ADVERTISEMENT

ವಿದ್ಯಾರ್ಥಿಗಳು ನೀರು ಪಾಲು

ಮಹಾರಾಷ್ಟ್ರದ ವಾಯರಿ ಬೀಚ್‌ನಲ್ಲಿ ದುರ್ಘಟನೆ: 8 ಸಾವು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 19:30 IST
Last Updated 15 ಏಪ್ರಿಲ್ 2017, 19:30 IST
ವಿದ್ಯಾರ್ಥಿಗಳು ನೀರು ಪಾಲು
ವಿದ್ಯಾರ್ಥಿಗಳು ನೀರು ಪಾಲು   

ಬೆಳಗಾವಿ: ಅಧ್ಯಯನ ಪ್ರವಾಸಕ್ಕೆಂದು ಹೋಗಿದ್ದ ಇಲ್ಲಿನ ಮರಾಠಾ ಮಂಡಳ ಎಂಜಿನಿಯರಿಂಗ್‌ ಕಾಲೇಜಿನ ಒಬ್ಬ ಉಪನ್ಯಾಸಕ ಹಾಗೂ ಏಳು  ವಿದ್ಯಾರ್ಥಿಗಳು ನೆರೆಯ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ  ಮಾಳ್ವಾನ್‌ದ ವಾಯರಿ ಬೀಚ್‌ನಲ್ಲಿ ಶನಿವಾರ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮೃತರಲ್ಲಿ ಬಹುತೇಕರು ಬೆಳಗಾವಿ ಮತ್ತು ಆಸುಪಾಸಿನ ಗ್ರಾಮಗಳ ವಿದ್ಯಾರ್ಥಿಗಳು. ಸತ್ತವರಲ್ಲಿ ಮೂವರು ವಿದ್ಯಾರ್ಥಿನಿಯರೂ ಸೇರಿದ್ದಾರೆ.
ತುರಮರಿಯ ಕಿರಣ್‌ ಖಾಂಡೆಕರ್‌, ಸಾಂಬ್ರಾದ ಆರತಿ ಚವ್ಹಾಣ, ಕರುಣಾ ಬರ್ಡೆ, ಕಾಕತಿ ನಿತಿನ್‌ ಮುತ್ನಾಳಕರ್‌, ಬಂಬರಗಾ ಗ್ರಾಮದ ಮಾಯಾ ಕೋಳೆ, ಆಜಾದ್‌ ನಗರದ ಮುಜಮಿನ್‌ ಅಣ್ಣಿಗೇರಿ, ಅವಧೂತ ತಹಶೀಲ್ದಾರ್‌ ಹಾಗೂ ಶಹಾಪುರದ ಪ್ರೊ. ಮಹೇಶ ಕುಡಚಕರ ಮೃತಪಟ್ಟವರು.

ಮೃತದೇಹಗಳು ಸಿಕ್ಕಿದ್ದು, ಮರಣೋತ್ತರ ಪರೀಕ್ಷೆ ನಂತರ ಬೆಳಗಾವಿಗೆ ತರಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡಿರುವ ಸಂಕೇತ್ ಗಾಡವಿ, ಅನಿತಾ ಹೊಳ್ಳಲ್ಲಿ ಹಾಗೂ ಆಕಾಂಕ್ಷಾ ಘಾಟಗೆ ಅವರಿಗೆ ಸಿಂಧುದುರ್ಗದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ಕೈಗಾರಿಕಾ ಪ್ರದೇಶಕ್ಕೆ ಭೇಟಿ: ಕಾಲೇಜಿನ ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಷನ್‌ ವಿಭಾಗದ ಅಂತಿಮ ವರ್ಷದ 47 ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮದ ಅಂಗವಾಗಿ ಕೈಗಾರಿಕೆಗಳಿಗೆ ಭೇಟಿ ನೀಡಲು ಪುಣೆಗೆ ಬುಧವಾರ ರಾತ್ರಿ ತೆರಳಿದ್ದರು. ಗುರುವಾರ ಹಾಗೂ ಶುಕ್ರವಾರ ಹಲವು ಕೈಗಾರಿಕೆಗಳಿಗೆ ಭೇಟಿ ನೀಡಿದ್ದರು. ಉಪನ್ಯಾಸಕರಾದ ಮಹೇಶ ಹಾಗೂ ವೈದೇಹಿ ದೇಶಪಾಂಡೆ ಇವರ ಜೊತೆಗಿದ್ದರು. ಬೆಳಗಾವಿಗೆ ವಾಪಸ್‌ ಬರುವಾಗ ವಿಹಾರಾರ್ಥ ಮಾರ್ಗ ಮಧ್ಯದ ವಾಯರಿ ಬೀಚ್‌ಗೆ ತೆರಳಿದ್ದರು.

ಎಚ್ಚರಿಕೆ ಫಲಕ ನಿರ್ಲಕ್ಷ್ಯ:‘ಬೀಚ್‌ನಲ್ಲಿ ಹಲವು ಅಪಾಯಕಾರಿ ಸ್ಥಳಗಳಿವೆ. ಇಂತಹ ಪ್ರದೇಶಗಳಿಗೆ ಪ್ರವೇಶಿಸದಂತೆ ಹಲವು ಕಡೆ ಎಚ್ಚರಿಕೆ ಫಲಕಗಳನ್ನು ಹಾಕಲಾಗಿದೆ. ಆದರೆ ಉಪನ್ಯಾಸಕ ಸೇರಿ 11 ವಿದ್ಯಾರ್ಥಿಗಳು ಈಜುತ್ತ ಅಪಾಯಕಾರಿ ಸ್ಥಳದ ಕಡೆ ತೆರಳಿದ್ದಾರೆ. ನೀರಾಟ ಆಡುವುದರಲ್ಲಿ ತಲ್ಲೀನರಾಗಿದ್ದ ಅವರು ಜೋರಾಗಿ ಅಪ್ಪಳಿಸಿದ ಅಲೆಗೆ ಸಿಲುಕಿದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ಥಳೀಯರು ರಕ್ಷಣೆಗೆ ಧಾವಿಸುವಷ್ಟರಲ್ಲಿ ಎಂಟು ಮಂದಿ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟರು. ಇನ್ನೂ ಮುಳುಗುತ್ತಿದ್ದ ಉಳಿದ ಮೂವರನ್ನು ರಕ್ಷಿಸಿ, ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಪ್ರಥಮ ಚಿಕಿತ್ಸೆ ಬಳಿಕ ಅವರನ್ನು ಸಿಂಧುದುರ್ಗ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು’ ಎಂದು ಅವರು ವಿವರಿಸಿದರು.

ಆಸ್ಪತ್ರೆಗೆ ಭೇಟಿ: ಎಂಜಿನಿಯರಿಂಗ್‌ ಕಾಲೇಜಿನ ಪ್ರಾಚಾರ್ಯ ವಿ.ಆರ್‌. ಉಡುಪಿ ಹಾಗೂ ಸಿಬ್ಬಂದಿ ಸಿಂಧುದುರ್ಗ ಆಸ್ಪತ್ರೆಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.

ಅನುಮತಿ ಇರಲಿಲ್ಲ
‘ಪುಣೆ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡುವ ಕಾರ್ಯಕ್ರಮ ಕಾಲೇಜಿನದ್ದು ಆಗಿರಲಿಲ್ಲ. ವಿದ್ಯಾರ್ಥಿಗಳೇ ಖಾಸಗಿಯಾಗಿ ಹೋಗಿದ್ದಾರೆ. ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಹಾಗೂ ನಮ್ಮಿಂದ ಅನುಮತಿ ಕೂಡ ಪಡೆದಿರಲಿಲ್ಲ’ ಎಂದು ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಎನ್‌. ಹಾಲಗೇಕರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.