ADVERTISEMENT

‘ವಾರ್ತಾಭಾರತಿ’ಗೆ ನೋಟಿಸ್‌–ಹೈಕೋರ್ಟ್‌ ತಡೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 19:52 IST
Last Updated 22 ಸೆಪ್ಟೆಂಬರ್ 2017, 19:52 IST

ಮಂಗಳೂರು: ಸುದ್ದಿ ಪ್ರಕಟಣೆಯಲ್ಲಿ ಲೋಪ ಎಸಗಿದ ಆರೋಪದ ಮೇಲೆ ಪತ್ರಿಕೆ ಪ್ರಕಟಣೆ ಮತ್ತು ಪ್ರಸಾರಕ್ಕೆ ನೀಡಿದ್ದ ಅನುಮತಿಯನ್ನು ರದ್ದು ಮಾಡುವ ಕುರಿತು ‘ವಾರ್ತಾಭಾರತಿ’ ದಿನಪತ್ರಿಕೆಯ ಪ್ರಧಾನ ಸಂಪಾದಕರಿಗೆ ಕಂದಾಯ ಇಲಾಖೆಯಿಂದ ನೀಡಿದ್ದ ಷೋಕಾಸ್ ನೋಟಿಸ್‌ಗೆ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.

ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ಕುಮಾರ್ ಕೊಲೆ ಪ್ರಕರಣದ ಆರೋಪಿ ಖಲಂದರ್‌ ಎಂಬಾತನ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಕುರ್‌ ಆನ್‌ ಗ್ರಂಥಕ್ಕೆ ಪೊಲೀಸರು ಅವಮಾನ ಮಾಡಿದ್ದಾರೆ ಎಂಬ ಆರೋಪವುಳ್ಳ ಸುದ್ದಿ ಪ್ರಕಟಿಸಿರುವ ಸಂಬಂಧ ಪೊಲೀಸರ ಶಿಫಾರಸು ಆಧರಿಸಿ ಮಂಗಳೂರು ಉಪ ವಿಭಾಗಾಧಿಕಾರಿ ವಾರ್ತಾ ಭಾರತಿಯ ಪ್ರಧಾನ ಸಂಪಾದಕರಿಗೆ ಷೋಕಾಸ್‌ ನೋಟಿಸ್ ನೀಡಿದ್ದರು. ದಿ ಪ್ರೆಸ್ ಆ್ಯಂಡ್ ರಿಜಿಸ್ಟ್ರೇಷನ್ ಆಫ್ ಬುಕ್ಸ್ ಆ್ಯಕ್ಟ್ 1867ರ ಸೆಕ್ಷನ್ 14 ಮತ್ತು ಸೆಕ್ಷನ್ 15 8(ಬಿ) ಅಡಿ ಪತ್ರಿಕೆಯ ಮುದ್ರಣ ಮತ್ತು ಪ್ರಚಾರಕ್ಕಾಗಿ ನೀಡಲಾದ ಅನುಮತಿಯನ್ನು ವಜಾ ಮಾಡಿ, ಪತ್ರಿಕೆಯ ಪರವಾನಗಿಯನ್ನು ರದ್ದುಪಡಿಸಲು ಏಕೆ ಶಿಫಾರಸು ಮಾಡಬಾರದು ಎಂದು ನೋಟಿಸ್‌ನಲ್ಲಿ ಪ್ರಶ್ನಿಸಿದ್ದರು.

ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್‌ ಅರ್ಜಿದಾರರ ಪರ ವಾದ ಮಂಡಿಸಿ, ನೋಟಿಸ್‌ಗೆ ತಡೆ ನೀಡುವಂತೆ ಕೋರಿದರು. ಆಲಿಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ, ‘ವಾರ್ತಾಭಾರತಿ’ ಪತ್ರಿಕೆಗೆ ನೀಡಿದ್ದ ಷೋಕಾಸ್ ನೋಟಿಸ್‌ಗೆ ತಡೆ ನೀಡಿದರು. ಪ್ರತಿವಾದಿಗಳಾದ ಮಂಗಳೂರು ಉಪ ವಿಭಾಗಾಧಿಕಾರಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಕಾರ್ಯದರ್ಶಿಗೆ ನೋಟಿಸ್ ಜಾರಿಗೆ ಆದೇಶಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.