ADVERTISEMENT

ವರಿಷ್ಠರ ವಿರುದ್ಧ ರಾಜೀನಾಮೆಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2016, 19:37 IST
Last Updated 30 ಜುಲೈ 2016, 19:37 IST

ವಿಜಯಪುರ: ಜಿಲ್ಲಾ ಜೆಡಿಎಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದ್ದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ.ಮನಗೂಳಿ ಅವರೇ ವರಿಷ್ಠರ ವಿರುದ್ಧ ಹರಿಹಾಯ್ದಿದ್ದಾರೆ. ಇದೇ ವಿದ್ಯಮಾನ ಮುಂದುವರಿದರೆ ಸಾಮೂಹಿಕ ರಾಜೀನಾಮೆ ನೀಡುವ ಚಿಂತನೆಯೂ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ನಗರದಲ್ಲಿನ ಜಿಲ್ಲಾ ಘಟಕದ ಕಚೇರಿಯಲ್ಲಿ ಶನಿವಾರ ಜಿಲ್ಲೆಯ ಮುಖಂಡರು ಪ್ರಮುಖರ ಸಭೆ ಆಯೋಜಿಸಿದ್ದರು. ಈ ಸಭೆಯಲ್ಲಿ, ಈಚೆಗೆ ವರಿಷ್ಠರು ತೆಗೆದುಕೊಂಡ ನಿರ್ಧಾರಗಳ ವಿರುದ್ಧ ತೀವ್ರ ಅಸಮಾಧಾನ ಭುಗಿಲೆದ್ದಿತು ಎಂದು ಪಕ್ಷದ ಪ್ರಮುಖ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಕ್ಷದ ವರಿಷ್ಠರ ನಡೆಯಿಂದಾಗಿಯೇ ಜೆಡಿಎಸ್‌ ದಿನದಿಂದ ದಿನಕ್ಕೆ ಅಧಃಪತನದತ್ತ ಸಾಗುತ್ತಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿಯೂ ತನ್ನ ಛಾಪು ಕಳೆದುಕೊಳ್ಳುತ್ತಿದೆ. ಗ್ರಾಮ ಪಂಚಾಯ್ತಿಯಿಂದ ಹಿಡಿದು ಜಿಲ್ಲಾ ಪಂಚಾಯ್ತಿ, ಮಹಾನಗರ ಪಾಲಿಕೆಯಿಂದ ಹಿಡಿದು ಪಟ್ಟಣ ಪಂಚಾಯ್ತಿಗಳಲ್ಲೂ ಪಕ್ಷ ನಿರ್ಣಾಯಕ ಪಾತ್ರ ವಹಿಸುವ ಮಹತ್ವದ ಸ್ಥಾನಮಾನದಲ್ಲಿದ್ದರೂ, ಮುಖಂಡರ ತಾತ್ಸಾರದಿಂದ ಎಲ್ಲೆಡೆ ಅಧಿಕಾರದಿಂದ ವಂಚಿತವಾಗುತ್ತಿದೆ. ಇದಕ್ಕೆ ಪಕ್ಷದ ರಾಜ್ಯ ವರಿಷ್ಠರೇ ಮೂಲ ಕಾರಣ ಎಂದು ದೇವೇಗೌಡರ ಪರಮಾಪ್ತರು ಎಂದೇ ಬಿಂಬಿತಗೊಂಡಿರುವ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ.ಮನಗೂಳಿ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದು, ತಲ್ಲಣ ಸೃಷ್ಟಿಸಿದೆ’ ಎಂದು ಸಭೆಯಲ್ಲಿ ಹಾಜರಿದ್ದ  ಅವರು ಹೇಳಿದರು.

ಜಿಲ್ಲಾ ಪದಾಧಿಕಾರಿಗಳು, ಪಕ್ಷದ ಎಲ್ಲ ಘಟಕಗಳ ಅಧ್ಯಕ್ಷ, ಪದಾಧಿಕಾರಿಗಳನ್ನು ನೇಮಕ ಮಾಡುವುದು ಜಿಲ್ಲಾ ಘಟಕದ ಅಧ್ಯಕ್ಷರ ಕೆಲಸ. ಆದರೆ ಪಕ್ಷದ ವರಿಷ್ಠರು ಬೆಂಗಳೂರಿನಲ್ಲಿ ಕುಳಿತು ತಮ್ಮನ್ನು ಭೇಟಿಯಾದ ಕಾರ್ಯಕರ್ತರಿಗೆ ಪದಾಧಿಕಾರಿ ಹುದ್ದೆ ಕೊಡುತ್ತಿದ್ದಾರೆ ಎಂದು ಮನಗೂಳಿ ಸಭೆಯಲ್ಲಿ ದೂರಿದರು.

ಭಿನ್ನಾಭಿಪ್ರಾಯವಿಲ್ಲ: ಮನಗೂಳಿ
ಜಿಲ್ಲಾ ಘಟಕದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ದೇವರಹಿಪ್ಪರಗಿ ಶಾಸಕ ಎ.ಎಸ್‌.ಪಾಟೀಲ ಕಾಂಗ್ರೆಸ್‌ ತೊರೆಯದಿದ್ದರೂ, ಪಕ್ಷದ ಜವಾಬ್ದಾರಿ ನೀಡುತ್ತಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಇದೇ ಸಂದರ್ಭ ಪಕ್ಷದ ಸಂಘಟನೆ ವಿಚಾರವಾಗಿ ವರಿಷ್ಠರ ವಿರುದ್ಧ ಅಸಮಾಧಾನ ವ್ಯಕ್ತವಾಗಿದ್ದು ನಿಜ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ.ಮನಗೂಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.