ADVERTISEMENT

ವರದಿ ಮಂಡನೆಗೆ ಒತ್ತಡ ಹೇರಲು ನಿರ್ಧಾರ

ಸರ್ಕಾರಿ ಶಾಲೆಗಳ ಸಬಲೀಕರಣ: ಶಿಕ್ಷಣ ತಜ್ಞರು, ಸಾಹಿತಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 19:30 IST
Last Updated 30 ನವೆಂಬರ್ 2017, 19:30 IST
ಸರಕಾರಿ ಶಾಲೆಗಳ ಸಬಲೀಕರಣ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕರೆದಿದ್ದ ಸಭೆಯಲ್ಲಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಮತ್ತು ರಘು ಆಚಾರ್, ವಿ.ಪಿ. ನಿರಂಜನಾರಾಧ್ಯ, ನಿವೃತ್ತ ನ್ಯಾಯಾಧೀಶ ಕೋ. ಚನ್ನಬಸಪ್ಪ, ಪ್ರಾಧಿಕಾರದ ಕಾರ್ಯದರ್ಶಿ ಮುರಳೀಧರ, ಗೊ.ರು.ಚನ್ನಬಸಪ್ಪ, ಕೆ.ಮರುಳಸಿದ್ದಪ್ಪ ಉಪಸ್ಥಿತರಿದ್ದರು  –ಪ್ರಜಾವಾಣಿ ಚಿತ್ರ
ಸರಕಾರಿ ಶಾಲೆಗಳ ಸಬಲೀಕರಣ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕರೆದಿದ್ದ ಸಭೆಯಲ್ಲಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಮತ್ತು ರಘು ಆಚಾರ್, ವಿ.ಪಿ. ನಿರಂಜನಾರಾಧ್ಯ, ನಿವೃತ್ತ ನ್ಯಾಯಾಧೀಶ ಕೋ. ಚನ್ನಬಸಪ್ಪ, ಪ್ರಾಧಿಕಾರದ ಕಾರ್ಯದರ್ಶಿ ಮುರಳೀಧರ, ಗೊ.ರು.ಚನ್ನಬಸಪ್ಪ, ಕೆ.ಮರುಳಸಿದ್ದಪ್ಪ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಸಮಗ್ರ ವರದಿಯನ್ನು ಸದನದಲ್ಲಿ ಮಂಡಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಮೇಲೆ ಮತ್ತೊಮ್ಮೆ ಒತ್ತಡ ಹೇರಲು ಗುರುವಾರ ನಡೆದ ಶಿಕ್ಷಣ ತಜ್ಞರು, ಸಾಹಿತಿಗಳು ಮತ್ತು ಕನ್ನಡ ಪರ ಚಿಂತಕರ ಸಭೆ ನಿರ್ಧರಿಸಿತು.

‘ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿ ಕಲಿಯಬೇಕು’ ಎಂದು ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ಯತ್ನಿಸಿದ ಖಾಸಗಿ ಮಸೂದೆ ಕುರಿತು ಚರ್ಚಿಸಲು ಸಭೆ ನಡೆಯಿತು.

ಸದನದಲ್ಲಿ ಸಮಗ್ರ ವರದಿ ಮಂಡಿಸುವ ಸಂಬಂಧ ತನ್ವೀರ್ ಸೇಠ್ ಅವರನ್ನು ಶೀಘ್ರದಲ್ಲಿಯೇ ಭೇಟಿ ಮಾಡಿ ಒತ್ತಾಯಿಸಬೇಕು. ಒಂದು ವೇಳೆ ಅವರು ಒಪ್ಪದಿದ್ದರೆ ಬೇರೆ ಮಾರ್ಗಗಳ ಮೂಲಕ ವರದಿ ಮಂಡಿಸುವ ಕುರಿತು ಅವರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಭೆ ನಿರ್ಣಯಿಸಿತು.

ADVERTISEMENT

ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ‘ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಸರ್ಕಾರವೇ ನೇಮಿಸಿದ ಸಮಿತಿ ಈಗಾಗಲೇ 21 ಶಿಫಾರಸುಗಳನ್ನು ಒಳಗೊಂಡ ವರದಿ ಸಲ್ಲಿಸಿದೆ. ವರದಿಯನ್ನು ಉಭಯ ಸದನಗಳಲ್ಲಿ ಮಂಡಿಸಿ ಚರ್ಚಿಸುವುದು ಉತ್ತಮ’ ಎಂದರು.

‘ಸರ್ಕಾರಿ ನೌಕರರು, ಜನಪ್ರತಿನಿಧಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಡ್ಡಾಯವಾಗಿ ಓದಬೇಕು ಎಂದು ರಘು ಆಚಾರ್ ಮಂಡಿಸಲೆತ್ನಿಸಿದ ಖಾಸಗಿ ಮಸೂದೆ ಸ್ವಾಗತಾರ್ಹ. ಆದರೆ, ಇದು ವರದಿಯಲ್ಲಿನ ಒಂದು ಶಿಫಾರಸು ಅಷ್ಟೇ. ಅದೊಂದನ್ನೇ ಪ್ರಧಾನವಾಗಿ ಪರಿಗಣಿಸಿದರೆ ವರದಿ ಕಡೆಗಣಿಸಿದಂತಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಸರೋಜಿನಿ ಮಹಿಷಿ ವರದಿಯಲ್ಲಿನ 14 ಅಂಶಗಳ ಪೈಕಿ ಕೇವಲ ಎರಡು ಶಿಫಾರಸುಗಳ ಬಗ್ಗೆ ಮಾತ್ರ ಚರ್ಚೆ ಮಾಡಿರುವುದು ಮತ್ತು ಇತ್ತೀಚಿನ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ  ಮಸೂದೆಯಲ್ಲೂ ಒಂದೆರಡು ಅಂಶಗಳ ಬಗ್ಗೆ ಮಾತ್ರ ಪ್ರಧಾನವಾಗಿ ಚರ್ಚೆ ಮಾಡಿದ್ದರಿಂದ ಇಡೀ ವರದಿಯನ್ನೇ ನಿರ್ಲಕ್ಷ್ಯ ಮಾಡಿದಂತಾಗಿದೆ. ಬಳಿಕ ಅದು ಸತ್ವ ಇಲ್ಲದೆ ಮಂಡನೆಯಾಗುತ್ತದೆ. ಸರ್ಕಾರಿ ಶಾಲೆಗಳ ವಿಷಯದಲ್ಲಿ ಹೀಗಾಗಬಾರದು’ ಎಂದು ಹೇಳಿದರು.

ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ, ‘ಸರ್ಕಾರಿ ನೌಕರರ ಮಕ್ಕಳು ಸರ್ಕಾರಿ ಶಾಲೆಯಲ್ಲೇ ಓದಬೇಕು ಎಂಬುದು ಸಬಲೀಕರಣ ಸಮಿತಿಯಲ್ಲಿನ ಒಂಬತ್ತನೇ ಶಿಫಾರಸು. ಇದಕ್ಕೆ ಮುಂಚಿನ ಶಿಫಾರಸುಗಳಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚದಿರುವುದು, ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವುದು, ಶಿಕ್ಷಕರನ್ನು ಬೋಧನಾ ಕಾರ್ಯಕ್ಕೆ ಮಾತ್ರ ತೊಡಗಿಸುವ ವಿಷಯಗಳಿವೆ. ಇವು ಜಾರಿಯಾದರೆ ಮಾತ್ರ ಒಂಬತ್ತನೇ ಶಿಫಾರಸಿಗೆ ಅರ್ಥ ಬರುತ್ತದೆ’ ಎಂದು ನುಡಿದರು.

ಕುವೆಂಪು ಭಾಷಾ ಭಾರತಿ ಅಧ್ಯಕ್ಷ ಕೆ. ಮರುಳಸಿದ್ದಪ್ಪ, ‘ಸರ್ಕಾರ ಸುಲಭವಾಗಿ ಜಾರಿ ಮಾಡಬಹುದಾದ ಶಿಫಾರಸುಗಳಿಗೆ ಕೂಡಲೇ ಆದೇಶ ಹೊರಡಿಸುವಂತೆ ಒತ್ತಡ ತರಬೇಕು. ಕಾನೂನು ರಚಿಸುವ ಮೂಲಕ ಜಾರಿ ಮಾಡಬೇಕಾದಂತಹ ವಿಷಯಗಳಿಗೆ ಸಮಯಾವಕಾಶ ನೀಡಬಹುದು’ ಎಂದು ಸಲಹೆ ನೀಡಿದರು.
*
‘ಖಾಸಗಿ ಮಸೂದೆ ವಾಪಸ್ ಪಡೆಯುತ್ತೇನೆ’
‘ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಸರ್ಕಾರವೇ ಸಮಗ್ರ ವರದಿ ಮಂಡಿಸಿದರೆ ನಾನು ಖಾಸಗಿ ಮಸೂದೆ ಮಂಡಿಸುವುದಿಲ್ಲ’ ಎಂದು ರಘು ಆಚಾರ್ ಹೇಳಿದರು.

‘ಸರ್ಕಾರಿ ನೌಕರರು ಮತ್ತು ಜನಪ್ರತಿನಿಧಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಿದರೆ ಆ ಶಾಲೆಯ ಬಗ್ಗೆ ನಿಗಾ ಹೆಚ್ಚುತ್ತದೆ. ಆ ಮೂಲಕ ಶಾಲೆಗಳ ಅಭಿವೃದ್ಧಿಯಾಗುತ್ತದೆ ಎಂಬುದಷ್ಟೇ ನನ್ನ ಉದ್ದೇಶವಾಗಿತ್ತು. ಈ ಸಂಬಂಧ ಎಲ್ಲರೊಂದಿಗೆ ಚರ್ಚಿಸಿ ಸದನದಲ್ಲಿ ಪ್ರಸ್ತಾಪ ಮಾಡಿದ್ದೆ. ಆದರೆ, ಪ್ರಾಧಿಕಾರದಿಂದ ಸಮಗ್ರ ವರದಿ ನೀಡಿರುವ ಬಗ್ಗೆ ನನಗೆ ಮಾಹಿತಿ ಇರಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.