ADVERTISEMENT

ವಿಶೇಷ ಅಧಿವೇಶನದಲ್ಲಿ ಒಗ್ಗಟ್ಟು

ಪಾಲಿಕೆ ವಿಭಜನೆಗೆ ವಿರೋಧ: ಬಿಜೆಪಿ, ಜೆಡಿಎಸ್ ಒಮ್ಮತ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 19:48 IST
Last Updated 19 ಏಪ್ರಿಲ್ 2015, 19:48 IST
ವಿಶೇಷ ಅಧಿವೇಶನದಲ್ಲಿ ಒಗ್ಗಟ್ಟು
ವಿಶೇಷ ಅಧಿವೇಶನದಲ್ಲಿ ಒಗ್ಗಟ್ಟು   

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಭಜಿಸುವ ಸರ್ಕಾರದ ನಿರ್ಧಾರ ಪ್ರತಿಭಟಿಸಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಒಂದಾಗಿರುವ ಕಾರಣ, ಸೋಮವಾರ ನಡೆಯಲಿರುವ ವಿಧಾನ ಮಂಡಲದ ವಿಶೇಷ ಅಧಿವೇಶನ ಕುತೂಹಲ ಮೂಡಿಸಿದೆ.

ಬಿಬಿಎಂಪಿಯನ್ನು ಮೂರು ಪ್ರತ್ಯೇಕ ಪಾಲಿಕೆಗಳನ್ನಾಗಿ ವಿಭಜಿಸುವ ಕರ್ನಾಟಕ ನಗರ ಪಾಲಿಕೆ (ತಿದ್ದುಪಡಿ) ಮಸೂದೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಲಿದ್ದಾರೆ. ಮಸೂದೆ ಅಂಗೀಕರಿಸುವಂತೆ ಕೋರಲಿದ್ದಾರೆ.

ಪಾಲಿಕೆ ವಿಭಜಿಸುವ ಸರ್ಕಾರದ ನಡೆಯನ್ನು ಸದನದಲ್ಲಿ ವಿರೋಧಿಸುವುದು ಹೇಗೆಂದು ಚರ್ಚಿಸಲು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆ ಸೋಮವಾರ ಬೆಳಿಗ್ಗೆ ನಡೆಯಲಿದೆ. ಸದನ ಬಹಿಷ್ಕರಿಸುವುದಾಗಿ ಹೇಳಿದ್ದ ಜೆಡಿಎಸ್‌, ಈಗ ಆ ನಿರ್ಧಾರದಿಂದ ಹಿಂದೆ ಸರಿದಿದೆ. ಸರ್ಕಾರವನ್ನು ಸದನದಲ್ಲಿ ತರಾಟೆಗೆ ತೆಗೆದುಕೊಳ್ಳಲು ಪಕ್ಷ ತೀರ್ಮಾನಿಸಿದೆ.

ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶದ ಅನುಸಾರ ಪಾಲಿಕೆಗೆ ಮೇ 30ರೊಳಗೆ ನಡೆಯಬೇಕಿರುವ ಚುನಾವಣೆ ಮುಂದೂಡಲು ವಿಭಜನೆ ಎಂಬುದು ಒಂದು ಅಸ್ತ್ರ ಎಂದು ಎರಡೂ ಪಕ್ಷಗಳು ಆರೋಪಿಸಿವೆ.

‘ನಾವು ಜೆಡಿಎಸ್‌ ಮುಖಂಡರ ಜೊತೆ ಸಂಪರ್ಕದಲ್ಲಿದ್ದೇವೆ. ಸರ್ಕಾರದ ನಿಲುವು ವಿರೋಧಿಸಿ ಸದನದಲ್ಲಿ ಒಗ್ಗಟ್ಟಿನ ಹೋರಾಟ ನಡೆಸುತ್ತೇವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಅವರು ಹೇಳಿದರು.

ಜೆಡಿಎಸ್‌ ಮತ್ತು ಬಿಜೆಪಿ ಒಗ್ಗಟ್ಟಿನಿಂದ ಮತ ಚಲಾಯಿಸಿದರೂ, ಮಸೂದೆಯನ್ನು ಸೋಲಿಸಲು ಬೇಕಿರುವ ಸಂಖ್ಯಾಬಲ ವಿಧಾನಸಭೆಯಲ್ಲಿ ಇಲ್ಲ. ವಿಧಾನ ಪರಿಷತ್ತಿನಲ್ಲಿ ಮಸೂದೆ ಸೋಲುವಂತೆ ಮಾಡುವ ತಾಕತ್ತು ಬಿಜೆಪಿ–ಜೆಡಿಎಸ್‌ಗೆ ಇದೆ. ಆದರೆ ಪರಿಷತ್ತಿನ ಅನುಮೋದನೆ ಪಡೆಯದಿದ್ದರೂ ಮಸೂದೆಯನ್ನು ಮತ್ತೊಮ್ಮೆ ವಿಧಾನಸಭೆಯಲ್ಲಿ ಮಂಡಿಸಿ, ಅಲ್ಲಿ ಅನುಮೊದನೆ ಪಡೆದುಕೊಂಡರೆ ಪರಿಷತ್ತಿನ ಅನುಮೋದನೆ ಬೇಕಾಗುವುದಿಲ್ಲ.

ಪಾಲಿಕೆಯನ್ನು ಮೂರು ಭಾಗಗಳಾಗಿ ವಿಭಜಿಸಲು ಸರ್ಕಾರ ಸಲ್ಲಿಸಿದ್ದ ಸುಗ್ರೀವಾಜ್ಞೆ ಪ್ರಸ್ತಾವನೆಯನ್ನು ರಾಜ್ಯಪಾಲ ವಜುಭಾಯಿ ವಾಲಾ ಅವರು ತಿರಸ್ಕರಿಸಿದ್ದರು. ಪಾಲಿಕೆಯನ್ನು ವಿಭಜಿಸಿಯೇ ತೀರುವ ನಿರ್ಧಾರ ಕೈಗೊಂಡಿರುವ ಸರ್ಕಾರ ಈಗ ವಿಶೇಷ ಅಧಿವೇಶನ ಕರೆದಿದೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.