎನ್ನಲಾದ ವಿಡಿಯೊ ದೃಶ್ಯಾವಳಿಯು ವೈರಲ್ ಆಗಿದೆ.

ಜಿಲ್ಲೆಯ ಜನರ ಮೊಬೈಲ್ ಫೋನ್‌ಗಳಲ್ಲಿ ವ್ಯಾಟ್ಸ್‌ಆ್ಯಪ್‌ ಮೂಲಕ ಈ ದೃಶ್ಯಾವಳಿಯು ಹರಿದಾಡುತ್ತಿದೆ.

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವಿಗಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ಪೈಪೋಟಿಗೆ ಬಿದ್ದಿವೆ. ಹಾಗಾಗಿ, ಯಾವುದೇ ಪಕ್ಷದ ವರಿಷ್ಠರು ಸಭೆ, ಸಮಾರಂಭ, ಪ್ರಚಾರ ಸಭೆ ನಡೆಸಿದರೂ ಗುಪ್ತವಾಗಿ ಮೊಬೈಲ್‌ ಫೋನ್‌ಗಳಲ್ಲಿ ವಿಡಿಯೊ ಚಿತ್ರೀಕರಣ ಮಾಡುವುದು ನಡೆಯುತ್ತಿದೆ.

ADVERTISEMENT

ಮನೆಯೊಂದರಲ್ಲಿ ರಾತ್ರಿವೇಳೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಮುಖಂಡರೊಂದಿಗೆ ಕುಳಿತಿದ್ದಾರೆ. ಅವರ ಕೈಯಲ್ಲಿ ₹ 2,000 ಮೌಲ್ಯದ ನೋಟುಗಳಿವೆ. ಹಣ ಹಂಚುತ್ತಿರುವುದನ್ನು ಆ ಊರಿನ ಕೆಲವರು ಚಿತ್ರೀಕರಿಸಿದ್ದು, ದೃಶ್ಯಾವಳಿಯನ್ನು ಬಿಜೆಪಿ ಮುಖಂಡರಿಗೆ ನೀಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಯತ್ನಿಸಿದರೂ ಲಕ್ಷ್ಮಿ ಹೆಬ್ಬಾಳ್ಕರ್‌ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ವಿಡಿಯೊದಲ್ಲಿ ಏನಿದೆ
ಒಬ್ಬಬ್ಬರಾಗಿ ಮಹಿಳೆಯರನ್ನು ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ತಮ್ಮ ಮುಂಭಾಗಕ್ಕೆ ಕರೆಯುತ್ತಾರೆ. ನಂತರ ಅವರಿಗೆ ಕೈಮುಗಿಯುತ್ತಾರೆ. ಈ ವೇಳೆ ಮಹಿಳೆಯರು ವಿಡಿಯೊ ಚಿತ್ರೀಕರಣಕ್ಕೆ ಅಡ್ಡನಿಲ್ಲುತ್ತಾರೆ. ಹಾಗಾಗಿ, ಹಣ ನೀಡುತ್ತಿರುವುದು ಸ್ಪಷ್ಟವಾಗಿ ದಾಖಲಾಗಿಲ್ಲ. ಮಹಿಳೆಯರು ತೆರಳುವಾಗ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು ಎಂದು ಕೋರುತ್ತಾರೆ. ಅವರ ಪಕ್ಕದಲ್ಲಿ ಕುಳಿತುಕೊಂಡಿರುವ ಮಹಿಳೆಯೊಬ್ಬರು ಪುಸ್ತಕದಲ್ಲಿ ವಿವರ ದಾಖಲಿಸಿಕೊಳ್ಳುತ್ತಿರುವುದು ಸೆರೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.