ADVERTISEMENT

ವರ್ತೂರು ವಿರುದ್ಧ ತನಿಖೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2015, 19:30 IST
Last Updated 29 ಮಾರ್ಚ್ 2015, 19:30 IST

ಬೆಂಗಳೂರು: ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ಲಾರಿಗಳನ್ನು ವಶಪಡಿಸಿಕೊಂಡ ತಹಶೀಲ್ದಾರ್‌ಗೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಕೋಲಾರ ಶಾಸಕ ವರ್ತೂರು ಪ್ರಕಾಶ್ ವಿರುದ್ಧ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಡಾ.ವೈ.ಭಾಸ್ಕರ್‌ ರಾವ್‌ ಸಂಸ್ಥೆಯ ಪೊಲೀಸರಿಗೆ ಆದೇಶಿಸಿದ್ದಾರೆ.

ವರ್ತೂರು ಪ್ರಕಾಶ್‌ ವಿರುದ್ಧದ ದೂರಿನ ಕುರಿತು ವಿಚಾರಣೆ ನಡೆಸಿದ ಲೋಕಾಯುಕ್ತದ ಹೆಚ್ಚುವರಿ ರಿಜಿಸ್ಟ್ರಾರ್‌ ಎಂ.ಎಸ್‌.ಬಾಲಕೃಷ್ಣ ಅವರು ಶುಕ್ರವಾರ ಲೋಕಾಯುಕ್ತರಿಗೆ ಪ್ರಾಥಮಿಕ ವರದಿ ಸಲ್ಲಿಸಿದ್ದರು. ಹೆಚ್ಚುವರಿ ರಿಜಿಸ್ಟ್ರಾರ್‌ ಅವರ ಶಿಫಾರಸಿನಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಪ್ರೇಮ್‌ ಶಂಕರ್‌ ಮೀನಾ ಅವರಿಗೆ ಭಾಸ್ಕರ್‌ ರಾವ್‌ ಆದೇಶ ನೀಡಿದ್ದಾರೆ.

ವರ್ತೂರು ಅವರು ತಹಶೀಲ್ದಾರ್‌ ಒಬ್ಬರಿಗೆ ಕರೆಮಾಡಿ ಮರಳು ಲಾರಿಗಳ ವಿರುದ್ಧದ ದೂರನ್ನು ಹಿಂದಕ್ಕೆ ಪಡೆಯುವಂತೆ ಬೆದರಿಕೆ ಹಾಕುತ್ತಿರುವ ಧ್ವನಿಮುದ್ರಿಕೆಯನ್ನು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮಾರ್ಚ್‌ 21ರಂದು ಬಿಡುಗಡೆ ಮಾಡಿದ್ದರು. ಮರಳು ಲಾರಿಗಳನ್ನು ಬಿಡುಗಡೆ ಮಾಡಿಸದಿದ್ದರೆ ಲಂಚ ಪ್ರಕರಣದಲ್ಲಿ ಸಿಲುಕಿಸುವುದಾಗಿ ಮತ್ತು ಜೀವನಪೂರ್ತಿ ತೊಂದರೆ ನೀಡುವುದಾಗಿ ಶಾಸಕರು ಅಧಿಕಾರಿಗೆ ಬೆದರಿಸುತ್ತಿರುವ ಸಂಭಾಷಣೆ ಅದರಲ್ಲಿತ್ತು. ಕೋಲಾರ ಜಿಲ್ಲಾಧಿಕಾರಿ ವಿರುದ್ಧವೂ ಶಾಸಕರು ತಹಶೀಲ್ದಾರ್‌ ಜತೆ ಮಾತನಾಡುತ್ತಿರುವ ವಿವರ ಅದರಲ್ಲಿತ್ತು.

ಈ ಸಂಭಾಷಣೆಯ ಸಿ.ಡಿ ಬಿಡುಗಡೆ ಮಾಡಿದ್ದ ಕುಮಾರಸ್ವಾಮಿ, ಐಎಎಸ್‌ ಅಧಿಕಾರಿ ಡಿ.ಕೆ.ರವಿ ಸಾವಿಗೂ ಈ ದೂರವಾಣಿ ಸಂಭಾಷಣೆಗೂ ಸಂಬಂಧವಿದೆ ಎಂದು ಆರೋಪಿಸಿದ್ದರು. ಈ ಕುರಿತು ರಾಜ್ಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಎಂಬ ಸಂಘಟನೆಯ ಅಧ್ಯಕ್ಷ ಎಂ.ಟಿ.ಗಿರೀಶ್‌ ಎಂಬುವರು ಲೋಕಾಯುಕ್ತರಿಗೆ ಮಾ.23ರಂದು ದೂರು ನೀಡಿದ್ದರು.

ತನಿಖೆಗೆ ಶಿಫಾರಸು: ದೂರಿನ ಕುರಿತು ತನಿಖೆ ನಡೆಸಿದ ಬಾಲಕೃಷ್ಣ, ‘ವರ್ತೂರು ಪ್ರಕಾಶ್‌ ಅವರ ದೂರವಾಣಿ ಸಂಭಾಷಣೆಯನ್ನು ಪರಿಶೀಲಿಸಲಾಗಿದೆ. ಐಪಿಸಿ ಸೆಕ್ಷನ್‌ 504 (ಉದ್ದೇಶಪೂರ್ವಕ ಅವಹೇಳನ), 506 (ಬೆದರಿಕೆ), ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್‌ 13(1)(ಡಿ), 13(2)– (ಭ್ರಷ್ಟಾಚಾರ) ಅಡಿಯಲ್ಲಿ ಅಪರಾಧ ಎಸಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಬಗ್ಗೆ ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಸಿ, ಮುಂದಿನ ಕ್ರಮ ಜರುಗಿಸಬೇಕು’ ಎಂದು ಶಿಫಾರಸು ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.