ADVERTISEMENT

ವಿಚಾರ ಸಂಕಿರಣಕ್ಕೆ ಹಾಜರಾತಿ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 20:14 IST
Last Updated 24 ಮಾರ್ಚ್ 2017, 20:14 IST

ಬೆಂಗಳೂರು: ‘ವೈದ್ಯರು ಇನ್ನು ಮುಂದೆ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರ ಸಂಕಿರಣ ಮತ್ತು ಕಾರ್ಯಾಗಾರಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು. ಗೈರಾಗುವವರ ವೃತ್ತಿ ನೋಂದಣಿ ಹಾಗೂ ನವೀಕರಣ ಮಾಡುವುದಿಲ್ಲ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ತಿಳಿಸಿದ್ದಾರೆ.

ಕರ್ನಾಟಕ ವೈದ್ಯಕೀಯ ನೋಂದಣಿ(ತಿದ್ದುಪಡಿ) ಮಸೂದೆಯನ್ನು ಶುಕ್ರವಾರ ವಿಧಾನಪರಿಷತ್ತಿನಲ್ಲಿ ಮಂಡಿಸಿ  ಅವರು ಮಾತನಾಡಿದರು.

‘ವೈದ್ಯರು ವೈದ್ಯ ವಿಜ್ಞಾನದಲ್ಲಿ ಆಗುತ್ತಿರುವ ಬೆಳವಣಿಗೆ ಮತ್ತು ಬದಲಾವಣೆಗಳಿಗೆ ಸಂಬಂಧಿಸಿದ ಜ್ಞಾನ ವೃದ್ಧಿಸಿಕೊಳ್ಳಬೇಕು. ಅದರಿಂದ ರೋಗಿಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ವೈದ್ಯರ ಹಿತಾಸಕ್ತಿ ರಕ್ಷಣೆಗಿಂತ ಬಡ ರೋಗಿಗಳ ಮೇಲಿನ ಕಾಳಜಿ ನಮಗೆ ಮುಖ್ಯ ’ಎಂದು ಸಚಿವರು ಹೇಳಿದರು.

‘ಪ್ರತಿಯೊಬ್ಬ ವೈದ್ಯ  ಐದು ವರ್ಷಕ್ಕೊಮ್ಮೆ ನೋಂದಣಿ ನವೀಕರಿಸಬೇಕು. ನವೀಕರಣಕ್ಕೆ ಮುನ್ನ ಕರ್ನಾಟಕ ವೈದ್ಯಕೀಯ ಪರಿಷತ್ತು ಅನುಮೋದಿಸಿದ ಯಾವುದೇ ಪರಿಷತ್ತು ಅಥವಾ ಸಂಸ್ಥೆಗಳು ನಡೆಸುವ ವೈದ್ಯಕೀಯ ಸಮ್ಮೇಳನ, ವಿಚಾರ ಸಂಕಿರಣ ಅಥವಾ ಕಾರ್ಯಾಗಾರದಲ್ಲಿ ಭಾಗಿಯಾದ ಬಗ್ಗೆ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬೇಕು’ ಎಂದು ಸ್ಪಷ್ಟಪಡಿಸಿದರು.

‘ವಿಚಾರಸಂಕಿರಣ ಅಥವಾ ಕಾರ್ಯಾಗಾರದಲ್ಲಿ ಭಾಗವಹಿಸುವುದನ್ನು ವೈದ್ಯಕೀಯ ಶಿಕ್ಷಣದ ಮುಂದುವರಿಕೆ ಕಾರ್ಯಕ್ರಮ ಎಂಬುದಾಗಿ ಪರಿಗಣಿಸಲಾಗುತ್ತದೆ’ ಎಂದೂ ಸಚಿವರು ವಿವರಿಸಿದರು. ವೈದ್ಯಕೀಯ ವೃತ್ತಿ ನೋಂದಣಿಯನ್ನು ಆನ್‌ಲೈನ್‌ ಮೂಲಕ ಮಾಡುವುದರ ಜತೆಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡಲಾಗುವುದು ಎಂದು  ಅವರು ತಿಳಿಸಿದರು.

‘ವೈದ್ಯರುಗಳಿಗೆ ವಿಚಾರ ಸಂಕಿರಣ, ಕಾರ್ಯಾಗಾರ ಕಡ್ಡಾಯ ಮಾಡುವುದು ಸರಿಯಲ್ಲ’ ಎಂದು ಬಿಜೆಪಿ ಸದಸ್ಯರಾದ ಗಣೇಶ್‌ ಕಾರ್ಣಿಕ್‌, ಮಹಾಂತೇಶ್ ಕವಟಗಿಮಠ, ಎಸ್‌.ವಿ.ಸಂಕನೂರ,  ಅಮರನಾಥ ಪಾಟೀಲ ಹೇಳಿದರು. ಚರ್ಚೆ ಬಳಿಕ ಮಸೂದೆಗೆ ಅಂಗೀಕಾರ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.