ADVERTISEMENT

ಶಿಕ್ಷಕರಿಗೆ ಇನ್ನೂ ಬಾರದ ಜೂನ್ ತಿಂಗಳ ವೇತನ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸುಮಾರು 4 ಲಕ್ಷ ಶಿಕ್ಷಕರಿಗೆ ಜೂನ್‌ ತಿಂಗಳ ವೇತನ ಇದುವರೆಗೂ ಬಿಡುಗಡೆ ಆಗಿಲ್ಲ.

‘ನಮಗೆ ಪ್ರತಿ ತಿಂಗಳು 1ರಿಂದ 5ನೇ ತಾರೀಖಿನೊಳಗೆ ಬ್ಯಾಂಕ್‌ ಖಾತೆಗೆ ಸಂಬಳ ವರ್ಗಾವಣೆ ಆಗಲಿದೆ. ಆದರೆ, ಈ ತಿಂಗಳು 20 ಕಳೆದರೂ ವೇತನ ಬಂದಿಲ್ಲ’ ಎಂದು ಅನೇಕ ಶಿಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರದಿಂದ ಅನುದಾನ ಬಿಡುಗಡೆ ಆಗದಿರುವುದೇ ಇದಕ್ಕೆ ಕಾರಣ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ. ಆದರೆ, ಹಿರಿಯ ಅಧಿಕಾರಿಗಳು ಇದನ್ನು ಒಪ್ಪುತ್ತಿಲ್ಲ.

ADVERTISEMENT

ಮಾರ್ಚ್‌ ಅಂತ್ಯದಲ್ಲಿ  ಮುಂದಿನ ನಾಲ್ಕು ತಿಂಗಳ ಅವಧಿಗೆ ಲೇಖಾನುದಾನ ಪಡೆದು ಸಂಬಂಧಪಟ್ಟ ಇಲಾಖೆಗೆ ವೇತನಾನುದಾನ ಬಿಡುಗಡೆ ಮಾಡಲಾಗುತ್ತದೆ.  ಈ ಸಾಲಿನಲ್ಲಿ ಜುಲೈ  1ರಿಂದ ಸರಕು ಮತ್ತು ಸೇವಾ ತೆರಿಗೆ ಜಾರಿ ಮಾಡಬೇಕಾದ ಕಾರಣದಿಂದ ಮೂರು ತಿಂಗಳಿಗೆ ಮಾತ್ರ ಲೇಖಾನುದಾನ ಪಡೆಯಲಾಗಿತ್ತು.

ಜೂನ್ ತಿಂಗಳಿನಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ  ಪೂರ್ಣ ಬಜೆಟ್‌ಗೆ ಅಂಗೀಕಾರ ನೀಡಲಾಗಿದೆ. ಹಾಗಿದ್ದರೂ ಹಣಕಾಸು ಇಲಾಖೆ ವೇತನಾನುದಾನ ಬಿಡುಗಡೆ ಮಾಡಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಈ ವರ್ಷ ಏಪ್ರಿಲ್‌ನಲ್ಲಿ ಅನುದಾನ ಬಿಡುಗಡೆಯಾಗಿತ್ತು. ಆದರೆ, ಮಾರ್ಚ್‌ ತಿಂಗಳ ವೇತನ ಪಾವತಿಸಲು ಹಿಂದಿನ ವರ್ಷದ ಅನುದಾನ ಲಭ್ಯವಿಲ್ಲದ ಕಾರಣ ಈ ವರ್ಷದ ಅನುದಾನವನ್ನೇ ಬಳಸಿಕೊಳ್ಳಲಾಗಿತ್ತು. ಹೀಗಾಗಿ ಸಮಸ್ಯೆಯಾಗಿದೆ ಎನ್ನುತ್ತವೆ ಮೂಲಗಳು.

ಇತರ ಇಲಾಖೆಗಳ ನೌಕರರಿಗೆ ಈ ಸಮಸ್ಯೆ ಇಲ್ಲ. ಆದರೆ, ಶಿಕ್ಷಕರಿಗೆ ಮಾತ್ರ ಏಕೆ ಈ ಸಮಸ್ಯೆ ಎಂಬುದು ಶಿಕ್ಷಕರ ಪ್ರಶ್ನೆ.

‘ಸರ್ಕಾರ ಅನುದಾನ ಬಿಡುಗಡೆ ಮಾಡಿದ ಬಳಿಕ ಅದು ಮೊದಲು ಜಿಲ್ಲಾ ಪಂಚಾಯತ್‌ಗಳಿಗೆ ಬಿಡುಗಡೆ ಆಗುತ್ತದೆ. ಬಳಿಕ ತಾಲ್ಲೂಕು ಪಂಚಾಯತ್‌ಗಳಿಗೆ ಜಮೆ ಆಗಿ ಆ ಮೂಲಕ ಖಜಾನೆಗಳಿಗೆ ಹೋಗುತ್ತದೆ. ಈ ಪ್ರಕ್ರಿಯೆಗೆ ಕನಿಷ್ಠ ಒಂದು ವಾರ ಸಮಯ ತೆಗೆದುಕೊಳ್ಳುತ್ತದೆ. ಇನ್ನೊಂದು ವಾರದಲ್ಲಿ ಸಮಸ್ಯೆ ಬಗೆಹರಿಯಲಿದೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

‘ವೇತನ ಬಾರದ ಶಿಕ್ಷಕರು ಮಾಹಿತಿ ಕೊಡಿ’
‘ಪ್ರತಿ ತಿಂಗಳಿನಂತೆ ಈ ಬಾರಿಯೂ ಎಲ್ಲ ಶಿಕ್ಷಕರಿಗೆ ವೇತನ ಜಮೆ ಆಗಿದೆ. ಯಾವ ಶಾಲೆಯ ಯಾವ ಶಿಕ್ಷಕರಿಗೆ ಸಂಬಳ ಬಂದಿಲ್ಲ ಎಂಬ ವಿವರ ನೀಡಿದರೆ ಪರಿಶೀಲಿಸಲಾಗುವುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಾದ ಸೌಜನ್ಯಾ ಹೇಳಿದರು.

‘ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ವ್ಯಾಪ್ತಿಯ ಎಲ್ಲ ಶಿಕ್ಷಕರಿಗೆ ಸಂಬಳ ಜಮೆ ಆಗದೆ ಆ ಅಧಿಕಾರಿಯ ಸಂಬಳ ಬಿಡುಗಡೆ ಆಗುವುದಿಲ್ಲ. ಇದುವರೆಗೆ ಜೂನ್‌ ತಿಂಗಳ ಸಂಬಳ ಬಂದಿಲ್ಲ ಎಂದು ನನಗೆ ಯಾರೂ ದೂರು ನೀಡಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.