ADVERTISEMENT

ವಾದ್ಯ ಸಂಗೀತದ ಅಬ್ಬರಕ್ಕೆ ಎಸ್‌.ಎಲ್‌. ಭೈರಪ್ಪ ಬೇಸರ

‘ಸುಗಮ ಸಂಗೀತದಲ್ಲಿ ಕಾವ್ಯ ನಿರ್ಜೀವ’

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 19:30 IST
Last Updated 30 ಅಕ್ಟೋಬರ್ 2014, 19:30 IST

ಮೈಸೂರು: ‘ಕನ್ನಡದ ಆಧುನಿಕ ಕಾವ್ಯವನ್ನು ಪ್ರಖ್ಯಾತ­ಗೊಳಿಸಿದ ಸುಗಮ ಸಂಗೀತವು ಹಾವಳಿಯಾಗಿ ಮಾರ್ಪಟ್ಟಿದ್ದು, ವಾದ್ಯ ಪರಿಕರಗಳ ಅಬ್ಬರದಲ್ಲಿ ನಿಜವಾದ ಕಾವ್ಯ ಸತ್ತುಹೋಗಿದೆ’ ಎಂದು ಹಿರಿಯ ಕಾದಂಬರಿಕಾರ ಪ್ರೊ.ಎಸ್‌.ಎಲ್‌. ಭೈರಪ್ಪ ಬೇಸರ ವ್ಯಕ್ತಪಡಿಸಿದರು.

ಇಲ್ಲಿಯ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಗುರು­ವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ.ಧರಣಿ­ದೇವಿ ಮಾಲಗತ್ತಿ ಅವರ ‘ಇಳಾಭಾರತಂ’ ಮಹಾ­ಕಾವ್ಯವನ್ನು ಲೋಕಾ­ರ್ಪಣೆ ಮಾಡಿ ಅವರು ಮಾತನಾಡಿದರು.

ಪಿ. ಕಾಳಿಂಗರಾಯರು ಅರ್ಥಾನು­ಸಾರ­ವಾಗಿ ಕಾವ್ಯ­ವನ್ನು ಹಾಡಿ ಭಾವಗೀತೆ ಪ್ರಕಾರವನ್ನು ರೂಪಿಸಿ­ದರು. ಅವರ ಬಳಿಕ ಕೀಬೋರ್ಡ್‌ ಸೇರಿದಂತೆ ಇತರ ಪರಿಕರಗಳನ್ನು ಈ ಸಂಗೀತಕ್ಕೆ ಸೇರಿಸಲಾಯಿತು. ಹತ್ತು, ಐವತ್ತು ಕಲಾವಿದರು ಸೇರಿ ಹಾಡುವ ಪರಿಪಾಠ ಸೃಷ್ಟಿಯಾಗಿ ಸುಗಮ ಸಂಗೀತವಾಯಿತು. ಇದರ ಪರಿ­ಣಾ­ಮವಾಗಿ ಹಾಡು­ ನಡುವೆ ಒಂದಕ್ಕೊಂದು ಸಂಬಂ­ಧವೇ ಇಲ್ಲದಂತಾಯಿತು. ನಿಜವಾದ ಕಾವ್ಯವನ್ನು ಸುಗಮ ಸಂಗೀ­ತ­ದಲ್ಲಿ ಹಾಡು­ತ್ತಿಲ್ಲ ಎಂದರು.

ಹಳಗನ್ನಡದಲ್ಲಿ ಕಾವ್ಯ ರಚಿ­ಸಲು ನಿರ್ದಿಷ್ಟ ಛಂದಸ್ಸು­ಗಳಿ­ದ್ದವು. ಅದಕ್ಕೆ ತಕ್ಕದಾದ ಲಯ, ವ್ಯಾಕರಣವನ್ನು ಹಿಡಿ­ಯ­ಬೇಕಾ­ಗಿತ್ತು. ಆಧುನಿಕ ಕಾವ್ಯದಲ್ಲಿ ಈ ಬಿಗಿ ಇಲ್ಲ.  ಕಾವ್ಯಕ್ಕೂ ಹಾಡಿಗೂ ಅವಿನಾಭಾವ ಸಂಬಂಧ­ವಿದೆ. ಆದರೆ, ಆಧುನಿಕ ಕಾವ್ಯವನ್ನು ಹಾಡಲು ಪ್ರೋತ್ಸಾಹ ಸಿಗಲಿಲ್ಲ. ಅನೇಕ ಶಿಕ್ಷಕರು ಕಾವ್ಯವನ್ನು ಹಾಡು­ವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಹೀಗಾಗಿ, ಕಾವ್ಯ ಕೇವಲ ಓದಿಗೆ ಸೀಮಿತವಾಯಿತು. ಇಂದಿಗೂ ಬಹುತೇಕ ಶಿಕ್ಷಕರಿಗೆ ಕಾವ್ಯ­ವನ್ನು ಹಾಡಲು ಬರುವುದಿಲ್ಲ. ಇದ­ರಿಂದ ಕಾವ್ಯದ ರಸಾನುಭಾವ ಸಿಗದೆ ವಿದ್ಯಾರ್ಥಿಗಳಿಗೆ ಆಸಕ್ತಿಯೂ ಹುಟ್ಟುತ್ತಿಲ್ಲ ಎಂದು ಹೇಳಿದರು.

ರಾಮಾಯಣ ಮತ್ತು ಮಹಾಭಾರತ ಕಾವ್ಯಗಳು ಭಾರತೀಯ ಸಂಸ್ಕೃತಿಯ ಬುನಾದಿ ಇದ್ದಂತೆ. ಇಲ್ಲಿರುವ ಮೌಲ್ಯ ಮತ್ತು ಸಂಘರ್ಷ ಪ್ರಪಂಚದ ಇನ್ನಾವ ಸಾಹಿತ್ಯ ಕೃತಿಯಲ್ಲೂ ಇಲ್ಲ. ಸಂಸ್ಕೃತಿಯ ಮೂಲವಾದ ವೇದ ಮತ್ತು ಉಪ­ನಿಷತ್ತು­ಗಳ ಸಾರವನ್ನು ವಾಲ್ಮೀಕಿ ಮತ್ತು ವ್ಯಾಸರು ಕೃತಿಗಳಲ್ಲಿ ಕಟ್ಟಿಕೊಟ್ಟರು. ಈ ಮೌಲ್ಯಗಳಿಗೆ ತಮ್ಮ ಕಾಲದ ಪ್ರತಿಕ್ರಿಯೆ ದಾಖಲಿಸುವ ನಿಟ್ಟಿನಲ್ಲಿ ಪಂಪ ಭಾರತ, ಕುಮಾರವ್ಯಾಸ ಭಾರತ ರಚನೆ­ಯಾದವು. ಸೃಜನ­ಶೀಲ ರೀತಿಯಲ್ಲಿ ಪ್ರತಿಕ್ರಿಯೆ ನೀಡುವ ಉದ್ದೇಶದಿಂದ ಈ ಮಹಾಕಾವ್ಯಗಳನ್ನು ಅನೇಕರು ಇಂದಿಗೂ ಪುನರ್‌ರಚನೆ ಮಾಡುತ್ತಿ­ದ್ದಾರೆ ಎಂದರು.

ಕಾದಂಬರಿಯ ಮೂಲಕ ಹೊಸತನ್ನು ಹೇಳಲು ಸಂಸ್ಕೃತದಲ್ಲಿರುವ ಮೂಲ ರಾಮಾಯಣ ಓದಿದೆ. ವಾಲ್ಮೀಕಿಯವರ ಬಳಿಕ ಬಂದ ಹೊಸ ಕೃತಿಗಳನ್ನು ಅಧ್ಯಯನ ಮಾಡಿದೆ. ಹೊಸದಾಗಿ ಹೇಳಲು ಏನೂ ಉಳಿದಿಲ್ಲ ಅನಿಸಿತು. ಹೀಗಾಗಿ, ಕೈಚೆಲ್ಲಿಬಿಟ್ಟೆ. ಇದು ಕೂಡ ಒಂದು ಪ್ರತಿಕ್ರಿಯೆ ಎಂದು ಹಾಸ್ಯಚಟಾಕಿ ಹಾರಿಸಿದರು.  ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಪ್ರೊ.ಮಾಲತಿ ಪಟ್ಟಣಶೆಟ್ಟಿ, ಪ್ರಾಧ್ಯಾಪಕ ಎನ್‌.ಎಸ್‌. ತಾರಾನಾಥ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.