ADVERTISEMENT

ಶಿವಪ್ರಸಾದ್‌ಗೆ ಹಾಲಭಾವಿ ರಾಷ್ಟ್ರೀಯ ಪ್ರಶಸ್ತಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2014, 19:30 IST
Last Updated 25 ನವೆಂಬರ್ 2014, 19:30 IST

ಧಾರವಾಡ: ಚಿತ್ರಕಲಾ ಶಿಲ್ಪಿ ಡಿ.ವಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ವತಿಯಿಂದ ಜೀವಮಾನ ಸಾಧನೆ ಗಾಗಿ ಕೊಡ­ಮಾಡುವ ‘ಕಲಾ ತಪಸ್ವಿ’ ರಾಷ್ಟ್ರೀಯ ಪ್ರಶಸ್ತಿಗೆ ಹಾಸನದ ಅಂತರ ರಾಷ್ಟ್ರೀಯ ಕಲಾವಿದ ಕೆ.ಟಿ. ಶಿವ ಪ್ರಸಾದ್‌, ‘ಕುಂಚ ಕಲಾಶ್ರೀ’ ರಾಷ್ಟ್ರೀಯ ಪ್ರಶಸ್ತಿಗೆ ಬೆಂಗಳೂರಿನ ಚಿ.ಸು.ಕೃಷ್ಣ ಸೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.

'ಯುವ ಕುಂಚ ಕಲಾಶ್ರೀ'  ಪ್ರಶಸ್ತಿಗೆ ಒಡಿಶಾದ ಮಾನಶ ರಂಜನ್‌ ಜೆನಾ ಮತ್ತು ಚೆನ್ನೈನ ಇಳಯರಾಜ ಆಯ್ಕೆ ಯಾಗಿದ್ದಾರೆ. ‘ಕಲಾ ತಪಸ್ವಿ’ ರಾಷ್ಟ್ರೀಯ ಪ್ರಶಸ್ತಿಯು ₨ 1 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ, ‘ಕುಂಚ ಕಲಾಶ್ರೀ’ ಪ್ರಶಸ್ತಿಯು ₨ 50,000 ನಗದು ಮತ್ತು ಫಲಕ, ‘ಯುವ ಕುಂಚ ಕಲಾಶ್ರೀ’ ಪ್ರಶಸ್ತಿಯು ತಲಾ ₨ 25,000 ನಗದು ಮತ್ತು ಫಲಕ ಒಳಗೊಂಡಿದೆ. ಇದೇ 29 ರಂದು ಇಲ್ಲಿನ ಸೃಜನಾ ರಂಗಮಂದಿ­ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಟ್ರಸ್ಟ್‌ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭದ ಮುನ್ನಾ ದಿನವಾದ 28 ರಂದು ಬೆಳಿಗ್ಗೆ 11ಕ್ಕೆ ನಗರದ ಸರ್ಕಾರಿ ಕಲಾ ಗ್ಯಾಲರಿಯಲ್ಲಿ ಪ್ರಶಸ್ತಿಗೆ ಭಾಜನರಾದ ಕಲಾವಿದರಿಂದ ಪ್ರಾತ್ಯಕ್ಷಿಕೆ ಹಾಗೂ ಸ್ಲೈಡ್‌ ಶೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.