ADVERTISEMENT

ಶ್ಯಾಮಶಾಸ್ತ್ರಿ ಪತ್ನಿ ಅಳಲು

ರಾಘವೇಶ್ವರರ ಪ್ರಭಾವದಲ್ಲಿ ಸಿಐಡಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2015, 19:30 IST
Last Updated 20 ಆಗಸ್ಟ್ 2015, 19:30 IST

ಬೆಂಗಳೂರು: ‘ರಾಘವೇಶ್ವರ ಸ್ವಾಮೀಜಿ ಅವರ ಉಪಟಳದಿಂದ ಪತಿ ಆತ್ಮಹತ್ಯೆ ಮಾಡಿಕೊಂಡು ವರ್ಷವಾಯಿತು. ಆದರೆ, ತಪ್ಪಿತಸ್ಥರ ವಿರುದ್ಧ ಈವರೆಗೂ ಕ್ರಮ ಕೈಗೊಂಡಿಲ್ಲ. ತಾವಾದರೂ ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕು’ ಎಂದು ಶ್ಯಾಮಶಾಸ್ತ್ರಿ ಅವರ ಪತ್ನಿ ಸಂಧ್ಯಾ ಅವರು ಸಿಐಡಿ ಡಿಜಿಪಿ ಕಿಶೋರ್‌ಚಂದ್ರ ಅವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು.

ರಾಘವೇಶ್ವರ ಸ್ವಾಮೀಜಿ ವಿರುದ್ಧ ಗಾಯಕಿ ಪ್ರೇಮಲತಾ–ದಿವಾಕರ್ ಶಾಸ್ತ್ರಿ ದಂಪತಿ ಅತ್ಯಾಚಾರ ಆರೋಪ ಹೊರಿಸಿದ್ದ ಬೆನ್ನಲ್ಲೇ, ದಿವಾಕರ ಶಾಸ್ತ್ರಿ ಅವರ ಸೋದರ  ಶ್ಯಾಮಶಾಸ್ತ್ರಿ ಗುಂಡು ಹಾರಿಸಿಕೊಂಡು ಪ್ರಾಣ ಬಿಟ್ಟಿದ್ದರು.

‘ಸ್ವಾಮೀಜಿ ಪರ ಸಾಕ್ಷಿ ಹೇಳುವಂತೆ ಸ್ವಾಮೀಜಿ ಬೆಂಬಲಿಗರು ಬೆದರಿಕೆ ಹಾಕುತ್ತಿದ್ದರಿಂದ ಶಾಸ್ತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದರು.

‘ಪ್ರಕರಣದ ತನಿಖೆ ನಡೆಸುತ್ತಿದ್ದ ಹಿಂದಿನ ಕೆಲ ಉನ್ನತ ಅಧಿಕಾರಿಗಳು ಹಾಗೂ ಈಗಿರುವ ತನಿಖಾಧಿಕಾರಿಗಳು ರಾಘವೇಶ್ವರ ಸ್ವಾಮೀಜಿ ಅವರ ಪ್ರಭಾವಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಪಾರದರ್ಶಕ ತನಿಖೆ ಮೂಲಕ ನನಗೆ ನ್ಯಾಯ ಕೊಡಿಸಬೇಕು’ ಎಂದು ಸಂಧ್ಯಾ ಪತ್ರದಲ್ಲಿ ಕೋರಿದ್ದಾರೆ.

‘ಹವ್ಯಕ ಪುತ್ತೂರು ವಲಯದ ಅಧ್ಯಕ್ಷರಾದ ಬೋನಂತಾಯ ಶಿವಶಂಕರ ಭಟ್‌ ಅವರು ರಾಘವೇಶ್ವರರ ಸೂಚನೆಯಂತೆ ಪತಿಗೆ ದೂರವಾಣಿ ಮೂಲಕ ಬೆದರಿಕೆ ಹಾಕುತ್ತಿದ್ದರು. ಇದರಿಂದ ನೊಂದು ಪತಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿರುಕುಳ ನೀಡುತ್ತಿದ್ದ ಎಲ್ಲರ ಹೆಸರು ಪತ್ರದಲ್ಲಿವೆ. ಆದರೆ, ಪುತ್ತೂರು ಪೊಲೀಸರು ಎಫ್‌ಐಆರ್‌ ಪ್ರತಿಯಿಂದ ಆ ಹೆಸರುಗಳನ್ನು ತೆಗೆದು ಹಾಕಿದ್ದಾರೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

‘ತಪ್ಪು ಮಾಡಿದರೂ ನಿರಾಳವಾಗಿ ಓಡಾಡುತ್ತಿರುವ ಆರೋಪಿಗಳು, ನನ್ನ ಕುಟುಂಬದ ರಕ್ಷಣೆಗೆ ನಿಂತವರಿಗೆ ಬೆದರಿಕೆ–ಬಹಿಷ್ಕಾರ ಹಾಕುತ್ತಿದ್ದಾರೆ. ನಮಗೆ ಯಾವುದೇ ನೆರವು ನೀಡಬಾರದೆಂದು ಇಡೀ ಊರಿಗೆ ಎಚ್ಚರಿಕೆ ನೀಡಿದ್ದಾರೆ. ಜೀವ ಬಿಗಿ ಹಿಡಿದು ದಿನ ದೂಡುತ್ತಿದ್ದೇವೆ. ನನಗೆ ಹಾಗೂ ನನ್ನ ಇಬ್ಬರು ಮಕ್ಕಳಿಗೆ ರಕ್ಷಣೆ ಒದಗಿಸಬೇಕು’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.