ADVERTISEMENT

ವಿಧಾನಸಭೆಯನ್ನೂ ಕಾಡಿದ ಕ್ರಿಕೆಟ್‌ ‘ಜ್ವರ’!

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2015, 19:30 IST
Last Updated 26 ಮಾರ್ಚ್ 2015, 19:30 IST
ಕ್ರಿಕೆಟ್ ಪಂದ್ಯ ವೀಕ್ಷಿಸಲು ವಿಧಾನಸಭೆಯ ವಿರೋಧ ಪಕ್ಷಗಳ ಸದಸ್ಯರು ತೆರಳಿದ್ದ ಕಾರಣ, ವಿಧಾನಸಭೆಯಲ್ಲಿ ಅವರಿಗೆ ಮೀಸಲಾಗಿರುವ ಆಸನಗಳು ಖಾಲಿಯಾಗಿದ್ದವು.
ಕ್ರಿಕೆಟ್ ಪಂದ್ಯ ವೀಕ್ಷಿಸಲು ವಿಧಾನಸಭೆಯ ವಿರೋಧ ಪಕ್ಷಗಳ ಸದಸ್ಯರು ತೆರಳಿದ್ದ ಕಾರಣ, ವಿಧಾನಸಭೆಯಲ್ಲಿ ಅವರಿಗೆ ಮೀಸಲಾಗಿರುವ ಆಸನಗಳು ಖಾಲಿಯಾಗಿದ್ದವು.   

ಬೆಂಗಳೂರು: ಭಾರತ–ಆಸ್ಟ್ರೇಲಿಯಾ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಿಂದಾಗಿ ಗುರುವಾರ ದೇಶದ ತುಂಬಾ ಹರಡಿದ್ದ ಕ್ರಿಕೆಟ್‌ ‘ಜ್ವರ’ ವಿಧಾನಸಭೆಯನ್ನೂ ಕಾಡದೆ ಬಿಡಲಿಲ್ಲ.

ದಿನದ ಕಲಾಪ ಆರಂಭದ ಸೂಚನೆಯಾಗಿ ಮೊಳಗುತ್ತಿದ್ದ ಗಂಟೆ ಸ್ತಬ್ಧವಾದರೂ ಮೊಗಸಾಲೆಯಲ್ಲಿ ಟಿ.ವಿ ಮುಂದೆ ಕುಳಿತಿದ್ದ ಹಲವು ಶಾಸಕರು ಕುರ್ಚಿ ಬಿಟ್ಟು ಮೇಲೇಳಲಿಲ್ಲ. ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಬೆಳಿಗ್ಗೆ 11.15ಕ್ಕೆ ಕಲಾಪ ಆರಂಭಿಸಿದಾಗ ಸದನದಲ್ಲಿ ಹೆಚ್ಚೆಂದರೆ 50 ಶಾಸಕರಷ್ಟೇ ಇದ್ದರು.

140ಕ್ಕೂ ಅಧಿಕ ಶಾಸಕರು ವಿಧಾನಸೌಧದತ್ತ ತಲೆಯನ್ನೇ ಹಾಕಲಿಲ್ಲ. ಕ್ರಿಕೆಟ್ ‘ಜ್ವರ’ವೇ ಅದಕ್ಕೆ ಪ್ರಧಾನ ಕಾರಣವಾಗಿತ್ತು. ಸದನದಲ್ಲಿ ಹಾಜರಿದ್ದ ಶಾಸಕರಿಗೂ ‘ಸ್ಕೋರ್‌ ಏನಾಯಿತು’ ಎಂದು ತಿಳಿದುಕೊಳ್ಳುವ ತವಕ. ಆಗಾಗ ಮೊಗಸಾಲೆಗೆ ಹೋಗುವುದು, ಸ್ಕೋರ್‌ ನೋಡಿಕೊಂಡು ಬರುವುದು ಅಲ್ಲಿ ಮಾಮೂಲಾಗಿತ್ತು. ಹೊರಗಿನಿಂದ ಬಂದವರಿಗೆ ಒಳಗಿದ್ದವರು, ‘ಸ್ಕೋರ್‌ ಎಷ್ಟು’, ‘ವಿಕೆಟ್‌ ಬಿತ್ತಾ’ ಎಂದೆಲ್ಲ ವಿಚಾರಿಸುತ್ತಿದ್ದರು.

ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್‌ ಮಾಡುತ್ತಿದ್ದಾಗ ಕೊನೆಯ ಓವರ್‌ಗಳಲ್ಲಿ ಕುತೂಹಲ ಅದುಮಿಡಲು ಸಾಧ್ಯವಾಗದೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಕೂಡ ಸ್ಕೋರ್‌ ನೋಡಿಕೊಂಡು ಬರಲು ಹೊರಟುಬಿಟ್ಟರು. ತುಸು ಹೊತ್ತಿನಲ್ಲಿ ‘ಕಷ್ಟ ಇದೆ’ ಎನ್ನುತ್ತಾ ಅವರು ವಾಪಸ್‌ ಬಂದರು. ‘ಏನ್‌ ಸರ್‌’ ಎಂದು ಅಕ್ಕಪಕ್ಕದವರು ಕೇಳಿದಾಗ, ‘329 ರನ್‌ ಚೇಸಿಂಗ್‌ ಮಾಡಬೇಕ್ರೀ’ ಎಂದು ಹೇಳಿದರು.

‘ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಾ ತಂಡಗಳೇ ಫೈನಲ್‌ ಆಡುವುದು ಮೊದಲೇ ಗ್ಯಾರಂಟಿ ಆಗಿತ್ತು ಬಿಡಿ’ ಎಂದು ಬಸವರಾಜ ಬೊಮ್ಮಾಯಿ ಹೇಳುತ್ತಿದ್ದರು. ವಿರೋಧ ಪಕ್ಷದ ಪಾಳೆಯದಲ್ಲಿ ವಿ.ಸುನಿಲ್‌ಕುಮಾರ್‌, ವಿಶ್ವೇಶ್ವರ ಹೆಗಡೆ ಕಾಗೇರಿ ಆಗಾಗ ಮೊಗಸಾಲೆಗೂ ಸದನಕ್ಕೂ ಎಡತಾಕುತ್ತಿದ್ದರು.

ಆಡಳಿತ ಪಕ್ಷದ ಸಾಲಿನಲ್ಲಿ ಸಚಿವರಿಗೂ ಆಸನದಲ್ಲಿ ಹೆಚ್ಚುಹೊತ್ತು ಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ. ಕೃಷ್ಣ ಬೈರೇಗೌಡ, ದಿನೇಶ್‌ ಗುಂಡೂರಾವ್‌, ಕಿಮ್ಮನೆ ರತ್ನಾಕರ, ಯು.ಟಿ. ಖಾದರ್‌ ಹಾಗೂ ಎಚ್‌್.ಎಸ್‌.ಮಹದೇವಪ್ರಸಾದ್‌ ಆಗಾಗ ಹೊರಗೆ ಹೋಗಿ ಬರುತ್ತಿದ್ದರು. ಸದನದಲ್ಲಿ ನಡೆದಿದ್ದ ಈ ಗಡಿಬಿಡಿಯನ್ನು ಗಣನೆಗೆ ತೆಗೆದುಕೊಳ್ಳದೆ ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ ಮಾತ್ರ ಬಜೆಟ್‌ ಮೇಲೆ ಸುದೀರ್ಘವಾಗಿ ಮಾತನಾಡಿದರು. ಅದಕ್ಕೂ ಕ್ರಿಕೆಟ್‌ ಪರಿಭಾಷೆ ಮೂಲಕವೇ ಶಾಸಕರು ಪ್ರತಿಕ್ರಿಯಿಸಿದರು. ‘ಓಹೋ ರಾಯರೆಡ್ಡಿ ಚೆನ್ನಾಗಿ ಬ್ಯಾಟಿಂಗ್‌ ಮಾಡ್ತಾ ಇದ್ದಾರೆ’ ಎನ್ನುವ ಮಾತು ಆಡಳಿತ ಪಾಳೆಯದ ಕಡೆಯಿಂದ ತೂರಿಬಂತು.

ಸಚಿವರಾದ ಎಚ್‌.ಕೆ. ಪಾಟೀಲ್‌, ಉಮಾಶ್ರೀ, ರಾಮಲಿಂಗಾರೆಡ್ಡಿ, ಜೆಡಿಎಸ್‌ನ ಕೆ.ಎಂ. ಶಿವಲಿಂಗೇಗೌಡ, ಬಿಜೆಪಿಯ ಲಕ್ಷ್ಮಣ ಸವದಿ, ಎಸ್‌.ಮುನಿರಾಜು ಮೊದಲಾದವರು ಮಾತ್ರ ಕುರ್ಚಿ ಬಿಟ್ಟು ಏಳಲಿಲ್ಲ. ಕ್ರಿಕೆಟ್‌ನತ್ತ ಅಷ್ಟಾಗಿ ಆಸಕ್ತಿ ತೋರಲಿಲ್ಲ. ಭಾರತದ ಬ್ಯಾಟಿಂಗ್‌ ಶುರುವಾಗಿ ಒಂದೊಂದಾಗಿ ವಿಕೆಟ್‌ ಬೀಳುತ್ತಾ ಹೋದಂತೆ ಶಾಸಕರ ಆಟದ ಪ್ರೀತಿಯೂ ಕರಗುತ್ತಾ ಹೋಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.