ADVERTISEMENT

ಶೇ 80ರಷ್ಟು ಮತದಾನ

​ಪ್ರಜಾವಾಣಿ ವಾರ್ತೆ
Published 29 ಮೇ 2015, 19:30 IST
Last Updated 29 ಮೇ 2015, 19:30 IST

ಬೆಂಗಳೂರು: ಹದಿನೈದು ಜಿಲ್ಲೆಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ ಶುಕ್ರವಾರ ಬಹುತೇಕ ಶಾಂತಿಯುತ ಮತ
ದಾನ ನಡೆದಿದೆ. ಪ್ರಾಥಮಿಕ ವರದಿಗಳ ಪ್ರಕಾರ ಶೇ 78– 80ರಷ್ಟು ಜನ ಮತಾಧಿಕಾರ ಚಲಾಯಿಸಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ಬೆಳಗಾವಿ ಜಿಲ್ಲೆಯ ರಾಯಬಾಗ ಮತ್ತು ರಾಮದುರ್ಗ ತಾಲ್ಲೂಕುಗಳು, ಹಾವೇರಿ ಜಿಲ್ಲೆಯ ಹಾನಗಲ್, ಧಾರವಾಡ, ಹುಬ್ಬಳ್ಳಿ ತಾಲ್ಲೂಕುಗಳ ಅನೇಕ ಕಡೆ ಮಳೆಯಿಂದಾಗಿ ಗ್ರಾಮ ಪಂಚಾಯ್ತಿ ಚುನಾವಣೆಯ ಮತದಾನಕ್ಕೆ ಅಡ್ಡಿಯಾಯಿತು. ಹಾನಗಲ್ ಮತ್ತಿತರ ಕಡೆ ಮಳೆಯಿಂದಾಗಿ ಮನೆಯಲ್ಲಿ ಕುಳಿತಿದ್ದ ಮತದಾರರನ್ನು ಮತಗಟ್ಟೆಗೆ ಕರೆತರಲು ಅಭ್ಯರ್ಥಿಗಳು ಅಂಗಲಾಚುತ್ತಿದ್ದ ದೃಶ್ಯ ಕಂಡುಬಂತು. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮತದಾನಕ್ಕೆ ಮಳೆ ಅಡ್ಡಿ ಉಂಟುಮಾಡಿತು.

ಜನ ಬೆಳಿಗ್ಗೆ ಮತಗಟ್ಟೆಗಳಿಗೆ ತೆರಳುವ ಸಿದ್ಧತೆಯಲ್ಲಿದ್ದರು. ಆದರೆ ಮಳೆರಾಯ ಮತದಾರರ ಉತ್ಸಾಹಕ್ಕೆ ಭಂಗ ತಂದ. ಮಂಗಳೂರು ಹೊರವಲಯದ ವಾಮಂಜೂರು, ದೇರಳಕಟ್ಟೆ, ಬೆಳ್ತಂಗಡಿ ತಾಲ್ಲೂಕಿನ ವೇಣೂರು, ಸುಳ್ಯ, ಪುತ್ತೂರು ತಾಲ್ಲೂಕುಗಳ ಹಲವೆಡೆ ಬಿರುಸಿನ ಮಳೆ ಸುರಿಯಿತು.

ಗುರುತಿನ ಚೀಟಿ ತೋರಿಸದೇ ಮತ ಚಲಾಯಿಸಿದ ಸಿಎಂ!
ಮೈಸೂರು:‘ನನಗೆ ನಾನೇ ಐಡೆಂಟಿಫಿಕೇಷನ್...’ ಹೀಗೆಂದು ತಮ್ಮ ಗುರುತನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರುಜುವಾತು ಪಡಿಸಲು ಯತ್ನಿಸಿದರು! ಹೌದು, ತಮ್ಮ ಸ್ವಗ್ರಾಮ ಸಿದ್ದರಾಮನ ಹುಂಡಿಗೆ ಶುಕ್ರವಾರ ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಮತದಾನ ಮಾಡಲು ಬಂದ ಅವರು,  ಮತಗಟ್ಟೆ ಅಧಿಕಾರಿ ಚುನಾವಣಾ ಗುರುತಿನ ಚೀಟಿ ಕೇಳಿದಾಗ ಈ ರೀತಿ ಪ್ರತಿಕ್ರಿಯಿಸಿದರು.

‘ನಾನೂ ಸ್ಥಳೀಯನೇ, ಇದೇ ಊರಿನವನು. 286ನೇ ಕ್ರಮ ಸಂಖ್ಯೆಯಲ್ಲಿ ನನ್ನ ಹೆಸರಿನ ಜತೆಗೆ ಭಾವಚಿತ್ರವೂ ಇದೆ ಪರಿಶೀಲಿಸಿರಿ’ ಎಂದು ಕ್ರಮಸಂಖ್ಯೆವುಳ್ಳ ಚೀಟಿಯನ್ನು ಮತಗಟ್ಟೆ ಅಧಿಕಾರಿಗೆ ನೀಡಿದರು.ನಗುತ್ತಲೇ ಚೀಟಿ ಸ್ವೀಕರಿಸಿದ ಅಧಿಕಾರಿಯು ಮತದಾರರ ಪಟ್ಟಿಯಲ್ಲಿ ಹೆಸರು, ಭಾವಚಿತ್ರವಿರುವುದನ್ನು ಖಚಿತಪಡಿಸಿಕೊಂಡು ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.