ADVERTISEMENT

ವ್ಯಂಗ್ಯಚಿತ್ರಲೋಕದ ಸಾರ್ವಭೌಮ

ಪ್ರಕಾಶ ಶೆಟ್ಟಿ
Published 27 ಜನವರಿ 2015, 10:30 IST
Last Updated 27 ಜನವರಿ 2015, 10:30 IST

ಬೆಂಗಳೂರು:  ಆರ್. ಕೆ. ಲಕ್ಷ್ಮಣ್ ಕೊನೆ­ಯು­ಸಿರೆ­ಳೆದಿ­ದ್ದಾರೆ. ಅವರೊಬ್ಬ ಅದ್ಭುತ ವ್ಯಂಗ್ಯ ಚಿತ್ರಕಾರರಾಗಿ­ದ್ದರು. ಅವರ ಹಾಸ್ಯಕ್ಕೆ ಮನಸೋಲದವರು ಯಾರೂ ಇಲ್ಲ... ಪುಟಗಟ್ಟಲೆ ಹೇಳ­ಬೇಕಾದುದನ್ನು ಒಂದು ಚಿಕ್ಕ ಚೌಕಟ್ಟಿ­ನಲ್ಲಿ ಪ್ರತಿಬಿಂಬಿ­ಸುತ್ತಿದ್ದರು.

ಅವರ ಕುಂಚ ಯಾರ ಮೇಲೂ ಕನಿಕರ ತೋರಿ­ಸಿಲ್ಲ. ಅವರದ್ದು ನಿರ್ದಾ­ಕ್ಷಿಣ್ಯ ಟೀಕೆ. ರಾಜಕೀಯ ಬಿಡಿ, ಸರ್ಕಾರಿ ಅಧಿಕಾರಿ­ಗಳು, ಕಚೇರಿ ಅವ್ಯವಸ್ಥೆ, ಪೊಲೀ­ಸರು, ಬಸ್, ಟ್ಯಾಕ್ಸಿ, ಆಟೊ ಚಾಲಕರು, ಕೇರ್ ಆಫ್ ಫುಟ್‍ಪಾತ್‌­ನವರು, ಬೀದಿ ವ್ಯಾಪಾರಿಗಳು, ಟ್ರಾಫಿಕ್‌, ನೆರೆ, ಬರ.... ಯಾವುದರ ಬಗ್ಗೆ ಅವರು ಕಿಚಾಯಿಸಿಲ್ಲ ಹೇಳಿ! ಆರು ದಶಕಗಳಿಂದ ಯಾರಾ­ದರೂ ರಾಜಕಾರ­ಣಿ­ಗಳು ಇವರ ಕಣ್ಣು ತಪ್ಪಿಸಿಕೊಂಡು ಬಚಾವಾಗಿ­ದ್ದಾ­ರೆಯೇ?.... ಎಂದೆಲ್ಲಾ ಬರೆದುಬಿಟ್ಟರೆ ಮುಗಿಯಿತೇ? ಇಲ್ಲ, ಆರ್. ಕೆ. ಲಕ್ಷ್ಮಣ್ ಅಂದರೆ ಅಷ್ಟೇ ಅಲ್ಲ.

ಬ್ರಿಟಿಷ್ ಆಡಳಿತದಿಂದ ಲಾಭ ಪಡೆದ ಭಾರತೀಯ­ರಲ್ಲಿ ಈ ರಸಿಪು­ರಮ್ ಕೃಷ್ಣ­ಸ್ವಾಮಿ ಲಕ್ಷ್ಮಣ್ ಕೂಡಾ ಒಬ್ಬರು. ಇಂಗ್ಲೆಂಡ್‌ ದಿನಪತ್ರಿಕೆಗಳು, ಹಾಸ್ಯ ಮಾಸ­ಪತ್ರಿಕೆ­ ‘ಪಂಚ್’ನಲ್ಲಿ ಪ್ರಕ­ಟವಾಗುತ್ತಿದ್ದ ವ್ಯಂಗ್ಯ­ಚಿತ್ರಗಳು ಹುಡು­ಗನಿಗೆ ಸಾಕಷ್ಟು ಮೋಡಿ ಮಾಡಿ­ದ್ದವು. ಅದ­ರಲ್ಲೂ ಇಂಗ್ಲೆಂಡ್‌ನ ಪ್ರಸಿದ್ಧ ರಾಜ­ಕೀಯ ವ್ಯಂಗ್ಯ­ಚಿತ್ರ­ಕಾರ ಡೇವಿಡ್ ಲೋ ಅವರ ಶೈಲಿಗೆ ಆಕರ್ಷಿತ­ರಾಗಿ, ‘ಪ್ರೇಮ­ಪಾಶ’ಕ್ಕೆ ಬಿದ್ದಂತಿದ್ದರು. ಲೋ ಅವರ ಬಲಿಷ್ಠ ರೇಖೆಗಳು ಲಕ್ಷ್ಮಣ್‌ ಅವರಿಗೆ ಅರಿ­ವಿಲ್ಲದೆ ಕರಗತ­ವಾಗ­ತೊಡ­ಗಿತು. ಅಷ್ಟ­ರಲ್ಲಿ ತಾನೊಬ್ಬ ವ್ಯಂಗ್ಯ­ಚಿತ್ರ­ಕಾರ­ನೆಂಬ ಅಪ­ರೂ­ಪದ ಸಂತತಿ ಎಂಬುದು ಮನದಟ್ಟಾಗಿತ್ತು. 

ಆಗ ತಾನೇ ಡಿಗ್ರಿ ವಿದ್ಯಾಭ್ಯಾಸದ ‘ಶಾಸ್ತ್ರ’ ಮುಗಿದಿತ್ತು. ಮನೆ­ಯ­ಲ್ಲಿದ್ದ ಹಳೇ ಪೆಟ್ಟಿಗೆಗೆ ಸಾಮಾನು ಸರಕನ್ನು ತುಂಬಿಸಿ (ಈಗ ಕೂಡಾ ಆ ಕಂದು ಬಣ್ಣದ ಪೆಟ್ಟಿಗೆ­ಯನ್ನು ಅವರು ಮನೆ­ಯಲ್ಲಿ ಜೋಪಾನ­ವಾಗಿಟ್ಟು­ಕೊಂಡಿ­ದ್ದಾರಂತೆ) ದಿಲ್ಲಿ ರೈಲನ್ನು ಹತ್ತಿಯೇ ಬಿಟ್ಟ ಯುವಕನಿಗೆ ‘ಹಿಂದೂಸ್ತಾನ್ ಟೈಮ್ಸ್‌’ನಲ್ಲಿ ಅವ­ಕಾಶದ ಬಾಗಿಲಿಗೆ ಕಾದರೆ, ‘ಅತಿಯಾಸೆ ಬೇಡ, ಬೇಕಿದ್ದರೆ ಪಟ್ನಾದಲ್ಲಿರುವ ನಮ್ಮ ಇನ್ನೊಂದು ಪತ್ರಿಕೆ ‘ಟಾರ್ಚ್‌ ಲೈಟ್’ನಲ್ಲಿ ಕೆಲಸ ಕೊಡೋಣ' ಎಂಬ ಉತ್ತರ ಬಂತು.

ಲಕ್ಷ್ಮಣರಲ್ಲಿ ಹಠವಿತ್ತು. ತಮ್ಮ ಪ್ರತಿಭಾ ಸಾಮರ್ಥ್ಯಕ್ಕೆ ಒಂದು ಜನ­ಪ್ರಿಯ ದಿನಪತ್ರಿಕೆಯೇ ಬೇಕು ಎಂಬ ಗುರಿ­­ಯಿಟ್ಟುಕೊಂಡಿದ್ದರು. ‘ಟಾರ್ಚ್‌ ಲೈಟ್’ ಬೆಳಕು ಸಾಲದು ಅನಿ­ಸಿದ್ದೇ ತಡ ನೇರಾ ‘ಬೊಂಬಾಯಿ’ಗೆ (ಮುಂಬೈ) ಬರುತ್ತಾರೆ. ಹೊಸ ಪ್ರತಿಭಾವಂತರಿಗೆ ಅವಕಾಶ ಕೊಡುತ್ತಿದ್ದ ‘ಫ್ರೀ ಪ್ರೆಸ್ ಜರ್ನಲ್' ದಿನಪತ್ರಿಕೆಯಲ್ಲಿ ಆರ್. ಕೆ. ಲಕ್ಷ್ಮಣ್ ಹೆಸರು ಮೊತ್ತ ಮೊದಲ ಬಾರಿಗೆ ಮುಂಬೈಗರಿಗೆ ಪರಿಚಯವಾಗುತ್ತದೆ.

‘ಫ್ರೀ ಪ್ರೆಸ್’ನಲ್ಲಿ ಪಕ್ಕದಲ್ಲಿ ಕುಳಿತು­ಕೊಳ್ಳುತ್ತಿದ್ದವರು ಬೇರಾರೂ ಅಲ್ಲ. ಆಗಿನ ಖ್ಯಾತ ವ್ಯಂಗ್ಯ­ಚಿತ್ರಕಾರ ಬಾಳ ಠಾಕ್ರೆ!  ಎಂತಹ ‘ಅನ್ಯೋನ್ಯ ಸಂಬಂಧ’ ನೋಡಿ! ಮದ್ರಾಸಿಗ­ರೆಂದರೆ ಕೆಂಡ ಕಾರುತ್ತಿದ್ದ ಠಾಕ್ರೆ ಜತೆ ಒಬ್ಬ ‘ಮದ್ರಾಸಿ’! ಆದರೂ ಒಂದು ದಿವಸ ಲಕ್ಷ್ಮಣ್, ಇನ್ನೊಂದು ದಿವಸ ಠಾಕ್ರೆ ಸರದಿಯಂತೆ  ವ್ಯಂಗ್ಯಚಿತ್ರ ಬರೆಯುತ್ತಿದ್ದಂತೆ. ನಮ್ಮ ‘ಮದ್ರಾಸಿ’ ಹೆಚ್ಚು ಕಾಲ ‘ಫ್ರೀ ಪ್ರೆಸ್’­ನಲ್ಲಿ­ರಲಿಲ್ಲ. ಅಲ್ಲೇ ಹತ್ತಿರವಿದ್ದ `ಟೈಮ್ಸ್  ಆಫ್ ಇಂಡಿಯಾ' ಕಚೇರಿಯ ಬಾಗಿಲ ಮುಂದೆ ನಿಂತರು. ಆಗಿನ ಸಂಪಾ­ದಕ ವಾಲ್ಟರ್ ಲೆಂಗ್‍ಮರ್ ಅವರು ಲಕ್ಷ್ಮಣ ಅವ­­ರನ್ನು ಆಗಲೇ `ಫ್ರೀ ಪ್ರೆಸ್'ನಲ್ಲಿ ನೋಡುತ್ತಿ­­ದ್ದರು. ‘ಯು ಕಾಪಿ ಡೇವಿಡ್ ಲೋ' ಅಂದು­ಬಿಡಬೇಕೇ! (ನೀನು ಡೇವಿಡ್ ಲೋರನ್ನು ನಕಲು ಮಾಡು­ತ್ತಿ­ದ್ದೀಯಾ!) ಲಕ್ಷ್ಮಣ್ ದಿಟ್ಟವಾಗಿ ಉತ್ತರಿಸಿ­ದರು. ‘ನಾನು ಯಾರನ್ನೂ ನಕಲು ಮಾಡುತ್ತಿಲ್ಲ’. ಹೌದಲ್ಲ! ‘ನಕಲು’ ಮಾಡುವುದಕ್ಕೆ ಲೋ ಭಾರ­ತದ ರಾಜಕಾರಣಿಗಳನ್ನು ಎಲ್ಲಿ ಚಿತ್ರಿಸು­ತ್ತಿದ್ದರು? ಆದರೆ, 24ರ ಯುವ ವ್ಯಂಗ್ಯ­ಚಿತ್ರ­ಕಾರ­ನಿಗೆ ಲೋ ಅವರ ಕೈಚಳಕ ದೈವ­ದತ್ತ­­ವಾಗಿ ಬಂದಿತ್ತು. ಅಚ್ಚರಿ ನೋಡಿ, ಸ್ವತಃ ಡೇವಿಡ್ ಲೋ ಅವರೇ ಒಂದು ದಿವಸ ಲಕ್ಷ್ಮಣ್‌ ಅವರನ್ನು ಅಭಿ­ಮಾನದಿಂದ ಕಂಡು ಮಾತನಾಡಿಸು­ವುದಕ್ಕೆ ಕಚೇರಿಗೆ ಬಂದಿದ್ದರು!

ವಾಲ್ಟರ್ ಅವರ ಕೃಪೆಯಿಂದ `ಟೈಮ್ಸ್’ ಸೇರಿದ್ದ ಲಕ್ಷ್ಮಣ್ 2004 ರವರೆಗೂ, ಅಂದರೆ 57 ವರ್ಷಗಳ ಕಾಲ ಸುದೀರ್ಘ ಸೇವೆ ಮಾಡಿದ್ದರು. ಪತ್ರಿಕೆ­ಗಂತೂ ಅವರೊಬ್ಬ ಆಸ್ತಿ­ಯಾ­ಗಿ­ದ್ದರು. ಸಂಪಾದಕರನ್ನು ಬಿಟ್ಟರೆ ವಿದೇಶ ಪ್ರವಾಸ, ಕ್ಯಾಬಿನ್, ಕಾರು, ಸಂಬಳ ಎಂದು ವಿಶೇಷ ಸೌಲಭ್ಯಗಳನ್ನು ಪಡೆಯುತ್ತಿದ್ದದ್ದು ಈ ವ್ಯಂಗ್ಯಚಿತ್ರಕಾರ.

ಕುಚೋದ್ಯ­ಗಳಿಗೆ ಪ್ರತ್ಯಕ್ಷದರ್ಶಿ: ಇದಕ್ಕೆ ಕಾರಣ- ಆಗಿನ ದಿನಗಳಲ್ಲಿ ಬಹಳಷ್ಟು ಮಹಾರಾಷ್ಟ್ರಿಗರು ‘ಯು ಸೆಡ್ ಇಟ್’ ಎಂಬ ಪಾಕೆಟ್ ಕಾರ್ಟೂನ್ ಅಂಕಣ­ವನ್ನು ನೋಡಿದ ಮೇಲೆಯೇ ಹಲ್ಲು­ಜ್ಜು­ತ್ತಿ­ದ್ದರು. ‘ಟಕಳು’ ತಲೆ, ಗಾಂಧಿ ಕನ್ನಡಕ, ಅಚ್ಚೊತ್ತಿದ ಅಚ್ಚರಿಯ ಮುಖಭಾವ, ಕೋಟು, ಕುರ್ತಾ, ಧೋತಿ, ಶೂ ಧರಿಸಿ­ಕೊಂಡ ಸುಮಾರು ಅರವತ್ತರ ವ್ಯಕ್ತಿ ಈ ಅಂಕಣ­ದಲ್ಲಿ ಇರಲೇಬೇಕು. ಅವನು ಅಲ್ಲಿ ನಡೆಯುವ ಎಲ್ಲಾ ಕುಚೋದ್ಯ­ಗಳಿಗೆ ಪ್ರತ್ಯಕ್ಷದರ್ಶಿ, ಸಾಕ್ಷಿ. ಆದರೆ ಆತ ಮುಗ್ಧ. ಎಷ್ಟೆಂದರೆ ಕಣ್ಣ ಮುಂದೆ ಏನೂ ನಡೆದರೂ ತುಟಿ ಬಿಚ್ಚುವುದಿಲ್ಲ. ಧ್ವನಿ­ಯಿಲ್ಲದ ಅಪ್ಪಟ ಶ್ರೀಸಾಮಾನ್ಯ. ಹಾಗೆಂದು ಮೂಕನೂ ಅಲ್ಲ.
ಜಗತ್ಪ್ರಸಿದ್ಧ ವ್ಯಂಗ್ಯಚಿತ್ರಕಾರ ವಾಲ್ಟ್ ಡಿಸ್ನಿ ಒಮ್ಮೆ ಭಾರತಕ್ಕೆ ಬಂದಿದ್ದಾಗ ’ಟೈಮ್ಸ್’ ಕಚೇರಿಗೆ ಭೇಟಿ ನೀಡಿದ್ದರು. ‘ಯು ಸೆಡ್ ಇಟ್’ನಲ್ಲಿರುವ ಶ್ರೀಸಾಮಾ­ನ್ಯ­ನನ್ನು ನೋಡುತ್ತಾ, ‘ಈ ವ್ಯಕ್ತಿ ಇಲ್ಲಿ ಏನು ಮಾಡುತಿದ್ದಾನೆ? ಅವನ ಅಗತ್ಯವಿಲ್ಲ.. ತೆಗೆದುಬಿಡಿ’ ಎಂಬ ವಿಚಿತ್ರ ಸಲಹೆ ಕೊಟ್ಟಾಗ ಲಕ್ಷ್ಮಣ್ ತಬ್ಬಿ­ಬ್ಬಾ­ರಾಗಿಬಿಟ್ಟರಂತೆ! ಮುಂದೆ ಅದೇ ಶ್ರೀ­ಸಾಮಾನ್ಯ ಪತ್ರಿಕೆಯ ಕಿರೀಟಕ್ಕೆ ಗರಿ­ಯಾ­ದದ್ದು ಡಿಸ್ನಿ ಅವರಿಗೆ ಗೊತ್ತಿರಲಿಕ್ಕಿಲ್ಲ.

ವ್ಯಂಗ್ಯಚಿತ್ರಕಾರರಿಗೆ ಲಕ್ಷ್ಮಣ್ ಮಾನಸ ಗುರು: ‘ಯು ಸೆಡ್ ಇಟ್’ ನ ಜನ­ಪ್ರಿಯ­ತೆ­ಯಿಂದಾಗಿ ದೇಶದ ಬಹಳಷ್ಟು ದಿನ­ಪತ್ರಿಕೆ­ಗಳಲ್ಲಿ ಅಂತಹ ವ್ಯಂಗ್ಯಚಿತ್ರ ಅಂಕಣ ಪ್ರಕಟವಾಗತೊಡಗಿತು. ಅಷ್ಟೇ ಅಲ್ಲ, ಪ್ರತೀ ವ್ಯಂಗ್ಯಚಿತ್ರಕಾರರು ಅಲ್ಲೊಬ್ಬ ಮಾತನಾಡದ ಶ್ರೀಸಾಮಾನ್ಯ ಕಡ್ಡಾಯವಾಗಿ ಇರಬೇಕೆಂದು ಭಾವಿ­ಸಿದರು. ಹೌದು, ಆರ್.ಕೆ.ಲಕ್ಷ್ಮಣ್ ಅವರ ವ್ಯಂಗ್ಯಚಿತ್ರಗಳು  ಅಷ್ಟೊಂದು ಪ್ರಭಾವ ಮಾಡಿತ್ತು. ತಾನೂ ಒಬ್ಬ ವ್ಯಂಗ್ಯಚಿತ್ರಕಾರನಾಗಬೇಕೆನ್ನುವವರ ‘ಸಂತತಿ’ ಬೆಳೆಯತೊಡಗಿತು. ಹಾಗೆ ಹುಟ್ಟಿಕೊಂಡ ವ್ಯಂಗ್ಯಚಿತ್ರಕಾರರಿಗೆಲ್ಲಾ ಲಕ್ಷ್ಮಣ್ ಮಾನಸ ಗುರುವಾದರು, ಶ್ರೀರಾಮ ಭಕ್ತರ ನಡುವೆ ಲಕ್ಷ್ಮಣ ಭಕ್ತರು!

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದೇ ಸಿಕ್ಕಿದ್ದು ನಮ್ಮ ರಾಜಕಾರಣಿಗಳಿಂದ ಬಯಲಾಟ, ಸರ್ಕಸ್ಸು, ಕೋಡಂಗಿತನ, ನಾಟಕ ಎಲ್ಲವೂ ಆರಂಭವಾಯಿತು. ಒಬ್ಬ ವ್ಯಂಗ್ಯಚಿತ್ರಕಾರ ಇದಕ್ಕಿಂತ ಇನ್ನೇನನ್ನು ಬಯಸುತ್ತಾನೆ. ಲಕ್ಷ್ಮಣ್ ಅವರಿಂದ ಅದ್ಭುತವಾದ ರಾಜಕೀಯ ವ್ಯಂಗ್ಯ­ಚಿತ್ರಗಳು  ಮೂಡಿಬರ­ತೊಡಗಿ­ದವು. ಉಳಿದ ಎಲ್ಲಾ ವ್ಯಂಗ್ಯಚಿತ್ರಕಾರರ ರಾಜಕೀಯ ವ್ಯಂಗ್ಯಚಿತ್ರ­ಗಳಿಗಿಂತ ಇವರ ವ್ಯಂಗ್ಯಚಿತ್ರಗಳು ಎದ್ದು ಕಾಣುವುದಕ್ಕೆ ಕಾರಣವಿತ್ತು.

ಕಮರ್ಷಿಯಲ್ ಸಿನಿಮಾ  ಇದ್ದಂತೆ: ರಾಜಕೀಯ ವ್ಯಂಗ್ಯಚಿತ್ರ ರಚನೆಗೆ ಅತ್ಯವಶ್ಯಕವಾಗಿರುವ ಕ್ಯಾರಿಕೇಚರಿಂಗ್ (ವ್ಯಕ್ತಿಯ ವ್ಯಂಗ್ಯಭಾವಚಿತ್ರ) ಸಾಮರ್ಥ್ಯ ಅವರಲ್ಲಿತ್ತು. ಜತೆಗೆ ತಾನು ಏನು ಹೇಳಬೇಕೋ ಅದನ್ನು ನೇರವಾಗಿ, ಅತ್ಯಂತ ತಮಾಷೆಯಾಗಿ ಹೇಳುತ್ತಿದ್ದರು. ಅಬು ಅಥವಾ ವಿಜಯನ್ ಅವರ ವ್ಯಂಗ್ಯಚಿತ್ರಗಳನ್ನು ಗ್ರಹಿಸುವುದಕ್ಕೆ ಬೇಕಾದ ಬುದ್ಧಿವಂತಿಕೆ ಬೇಕಾಗಿರಲಿಲ್ಲ. ಲಕ್ಷ್ಮಣ್ ಅಂದರೆ ಒಂದು ರೀತಿಯ ಕಮರ್ಷಿಯಲ್ ಸಿನಿಮಾ ಇದ್ದಂತೆ.   ಸುಮ್ಮನೆ ಅವರ ‘ಬ್ರಷಿಂಗ್ ಅಪ್ ದ ಇಯರ್ಸ್’ ಪುಸ್ತಕ ನೋಡುತ್ತಿದ್ದರೆ ಈ ಮನುಷ್ಯ ಎಂತಹ ಮೇಧಾವಿಯೆಂದು ತಿಳಿಯುತ್ತದೆ.

ಬರೀ ಮುನ್ನೂರು ಪುಟಗಳಲ್ಲಿ 1947ರಿಂದ 2004 ರವರೆಗಿನ ರಾಜಕೀಯ ಚಲನವಲನ­ಗಳನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಿದ್ದಾರೆ, ಇದನ್ನೇ ಬರಹ ರೂಪದಲ್ಲಿ ಇಳಿಸಲು ಒಬ್ಬ ರಾಜಕೀಯ ವಿಶ್ಲೇಷಣೆಕಾರರಿಗೆ ಕಡಿಮೆ­ಯೆಂದರೂ ಸಾವಿರ ಪುಟಗಳು ಬೇಕಾ­ಗ­ಬಹುದು!  ಅವರು ದೇಶದ ರಾಜಕೀಯ ಬೆಳವಣಿಗೆಗಳನ್ನು ನೆಹರೂ ಕಾಲದಿಂದ ತಮ್ಮ ಕುಂಚದಲ್ಲಿ ಸೆರೆ ಹಿಡಿದಿದ್ದಾರೆ. ಇಲ್ಲೊಂದು ವಿಷಯ ಹೇಳಲೇಬೇಕು. ನೆಹರೂ ಅವರ ಟ್ರೇಡ್ ಮಾರ್ಕ್ ಗಾಂಧಿ ಟೋಪಿ ಬದಲು, ಬೋಳು ತಲೆಯ ನೆಹರೂ ಬರೆಯು­ವುದ­ರಲ್ಲಿ ಅವರಿಗೆ ಹೆಚ್ಚು ತೃಪ್ತಿ ಸಿಗುತ್ತಿತ್ತಂತೆ! 

ರಾಜಕಾರಣ ಅಲರ್ಜಿ: ಲಕ್ಷ್ಮಣ್ ಅವರಿಗೆ ರಾಜಕಾರಣಿ­ಗಳೆಂದರೆ ಎಷ್ಟು ಇಷ್ಟವೋ ಅಷ್ಟೇ ಅಲರ್ಜಿ ಇತ್ತು. ಯಾವತ್ತೂ ಅವರನ್ನು ಭೇಟಿಯಾಗು­ವುದಕ್ಕೆ ಇಷ್ಟಪಡುತ್ತಿ­ರಲಿಲ್ಲ. ಅದೇನೇ ಇರಲಿ,  ತಮ್ಮ ಕಲಾಬೆಳವಣಿಗೆಗೆ ‘ಉತ್ತೇಜನ’ ನೀಡುತ್ತಾ ಬಂದ ಸಮಸ್ತ ರಾಜಕಾರಣಿ­ಗಳನ್ನು ಕೊನೆಯವರೆಗೂ ಅವರು ತುಂಬಾ ಪ್ರೀತಿಯಿಂದ ನೆನಪಿಸಿ­ಕೊಳ್ಳುತ್ತಿದ್ದರು. ಅವರಿಲ್ಲದೆ ನಾನಿಲ್ಲ ಎಂಬ ಭಾವ! ವಿಶೇಷವೆಂದರೆ ಅವರು ಈವರೆಗೆ ಬರೆದ  ಯಾವುದೇ ವ್ಯಂಗ್ಯಚಿತ್ರಗಳು ವಿವಾದ ಸೃಷ್ಟಿಸಲಿಲ್ಲ. ರಾದ್ಧಾಂತವಾಗಲಿಲ್ಲ. ಪತ್ರಿಕೆಗಂತೂ ಅವರೊಬ್ಬ ‘ಸೇಫ್ ಕಾರ್ಟೂನಿಸ್ಟ್’.

ಹೆಮ್ಮೆಯ ಕನ್ನಡಿಗ:  ಆರ್.ಕೆ.ಲಕ್ಷ್ಮಣ್ ನೆನಪು ಅಂದರೆ ಇಷ್ಟೆನಾ? ಅಲ್ಲ. ದೇಶ ಕಂಡ ಪ್ರಚಂಡ ವ್ಯಂಗ್ಯಚಿತ್ರಕಾರ ಕನ್ನಡಿಗನೆಂಬುದು  ಹೆಮ್ಮೆಯ ವಿಷಯ ಅಲ್ಲವೇ ? ಮೂಲ ತಮಿಳಿಗರಾಗಿದ್ದರೂ ಮೈಸೂರಿನಲ್ಲೇ ಹುಟ್ಟಿ ಬೆಳೆದ ಲಕ್ಷ್ಮಣ್ ಅವರು ವಿದ್ಯಾರ್ಥಿ­ಯಾಗಿದ್ದಾಗ ಕನ್ನಡದಲ್ಲಿ ಐದು ಅಂಕ ಗಳಿಸುವಷ್ಟು ಮಾತ್ರ ಕನ್ನಡ ಪ್ರೇಮ­ವಿಟ್ಟು­ಕೊಂಡಿದ್ದರು. ಕಾಲೇಜು ಕಲಿಯುತ್ತಿರು­ವಾಗಲೇ ಅವರನ್ನು ಪತ್ರಿಕಾಲೋಕಕ್ಕೆ ಪರಿಚಯಿಸಿದ ಕೀರ್ತಿ  ಕನ್ನಡದ ಹಾಸ್ಯಲೇಖಕ ರಾ.ಶಿ. (ಡಾ. ಶಿವರಾಂ) ಅವರಿಗೆ ಸಲ್ಲಬೇಕು.   ಹಾಸ್ಯ ಮಾಸಪತ್ರಿಕೆ ‘ಕೊರವಂಜಿ’ ಆರಂಭಿಸಿ­ದಾಗ ರಾ.ಶಿ. ಆವರಿಗೆ ವ್ಯಂಗ್ಯ­ಚಿತ್ರಕಾ­ರನೊಬ್ಬನ ಅಗತ್ಯವಿತ್ತು. ಆಗ ಅವರು ಪತ್ತೆ ಹಚ್ಚಿದ ಚಿಗುರು ಪ್ರತಿಭೆ ಈ ಲಕ್ಷ್ಮಣ್. ಅದು ಯಾಕೋ ಲಕ್ಷ್ಮಣ್ ಅವರಿಗೆ ಇದನ್ನು ಎಲ್ಲೂ ಹೇಳಿಕೊಳ್ಳುವ ವಿಷಯವಾಗಿ ಕಂಡಿರಲಿಲ್ಲ!

ಗರ್ವಿಷ್ಟ: ಅನೇಕರಿಗೆ ಲಕ್ಷ್ಮಣ್ ಅವರನ್ನು ಕಂಡಾಗ­ಲೆಲ್ಲಾ  ಈ ಕಾರ್ಟೂನಿಸ್ಟ್‌ ಕೂಡಾ ಎಲ್ಲಾ ಮೇಧಾವಿಗಳಂತೆ ಗರ್ವಿಷ್ಟ ಅನಿಸುತ್ತಿತ್ತು. ನಗಿಸುವ ಕಾಯಕವೆಂದರೆ ಬಹಳ ಗಂಭೀರ ಕೆಲಸ ಎಂದು ಅವರು ಆ ಮನೋಭಾವವನ್ನು ಇಟ್ಟುಕೊಂಡಿರಲಿಕ್ಕೂ ಸಾಕು. ತಮ್ಮ ಸಂದರ್ಶನ ಮಾಡಲು ಬರುವ ಪತ್ರಕ­ರ್ತರು ‘ನಿಮಗೆ ಐಡಿಯಾ ಹೇಗೆ ಸಿಗುತ್ತೆ?’ ಎಂದು ಕೇಳಿದರೆ, ‘ಮೇಲಿಂದ ಬೀಳುತ್ತೆ’. ಎಂದು ಕೆಂಡವಾಗುತ್ತಿದ್ದರು. ಅಸಂಬದ್ಧ ಪ್ರಶ್ನೆಗಳಿಗೆ ಅಷ್ಟೇ ಅಸಂಬ­ದ್ಧವಾಗಿ ಉತ್ತರಿಸುತ್ತಿದ್ದರು.  ಅವರದ್ದೇ ಕ್ಯಾರಿಕೇಚರ್ ಬರೆದು ತೋರಿಸಿದರೆ ‘ಏನಿದು?’ ಎಂಬರ್ಥದಲ್ಲಿ ಪ್ರಶ್ನೆ ಚಿಹ್ನೆ ಬರೆಯುತ್ತಿದ್ದರು.
ಅವರ ಕ್ಯಾಬಿನ್‌ಗೆ ಯಾರಿಗೂ ಪ್ರವೇಶವಿರುತ್ತಿರಲಿಲ್ಲ... ಅವರನ್ನು ಬಿಟ್ಟರೆ. ‘ಭಾರತದಲ್ಲಿ ನಾನೊಬ್ಬನೇ ನಿಜವಾದ ವ್ಯಂಗ್ಯಚಿತ್ರಕಾರ’ ಎಂಬ ನಿರ್ದಾಕ್ಷಿಣ್ಯ ನಿಲುವೂ ಅವರಲ್ಲಿತ್ತು. ಇಂತಹ ಸ್ವಭಾವದ ಲಕ್ಷ್ಮಣರಿಗೆ ಇಂದಿರಾ ಗಾಂಧಿ ಆಡಳಿತದ ಸಂದರ್ಭದಲ್ಲಿ  ತುರ್ತುಪರಿಸ್ಥಿತಿ ತಂದಾಗ ‘ಲಕ್ಷ್ಮಣ ರೇಖೆ’ ದಾಟಬಾರದೆಂದು ಹೇಳಿದರೆ ಹೇಗಾಗ­ಬಹುದು ಹೇಳಿ! ತಾನು ಕಾರ್ಟೂನ್ ಮಾಡುವ ಮನಸ್ಥಿತಿಯಲ್ಲಿ ಇಲ್ಲ ಎಂದು ವಿದೇಶ ಪ್ರವಾಸಕ್ಕೆ ಹೊರಟೇ ಬಿಟ್ಟರಂತೆ!

ಅವರ ಗರ್ವ ಎಷ್ಟಿತ್ತು ಎಂದರೆ ಹತ್ತು ವರ್ಷಗಳ ಹಿಂದೆ ಅವರು ಪಾರ್ಶ್ವವಾಯು ಬಡಿದು ಗಾಲಿಕುರ್ಚಿಯಲ್ಲಿ ತಿರುಗಾಡುವ ಸ್ಥಿತಿ ಬಂದಾಗಲೂ ಕಾರ್ಟೂನ್ ಬರೆಯು­ವುದನ್ನು ನಿಲ್ಲಿಸಲಿಲ್ಲ.  ಆಗ ಅವರ ರಚನೆಗಳಲ್ಲಿ ಹಿಂದಿನ ಬಲಿಷ್ಠತನ ಕಾಣುವುದು ಸಾಧ್ಯವಿರಲಿಲ್ಲ.ಇಷ್ಟು ಬರೆದು....ಆರ್.ಕೆ. ಲಕ್ಷ್ಮಣ್ ಅಂದರೆ ಇಷ್ಟೆನಾ? ಎಂದು ಮತ್ತೆ ಅನಿಸುತ್ತಿದೆ ನೋಡಿ!  ಸತತವಾಗಿ ಆರು ದಶಕಗಳ ಕಾಲ ಒಂದೇ ದಿನಪತ್ರಿಕೆಯಲ್ಲಿ ವ್ಯಂಗ್ಯಚಿತ್ರ ಬರೆಯುವುದು ಅವರಿಗೆ ಮಾತ್ರ ಸಾಧ್ಯವಾಗಿತ್ತು. ಭಾರತದ ಯಾವನೇ ವ್ಯಂಗ್ಯಚಿತ್ರ­ಕಾರನೂ ಪಡೆಯದ  ರೇಮನ್‌ ಮ್ಯಾಗ್ಸೆಸೆ ಪ್ರಶಸ್ತಿ  ಅವರಿಗೆ ಸಿಕ್ಕಿತ್ತು. ತಮ್ಮ ಕಾರ್ಟೂನ್‌ನಲ್ಲಿ ವಿಜೃಂಭಿ­ಸುತ್ತಿದ್ದ ಶ್ರೀಸಾಮಾನ್ಯ  ನಗರದ ಮಧ್ಯೆ ಪ್ರತಿಮೆ­ಯನ್ನಾಗಿ ನೋಡುವ ಭಾಗ್ಯ ಸಿಕ್ಕಿದ್ದು ಲಕ್ಷ್ಮಣರಿಗೆ ಮಾತ್ರವಲ್ಲವೇ!

ನಿಜ, ಆರ್.ಕೆ. ಲಕ್ಷ್ಮಣ್ ಭಾರತೀಯ ಪತ್ರಿಕಾಲೋಕದಲ್ಲಿ ಮಾಡಿದ ಅಪ್ರತಿಮ ಸಾಧನೆ ಬಹಳ ಬಹಳ ಕಾಲದ ವರೆಗೆ ಉಳಿಯು­ವಂತ­ಹುದು. ಏನೂ ಬೇಡ, ಅವರ ಹಳೇಯ ಕಾರ್ಟೂನ್ ಸಂಕಲನ­ಗಳ­ನ್ನೊಮ್ಮೆ ತಿರುವಿದರೆ ಸಾಕು, ಇಂತಹ ಒಬ್ಬ ದೈತ್ಯ ಪ್ರತಿಭೆ ನಮ್ಮೊಂದಿಗೆ ಇತ್ತು ಎಂದು ನೂರಿನ್ನೂರು ವರ್ಷಗಳ ನಂತರವೂ ಹೆಮ್ಮೆಯಿಂದ ಹೇಳ­ಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT