ADVERTISEMENT

ಲಾಟರಿ ತನಿಖೆ ಸಿಬಿಐಗೆ

ಹಿರಿಯ ಸಚಿವರೊಂದಿಗೆ ಸಭೆ ನಂತರ ಸಿ.ಎಂ. ಘೋಷಣೆ

​ಪ್ರಜಾವಾಣಿ ವಾರ್ತೆ
Published 26 ಮೇ 2015, 19:30 IST
Last Updated 26 ಮೇ 2015, 19:30 IST

ಬೆಂಗಳೂರು: ಒಂದಂಕಿ ಲಾಟರಿ ಮತ್ತು ಮಟ್ಕಾ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಲಾಟರಿ ಹಗರಣದ ರೂವಾರಿ ಪಾರಿ ರಾಜನ್‌ ಬಂಧನದ ನಂತರ ಪ್ರಕರಣ ಹಲವು ತಿರುವುಗಳನ್ನು ಪಡೆಯುತ್ತಿದೆ. ಈ ನಡುವೆ ಜೆಡಿಎಸ್‌ ಮತ್ತು ಬಿಜೆಪಿ ಮುಖಂಡರು, ಸಿಬಿಐ ತನಿಖೆಗೆ ಆಗ್ರಹಿಸಿ ಪ್ರತಿಭಟಿಸುವುದಾಗಿಯೂ ಎಚ್ಚರಿಸಿದ್ದರು.

ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ಮಂಗಳವಾರ ಮಧ್ಯಾಹ್ನ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಹಿರಿಯ ಸಚಿವರ ಸಭೆ ಕರೆದು ಲಾಟರಿ ಹಗರಣದ ಬಗ್ಗೆ  ಚರ್ಚಿಸಿದರು. ಬಳಿಕ ಸಿಬಿಐ ತನಿಖೆಗೆ ಒಪ್ಪಿಸುವ ತೀರ್ಮಾನವನ್ನು ಅವರು  ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

‘2007ರಲ್ಲಿ ಲಾಟರಿ ನಿಷೇಧ ಆದಂದಿನಿಂದ  ಅಥವಾ ಅದರ ಹಿಂದಿನಿಂದಲೂ ಯಾರ್‌್ಯಾರ ಕಾಲದಲ್ಲಿ ಒಂದಂಕಿ ಲಾಟರಿ, ಮಟ್ಕಾ ದಂಧೆ ನಡೆದಿದೆ ಎಂಬುದು ಕೂಡ ಸಮಗ್ರ ತನಿಖೆಯಿಂದ ಹೊರಬರಲಿ ಎಂಬುದೂ  ಇದರ ಉದ್ದೇಶ’ ಎಂದು ಹೇಳಿದರು.

‘ತಮ್ಮ ಕಾಲದಲ್ಲಿ ಅಕ್ರಮ ಲಾಟರಿ ದಂಧೆ, ಮಟ್ಕಾ ಇರಲೇ ಇಲ್ಲ ಎಂಬ ವಿರೋಧ ಪಕ್ಷಗಳ ಮಾತಿನಲ್ಲಿ ಹುರುಳಿಲ್ಲ. ಹಾಗೆಂದು, ಅದು ನಡೆಯಲಿ ಎಂಬ ಭಾವನೆ ನಮ್ಮದಲ್ಲ. 2008ರಿಂದಲೂ ಈ ದಂಧೆ ನಡೆಯುತ್ತಲೇ ಬಂದಿದೆ. ದೂರು ದಾಖಲಾಗಿದೆ. ತನಿಖೆ ನಡೆದಿದೆ’ ಎಂದರು.

‘ಖಾಸಗಿ ವಾಹಿನಿಯಲ್ಲಿ  ವರದಿ ಬಂದ ಕೂಡಲೇ ಅಧಿಕಾರಿಗಳ ಸಭೆ ನಡೆಸಿ ಸಿಐಡಿ ತನಿಖೆಗೆ ಆದೇಶಿಸಿದ್ದೆ. ಸಿಐಡಿ ಮಧ್ಯಂತರ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ಐಜಿಪಿ ಅಲೋಕ್‌ ಕುಮಾರ್‌ ಅವರು ಹಗರಣದ ಪ್ರಮುಖ ಆರೋಪಿ ಜೊತೆ ಫೋನ್‌ ಸಂಪರ್ಕದಲ್ಲಿದ್ದರು ಎಂದು ವರದಿಯಲ್ಲಿ ಉಲ್ಲೇಖವಾಗಿರುವ ಕಾರಣ ಅವರನ್ನು ಅಮಾನತು ಮಾಡಲಾಗಿದೆ. ಐಜಿಪಿ ದರ್ಜೆ ಅಧಿಕಾರಿಯನ್ನೇ ಅಮಾನತು ಮಾಡಿರುವಾಗ ನಿರ್ಲಕ್ಷ್ಯ ವಹಿಸಿದ್ದೇವೆ ಎಂಬುದಕ್ಕೆ ಅರ್ಥವಿಲ್ಲ. ನಮ್ಮ ಸರ್ಕಾರ ಎಲ್ಲೂ ಬೇಜವಾಬ್ದಾರಿಯಿಂದ ನಡೆದುಕೊಂಡಿಲ್ಲ’ ಎಂದರು.

‘ರಾಜ್ಯದ ಎಲ್ಲ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಿದರೆ ನಮ್ಮ ಪೊಲೀಸರ ನೈತಿಕ ಸ್ಥೈರ್ಯಕ್ಕೆ ಧಕ್ಕೆಯಾಗುತ್ತದೆ. ಆದರೆ ಈ ಪ್ರಕರಣ ಅಂತರ್‌ರಾಜ್ಯಕ್ಕೆ ಸಂಬಂಧಿಸಿದ ಕಾರಣ ಸಿಬಿಐಗೆ ನೀಡಲಾಗುತ್ತಿದೆ’ ಎಂದು  ವಿವರಿಸಿದರು.

‘ಗೌಡರು ಪ್ರಧಾನಿಯಾಗಿದ್ದು ದುರ್ದೈವ’
‘ಲಾಟರಿ ಹಗರಣದಲ್ಲಿ ಮುಖ್ಯಮಂತ್ರಿ   ಮತ್ತು ಗೃಹಸಚಿವರು ಭಾಗಿಯಾಗಿದ್ದಾರೆ ಎಂದು ಹೇಳುವ ಮೂಲಕ  ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರು ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಅವರು ದೇಶದ ಪ್ರಧಾನಿಯಾಗಿದ್ದವರು. ಘನತೆಯಿಂದ ನಡೆದುಕೊಳ್ಳಬೇಕಿತ್ತು. ಸಾಕ್ಷ್ಯಾಧಾರ ಇಲ್ಲದೆ ಆರೋಪ ಮಾಡುತ್ತಿರುವುದು ನೋಡಿದರೆ ಅವರು ಪ್ರಧಾನಮಂತ್ರಿಯಾದದ್ದು ಈ ನಾಡಿನ ದುರ್ದೈವ’ ಎಂದು ಸಿ.ಎಂ ಹೇಳಿದರು.

‘ಗಣಿ ಹಗರಣದಲ್ಲಿ ತಮ್ಮ ಪುತ್ರನ ಮೇಲೆ ₹ 150 ಕೋಟಿ ಲಂಚದ ಆರೋಪ ಬಂದಾಗ ಸಿಬಿಐ ತನಿಖೆಗೆ ವಹಿಸಲು ದೇವೇಗೌಡರು ಒತ್ತಾಯ ಮಾಡಲಿಲ್ಲ. ಯಾಕೆ ಆಗ ಪುತ್ರ ವ್ಯಾಮೋಹ ಅಡ್ಡಿ ಬಂತೇ’ ಎಂದು ಅವರು  ಪ್ರಶ್ನಿಸಿದರು.

ಮಾಗಡಿಯಲ್ಲಿ ಲೋಕೋಪಯೋಗಿ ಹಗರಣದಲ್ಲಿ ಕುಮಾರಸ್ವಾಮಿ ಭಾಗಿಯಾಗಿದ್ದಾರೆ ಎಂದು ಭಟ್‌ ಸಮಿತಿ ವರದಿ ನೀಡಿತ್ತು.  ಆ ಪ್ರಕರಣವನ್ನು ಸಿಬಿಐಗೆ ನೀಡುವಂತೆ ದೇವೇಗೌಡರು ಸಲಹೆ ನೀಡಬಹುದಿತ್ತು ಎಂದರು. ಸಿಬಿಐ ಬಗ್ಗೆ ದೇವೇಗೌಡರಿಗೆ ಯಾವಾಗ ಜ್ಞಾನೋದಯವಾಯಿತೋ ಗೊತ್ತಿಲ್ಲ. ಈಗ ಸದಾ ಸಿಬಿಐ ಭಜನೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ‌‌

* ದೇವೇಗೌಡರು ಹಿಂದೆ ಸಿಬಿಐಯನ್ನು ‘ಚೋರ್‌ ಬಚಾವೋ ಸಂಸ್ಥೆ’ ಎಂದು ಲೇವಡಿ ಮಾಡಿದ್ದರು. ಬಿಜೆಪಿಯವರು ‘ಕಾಂಗ್ರೆಸ್‌ ಬ್ಯೂರೋ ಆಫ್‌ ಇಂಡಿಯಾ’ ಎಂದಿದ್ದರು.
-ಸಿದ್ದರಾಮಯ್ಯ

ಪ್ರಮುಖ ವ್ಯಕ್ತಿ ಮಗನ ಪಾತ್ರ: ಎಚ್‌ಡಿಕೆ ಆರೋಪ
ಬೆಂಗಳೂರು: ‘ಅಕ್ರಮ ಲಾಟರಿ ಮಾರಾಟ ದಂಧೆಯ ಸೂತ್ರಧಾರ‍ಪಾರಿ ರಾಜನ್‌, ರಾಜ್ಯದ ಅಧಿಕಾರ ಸ್ಥಾನದಲ್ಲಿರುವ ಪ್ರಮುಖ ವ್ಯಕ್ತಿಯೊಬ್ಬರ ಮಗನನ್ನು ಈ ಹಿಂದೆ ಭೇಟಿ ಮಾಡಿ, ವ್ಯವಹಾರ ಕುದುರಿಸಲು ಯತ್ನಿಸಿದ್ದ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಆರೋಪಿಸಿದರು.

ADVERTISEMENT

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಚೆಗೆ ವಿಧಾನ ಪರಿಷತ್‌ ಸದಸ್ಯರಾಗಿರುವ ರಾಜಕಾರಣಿಯ ಜೊತೆಗೂಡಿ ಪಾರಿ ರಾಜನ್‌, ಪ್ರಮುಖ ವ್ಯಕ್ತಿಯ ಪುತ್ರನನ್ನು ಭೇಟಿಯಾಗಿದ್ದ’ ಎಂದು ಹೇಳಿದರು.

‘ಅಲ್ಲಿ ನಡೆದ ಮಾತುಕತೆ ವೇಳೆ, ಪ್ರಮುಖ ವ್ಯಕ್ತಿಯ ಪುತ್ರನಿಂದ ₹ 100 ಕೋಟಿಗೆ ಬೇಡಿಕೆ ಬಂತು. ಆದರೆ ಲಾಟರಿ ದಂಧೆಯ ಸೂತ್ರದಾರ‌ ಮಾರ್ಟಿನ್‌ ಈ ಮೊತ್ತಕ್ಕೆ ಒಪ್ಪಲಿಲ್ಲ. ₹ 10 ಕೋಟಿಗೆ ವ್ಯವಹಾರ ಕುದುರಿಸೋಣ ಎಂದು ರಾಜನ್‌ ಮೂಲಕ ಹೇಳಿಸಿದ. ಆದರೆ ಇದು ಈ ಕಡೆಯವರಿಗೆ ಒಪ್ಪಿಗೆಯಾಗಲಿಲ್ಲ’ ಎಂದು ಕುಮಾರಸ್ವಾಮಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.