ADVERTISEMENT

ವೀರ್ಯ ಪರೀಕ್ಷೆಗೆ ತಡೆ ಕೋರಿ ರಿಟ್‌

ಮತ್ತೆ ಹೈಕೋರ್ಟ್‌ ಮೆಟ್ಟಿಲೇರಿದ ರಾಘವೇಶ್ವರ ಶ್ರೀ

ಬಿ.ಎಸ್.ಷಣ್ಮುಖಪ್ಪ
Published 23 ಸೆಪ್ಟೆಂಬರ್ 2015, 19:30 IST
Last Updated 23 ಸೆಪ್ಟೆಂಬರ್ 2015, 19:30 IST

ಬೆಂಗಳೂರು: ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ವೀರ್ಯ ಪರೀಕ್ಷೆಗೆ ಒಳಪಡಲು ಸಿಐಡಿ ನೀಡಿರುವ ನೋಟಿಸನ್ನು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಈಗ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಸಿಐಡಿ ವಿಶೇಷ ವಿಭಾಗ ಹಾಗೂ ಸಿಐಡಿಯ ಡಿವೈಎಸ್‌ಪಿ ಅವರನ್ನು ಅರ್ಜಿಯಲ್ಲಿ ಪ್ರತಿವಾದಿ ಮಾಡಲಾಗಿದೆ. ಶ್ರೀಗಳ ಪರವಾಗಿ ಪಿ.ಎನ್‌. ಮನಮೋಹನ್‌ ಅವರು ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಬುಧವಾರ ಮಧ್ಯಾಹ್ನ 2.30ಕ್ಕೆ ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಸ್ವಾಮೀಜಿ ಪರ ವಕೀಲರು ನ್ಯಾಯಮೂರ್ತಿ ಎ.ಎಸ್‌. ಬೋಪಣ್ಣ ಅವರಿದ್ದ ಪೀಠಕ್ಕೆ ಮೌಖಿಕ ಮನವಿ ಮಾಡಿದರು. ಆದರೆ ನ್ಯಾಯಮೂರ್ತಿಗಳು ಇದಕ್ಕೆ ನಿರಾಕರಿಸಿದರು.

ಜನನಾಂಗದ ಬಾಹ್ಯ ಪರೀಕ್ಷೆಯಿಂದ ಧರ್ಮ ಪರಿಪಾಲನೆಗೆ ಅಡ್ಡಿಯಾಗುತ್ತದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಏತನ್ಮಧ್ಯೆ ಈ ಅರ್ಜಿಯು ನ್ಯಾಯಮೂರ್ತಿ ಎಲ್‌.ನಾರಾಯಣ ಸ್ವಾಮಿ ಅವರ ಏಕಸದಸ್ಯ ಪೀಠದ ಮುಂದೆ ಶನಿವಾರ (ಸೆ.26) ವಿಚಾರಣೆಗೆ ಬರಲಿದೆ.

ಸುದೀರ್ಘ ವಿಚಾರಣೆ: ಸಿಐಡಿ ಡಿವೈಎಸ್‌ಪಿ ಧರಣೇಶ್‌ ನೇತೃತ್ವದ ತಂಡ ಮಂಗಳವಾರ (ಸೆ.22) ಮಧ್ಯಾಹ್ನ 3 ತಾಸು ಸಿಐಡಿ ಪ್ರಧಾನ ಕಚೇರಿಯಲ್ಲಿ ರಾಘವೇಶ್ವರ ಶ್ರೀಗಳ ವಿಚಾರಣೆ ನಡೆಸಿತು.
*
ಅರ್ಜಿಯಲ್ಲಿ ಏನಿದೆ?
‘ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಐಡಿ ಪೊಲೀಸರು ಇದೇ 21ರಂದು ನೋಟಿಸ್‌ ನೀಡಿದ್ದು, ಬಾಕಿ ಉಳಿದಿರುವ ವೈದ್ಯಕೀಯ ಪರೀಕ್ಷೆಗೆ ಒಳಪಡಲು ನೀವು ಇದೇ 30ರಂದು ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಹಾಜರಾಗಬೇಕು ಎಂದು ಸ್ವಾಮೀಜಿಗೆ ಸೂಚಿಸಿದ್ದಾರೆ. ಇದು ಕಾನೂನುಬಾಹಿರ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

‘ಈ ಪ್ರಕರಣದಲ್ಲಿ ಅರ್ಜಿದಾರರು ಈಗಾಗಲೇ ಕೆಲವು ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ. ಅವುಗಳ ಫಲಿತಾಂಶ, ಅವರೊಬ್ಬ ಸದೃಢ ಪುರುಷ ಎಂಬುದನ್ನು ಸ್ಪಷ್ಟಪಡಿಸಿದೆ. ಆದರೂ, ಸಿಐಡಿ ಪುನಃ ವೈದ್ಯಕೀಯ ಪರೀಕ್ಷೆಗೆ ಗುರಿಯಾಗುವಂತೆ ಸೂಚಿಸಿ ಈಗ ಮತ್ತೊಂದು ನೋಟಿಸ್‌ ನೀಡಿದೆ. ಇದು ತಪ್ಪು’ ಎಂದು ವಿವರಿಸಲಾಗಿದೆ.

‘ಈಗ ನೀಡಲಾಗಿರುವ ನೋಟಿಸ್‌ನ ಅನುಸಾರ ಸ್ವಾಮೀಜಿಯವರು ವೀರ್ಯ, ಜನನಾಂಗದ ಉದ್ದ, ಸುತ್ತಳತೆ, ವೃಷಣಗಳ ಬಾಹ್ಯ ಸ್ವರೂಪ ಮತ್ತು ಕಿಬ್ಬೊಟ್ಟೆಯ ಕೆಳಗಿನ ರೋಮ ಪರೀಕ್ಷೆಗೆ ಒಳಪಡಬೇಕಿದೆ. ಇದು ಸಂಪೂರ್ಣವಾಗಿ ಸಿಐಡಿಯ ಸ್ವೇಚ್ಛಾ ನಡೆ’ ಎಂದು ಅರ್ಜಿಯಲ್ಲಿ ದೂರಲಾಗಿದೆ.

‘ರಾಘವೇಶ್ವರ ಶ್ರೀ ಅಲಿಯಾಸ್‌ ಹರೀಶ್‌ ಶರ್ಮಾ ಅವರು ಶಂಕರಾಚಾರ್ಯ ಪೀಠದ ಒಬ್ಬ ಸನ್ಯಾಸಿ. ಅವರನ್ನು ತೇಜೋವಧೆ ಮಾಡಲೆಂದೇ ಅವರ ವಿರುದ್ಧ ದುರುದ್ದೇಶ ಪೂರ್ವಕವಾಗಿ ಅತ್ಯಾಚಾರದ ಆರೋಪ ಹೊರಿಸಲಾಗಿದೆ. ಈಗ ಸಿಐಡಿ ನೀಡಿರುವ ನೋಟಿಸ್‌ ಅವರ ಧರ್ಮ ಪರಿಪಾಲನೆಯ ಹಕ್ಕನ್ನು ಕಸಿಯುತ್ತದೆ. ವೀರ್ಯ ಸಂಗ್ರಹ ಮಾಡಲು ಉದ್ದೇಶಿಸಿರುವುದು ಅವರ ಧಾರ್ಮಿಕ ಹಕ್ಕನ್ನೇ ಕಿತ್ತುಕೊಳ್ಳುತ್ತದೆ’ ಎಂಬ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT