ADVERTISEMENT

ಲೋಕಾಯುಕ್ತರಿಗೆ ಸಿ.ಎಂ ರಕ್ಷಣೆ

ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಆರೋಪ

​ಪ್ರಜಾವಾಣಿ ವಾರ್ತೆ
Published 7 ಜುಲೈ 2015, 19:51 IST
Last Updated 7 ಜುಲೈ 2015, 19:51 IST

ಬೆಳಗಾವಿ: ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರಕ್ಷಿಸುತ್ತಿ ದ್ದಾರೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ವಿಧಾನಸಭೆಯಲ್ಲಿ ಮಂಗಳವಾರ ಆರೋಪಿಸಿದರು.

ಈ ಆರೋಪ ತಳ್ಳಿಹಾಕಿದ ಸಿದ್ದರಾಮಯ್ಯ, 'ನಾವು ಯಾರನ್ನೂ ರಕ್ಷಿಸುತ್ತಿಲ್ಲ. ಎರಡು ವರ್ಷಗಳ ನಮ್ಮ ಆಡಳಿತದಲ್ಲಿ ಯಾವುದೇ ದೋಷ ಕಾಣದ ಕಾರಣ ವಿರೋಧ ಪಕ್ಷಗಳು ಈ ವಿಚಾರವನ್ನು ಅನಗತ್ಯವಾಗಿ ಎಳೆಯುತ್ತಿವೆ' ಎಂದು ತಿರುಗೇಟು ನೀಡಿದರು. 

ಹೊಂದಾಣಿಕೆ: ಭ್ರಷ್ಟಾಚಾರ ಆರೋಪ ಕುರಿತು ಲೋಕಾಯುಕ್ತ ಬೆಂಗಳೂರು ಎಸ್ ಪಿ ಸೋನಿಯಾ ನಾರಂಗ್ ದಾಖಲಿಸಿದ್ದ ಎಫ್ಐಆರ್ ಗೆ ಹೈಕೋರ್ಟ್ ತಡೆ ನೀಡಿದೆ. ಭ್ರಷ್ಟಾಚಾರ ಕುರಿತು ತನಿಖೆಗೆ ಸರ್ಕಾರ ವಿಶೇಷ ತನಿಖಾ ತಂಡ (ಎಸ್ ಐಟಿ) ರಚಿಸಿದೆ. ಆದರೆ, ಎಸ್ಐಟಿ ತನಿಖೆ ಇನ್ನೂ ಆರಂಭವೇ ಆಗಿಲ್ಲ. ಮೊದಲಿನ ಎಫ್ಐಆರ್‌ಗೆ ತಡೆಯಾಜ್ಞೆ ಇದೆ. ಏನು ಇದರ ಅರ್ಥ? ಸರ್ಕಾರ ಮತ್ತು ಲೋಕಾಯುಕ್ತರ ನಡುವೆ ಹೊಂದಾಣಿಕೆ ಆಗಿದೆ ಎನಿಸುತ್ತದೆ' ಎಂದು ಶೆಟ್ಟರ್ ಆರೋಪಿಸಿದರು.

ಸಿ.ಎಂ ವಿವರಣೆ: ಲೋಕಾಯುಕ್ತ ಸಂಸ್ಥೆಗೆ ಸಂಬಂಧಿಸಿದ ಪ್ರಕರಣದ ಬಗ್ಗೆ ಸ್ವಯಂಪ್ರೇರಿತವಾಗಿ ತನಿಖೆಗೆ ಆದೇಶಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಲೋಕಾಯುಕ್ತ ರಿಜಿಸ್ಟ್ರಾರ್ ಸರ್ಕಾರಕ್ಕೆ ಬರೆದ ಎರಡು ಪತ್ರಗಳಲ್ಲಿ (ಜೂನ್ 27 ಮತ್ತು 28ಕ್ಕೆ ಬರೆದಿದ್ದು) ಎಸ್ಐಟಿ ತನಿಖೆಯನ್ನೇ ನಡೆಸುವಂತೆ ಹೇಳಿದ್ದಾರೆ. ಹಾಗಾಗಿ ಎಸ್ಐಟಿ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಸದನಕ್ಕೆ ವಿವರಿಸಿದರು.

ಎಫ್ಐಆರ್ ಏಕೆ ದಾಖಲಿಸಲಿಲ್ಲ: ಲೋಕಾಯುಕ್ತ ಕಚೇರಿಯಲ್ಲಿ ಕೃಷ್ಣರಾವ್ ಎಂಬ ವ್ಯಕ್ತಿ ಲೋಕೋಪಯೋಗಿ ಎಂಜಿ
ನಿಯರ್ ಕೃಷ್ಣಮೂರ್ತಿ ಬಳಿ ₨ 1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾದ ಪ್ರಕರಣದ ಬಗ್ಗೆ ಪ್ರಥಮ ಮಾಹಿತಿ ವರದಿ (ಎಫ್ಐಆರ್) ಏಕೆ ದಾಖಲಿಸಲಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
'ಹೆದರಿ ಕೂರುವುದಿಲ್ಲ': 'ನನ್ನ ಮತ್ತು ಬಿಜೆಪಿಯ ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸುತ್ತಾರೆ. ಸರ್ಕಾರವೇ ನನ್ನ ವಿರುದ್ಧ ಎಫ್ಐಆರ್ ಹಾಕಿಸಿದೆ. ಆದರೆ ಇದಕ್ಕೆ ಹೆದರಿ ಕೂರುವುದಿಲ್ಲ, ಎದುರಿಸುತ್ತೇನೆ' ಎಂದರು.

ಅರ್ಕಾವತಿ ಡಿನೋಟಿಫಿಕೇಷನ್ ಮತ್ತು ಗಣಿ ಗುತ್ತಿಗೆ ನವೀಕರಣಕ್ಕೆ ಸಂಬಂಧಿಸಿದಂತೆ ಸಿ.ಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ಇದೆ. ಹಾಗಾಗಿ, ಸಿ.ಎಂ ಮೃದುವಾಗಿದ್ದಾರೆ. -ಜಗದೀಶ ಶೆಟ್ಟರ್, ವಿರೋಧ ಪಕ್ಷದ ನಾಯಕ

ADVERTISEMENT

ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ ಎಂಬ ಕಾರಣಕ್ಕೆ ಲೋಕಾಯುಕ್ತರನ್ನು ರಕ್ಷಿಸುತ್ತಿದ್ದೇನೆ ಎಂಬ ಆರೋಪ ದುರುದ್ದೇಶದ್ದು. ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳಲಿ. -ಸಿದ್ದರಾಮಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.