ADVERTISEMENT

ಸಂಗಮದಲ್ಲಿ ಅಣೆಕಟ್ಟೆ ನಿರ್ಮಾಣ ತರವಲ್ಲ

ಮೇಕೆದಾಟು ಯೋಜನೆಗೆ ಶಿವನಸಮುದ್ರ ಸೂಕ್ತ: ಗ್ರೀನ್‌ ಆಸ್ಕರ್‌ ಪುರಸ್ಕೃತ ಸಂಜಯ ಗುಬ್ಬಿ ಸಲಹೆ

ಮಂಜುನಾಥ್ ಹೆಬ್ಬಾರ್‌
Published 24 ಮೇ 2017, 19:30 IST
Last Updated 24 ಮೇ 2017, 19:30 IST
ಸಂಗಮದಲ್ಲಿ ಅಣೆಕಟ್ಟೆ ನಿರ್ಮಾಣ ತರವಲ್ಲ
ಸಂಗಮದಲ್ಲಿ ಅಣೆಕಟ್ಟೆ ನಿರ್ಮಾಣ ತರವಲ್ಲ   
ಬೆಂಗಳೂರು: ‘ಮೇಕೆದಾಟು ಯೋಜನೆಗೆ ಸಂಗಮದಲ್ಲಿ ಅಣೆಕಟ್ಟೆ ನಿರ್ಮಾಣ ಮಾಡಿದರೆ ಮೂರು ಗ್ರಾಮಗಳ ಸುಮಾರು ಸಾವಿರ ಎಕರೆ ಮುಳುಗಡೆಯಾಗುತ್ತದೆ. ಅದರ ಬದಲು ಶಿವನಸಮುದ್ರದಲ್ಲೇ ಅಣೆಕಟ್ಟೆ ನಿರ್ಮಿಸಬೇಕು’ 
 
ಇದು ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಜಯ್‌ ಗುಬ್ಬಿ ಅವರ ಸ್ಪಷ್ಟ ನುಡಿ.  ರಾಜ್ಯದಲ್ಲಿ ಹುಲಿ ಕಾರಿಡಾರ್‌ ಸಂರಕ್ಷಿಸುತ್ತಿರುವ ಗುಬ್ಬಿ, ಇತ್ತೀಚೆಗೆ ‘ಗ್ರೀನ್‌ ಆಸ್ಕರ್‌’ ಎಂದೇ ಖ್ಯಾತಿ ಪಡೆದಿರುವ ಪ್ರತಿಷ್ಠಿತ ‘ವೈಟ್ಲಿ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು  ವನ್ಯಜೀವಿ ಸಂರಕ್ಷಣೆಯ ಹಾದಿ, ಮಾನವ– ಕಾಡುಪ್ರಾಣಿ  ಸಂಘರ್ಷ, ಬೃಹತ್‌ ಯೋಜನೆಗಳಿಂದ ಅರಣ್ಯಗಳು ಎದುರಿಸುವ ಆಪತ್ತು ಹಾಗೂ ಭವಿಷ್ಯದ ಕಾರ್ಯಯೋಜನೆಗಳ ಬಗ್ಗೆ ಅನಿಸಿಕೆ ಹಂಚಿಕೊಂಡರು. 
 
* ವನ್ಯಜೀವಿ ಸಂರಕ್ಷಣೆಗಾಗಿ  ರಾಜ್ಯದಲ್ಲಿ ಆಗಬೇಕಾದ  ಕೆಲಸಗಳು ಯಾವುವು? 
ರಾಷ್ಟ್ರೀಯ ಉದ್ಯಾನ ಹಾಗೂ ವನ್ಯಜೀವಿಧಾಮಕ್ಕೆ ಹೊಸ ಪ್ರದೇಶಗಳನ್ನು ಸೇರಿಸುವ ಮೂಲಕ ಪ್ರಾಣಿಗಳಿಗೆ ಉತ್ತಮ ನೆಲೆಯನ್ನು ಕಲ್ಪಿಸುವ ಕಾರ್ಯ ಈಗಾಗಲೇ ಆಗಿದೆ.  ಅವುಗಳನ್ನು ಸಂರಕ್ಷಿಸುವ ಕೆಲಸಕ್ಕೆ ಆದ್ಯತೆ ಸಿಗಬೇಕು. ಆ ದಿಸೆಯಲ್ಲಿ ನಾವು ಕೆಲಸ ಮಾಡಬೇಕು. ಪರಿಸರದ ಮೇಲಿನ ಹಾನಿಯನ್ನು ತಗ್ಗಿಸುವ ರೀತಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು. ಉದಾಹರಣೆಗೆ ಮೇಕೆದಾಟು ಯೋಜನೆ. 
 
* ಮೇಕೆದಾಟುವಿನ ಬದಲು ಶಿವನ ಸಮುದ್ರದಲ್ಲಿ ಅಣೆಕಟ್ಟು ನಿರ್ಮಿಸುವುದರಿಂದ ಏನು ಉಪಯೋಗ?  
‘ಸಂಗಮ ಸಮತಟ್ಟಾದ ಪ್ರದೇಶ. ಇಲ್ಲಿ ಅಣೆಕಟ್ಟೆ ನಿರ್ಮಾಣಕ್ಕೆ ಖರ್ಚೂ ಹೆಚ್ಚು. ಜನರಿಗೂ ತೊಂದರೆ. ಶಿವನಸಮುದ್ರದಲ್ಲಿ ಕೆಲವೇ ಎಕರೆ ಭೂಸ್ವಾಧೀನ ಮಾಡಿದರೆ ಸಾಕು. ಆಳವಾದ ಪ್ರದೇಶವನ್ನು ಹೊಂದಿರುವ ಈ ಜಾಗದಲ್ಲಿ  ಜಾಸ್ತಿ ನೀರನ್ನು ಸಂಗ್ರಹಿಸಬಹುದು. ಇದನ್ನು ಬಿಟ್ಟು ಸಂಗಮದಲ್ಲಿ ಅಣೆಕಟ್ಟೆ ನಿರ್ಮಾಣ ಮಾಡುವುದರ ತರ್ಕವೇ ಅರ್ಥವಾಗುತ್ತಿಲ್ಲ. 
 
* ಬೃಹತ್‌ ಯೋಜನೆಗಳಿಂದಾಗಿ (ಎತ್ತಿನಹೊಳೆ, ನೀಲಂಬೂರು– ನಂಜನಗೂಡು ರೈಲು, ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗ,...) ರಾಜ್ಯದ ಪ್ರಮುಖ ವನ್ಯಜೀವಿಗಳ ಆವಾಸಗಳು  ಅಪಾಯ ಎದುರಿಸುತ್ತಿವೆಯಲ್ಲ? 
ರಾಜ್ಯದಲ್ಲಿ ಹೇರಳ ಅರಣ್ಯ ಇರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಆದರೆ, ಅಲ್ಲಿ ಸಂರಕ್ಷಣೆಯ ಕಾರ್ಯ ಸಮರ್ಪಕವಾಗಿ ಆಗಿಲ್ಲ. ಅಲ್ಲಿನ ಕಾಡುಗಳನ್ನು ಸಂರಕ್ಷಿತ ಅರಣ್ಯಗಳನ್ನಾಗಿ ಮಾಡುವ ಕೆಲಸದಲ್ಲಿ ಹಿಂದುಳಿದಿದ್ದೇವೆ. ಇದರಿಂದಾಗಿ ಜಿಲ್ಲೆಗೆ ಬೃಹತ್‌ ಯೋಜನೆಗಳು ದೊಡ್ಡ 
ಪ್ರಮಾಣದಲ್ಲಿ ದಾಂಗುಡಿ ಇಡುತ್ತಿವೆ. ವನ್ಯಜೀವಿ ಧಾಮ ಮಾಡಿದ್ದರೆ ಹುಬ್ಬಳ್ಳಿ– ಅಂಕೋಲಾ ರೈಲು  ಯೋಜನೆಯ ಪ್ರಸ್ತಾವವೇ  ಬರುತ್ತಿರಲಿಲ್ಲ. ಅದಕ್ಕೆ ಅನುಮತಿ ಪಡೆಯುವುದು ಕಷ್ಟವಾಗುತ್ತಿತ್ತು. 
 
ಕೇರಳದ ಮಲಪ್ಪುರ ಜಿಲ್ಲೆಯ ನೀಲಂಬೂರಿನಿಂದ ಮೈಸೂರು ಜಿಲ್ಲೆ ನಂಜನಗೂಡನ್ನು ಸಂಪರ್ಕಿಸುವ ಪ್ರಸ್ತಾವಿತ ರೈಲು ಮಾರ್ಗವು ಬಂಡೀಪುರ ರಾಷ್ಟ್ರೀಯ ಉದ್ಯಾನದ ಮೂಲಕ ಹಾದು ಹೋಗುತ್ತದೆ. ಹೀಗಾಗಿ ಈ ಯೋಜನೆ ಅನುಮತಿ ನೀಡಲೇಬಾರದು. 
 
ಈ ಪ್ರದೇಶ ಹಿಂದೆ ಮೀಸಲು ಅರಣ್ಯ ಆಗಿತ್ತು. ಅದನ್ನು  ಅಭಯಾರಣ್ಯವನ್ನಾಗಿ ಘೋಷಿಸಲಾಗಿದೆ. ಅಲ್ಲಿ ರೈಲು ಮಾರ್ಗ ನಿರ್ಮಾಣ ಮಾಡುವುದಕ್ಕೆ ಕಾನೂನು ತೊಡಕುಗಳು ಇವೆ. 
 
* ಭಾರಿ ಯೋಜನೆಗಳು ವನ್ಯಜೀವಿ ಆವಾಸಗಳನ್ನು ಆಕ್ರಮಿಸಲು   ಹೋರಾಟಗಾರರ ನಿಷ್ಕ್ರಿಯತೆ ಕಾರಣವೇ? 
ಹೋರಾಟದಿಂದಲೇ ಎಲ್ಲವೂ ಆಗುತ್ತದೆ ಎಂಬ ಮನೋಭಾವದಿಂದ   ವನ್ಯಜೀವಿ ಸಂರಕ್ಷಕರು, ಪರಿಸರವಾದಿಗಳು ಮೊದಲು ಹೊರಗೆ ಬರಬೇಕು. ಯಾವುದೇ ಕೆಲಸಕ್ಕೆ ಆರಂಭದಲ್ಲೇ ಬೀದಿಗೆ ಇಳಿಯುವುದು ಒಳ್ಳೆಯ ಮಾರ್ಗ ಅಲ್ಲ. ಆರಂಭಿಕ ಹಂತದಲ್ಲಿ ಆಡಳಿತಗಾರರ, ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿ ಮನವೊಲಿಸಲು ಯತ್ನಿಸಬೇಕು.
 
ಸ್ವಲ್ಪ ತಾಳ್ಮೆಯಿಂದ ಮುನ್ನಡೆದರೆ ಉತ್ತಮ ಫಲಿತಾಂಶ ಖಂಡಿತಾ ಸಿಗುತ್ತದೆ. ಇದೇ ಮಾರ್ಗದಲ್ಲಿ ಸಾಗಿದ ಕಾರಣದಿಂದ 10 ವರ್ಷಗಳಲ್ಲಿ 7 ಲಕ್ಷ ಎಕರೆಯನ್ನು ವನ್ಯಜೀವಿ ಧಾಮ ಹಾಗೂ ರಾಷ್ಟ್ರೀಯ ಉದ್ಯಾನಕ್ಕೆ ಸೇರಿಸಲು ನಮಗೆ ಸಾಧ್ಯವಾಯಿತು. ಗುಮಾಸ್ತನಿಂದ ಹಿಡಿದು ಮುಖ್ಯಮಂತ್ರಿವರೆಗೂ ಮನವೊಲಿಸುವ ಕೆಲಸವನ್ನು ನಾವು ಮಾಡಿದೆವು. ವೈಜ್ಞಾನಿಕ ತಳಹದಿಯಲ್ಲಿ ಕಾರ್ಯನಿರ್ವಹಿಸಿದೆವು.
 
* ಬರಗಾಲದಿಂದಾಗಿ ಕೆಲವು ಸಂರಕ್ಷಿತ ಪ್ರದೇಶಗಳಲ್ಲೂ ಈ ವರ್ಷ ನೀರಿನ ಕೊರತೆ ತೀವ್ರವಾಗಿದೆ. ಇದಕ್ಕೆ ಶಾಶ್ವತ ಯೋಜನೆ ರೂಪಿಸಲು ಸಾಧ್ಯವಿಲ್ಲವೇ? 
ಬರ ಪರಿಸ್ಥಿತಿಯನ್ನು ನಿಸರ್ಗವೇ ನಿರ್ವಹಣೆ ಮಾಡುತ್ತದೆ. ನಿಸರ್ಗಕ್ಕೆ ಅದರದ್ದೇ ಆದ ನಿಯಮಗಳಿವೆ. ಬರದ ಸಮಯದಲ್ಲಿ ಕೆಲವು ಪ್ರಾಣಿಗಳು ಸಾಯುವುದು ಸಹಜ. ಅದಕ್ಕೆ ಧೃತಿಗೆಡಬೇಕಾಗಿಲ್ಲ. 
 
ಉದಾಹರಣೆಗೆ, ಆನೆಗಳ ಸಂಖ್ಯೆಯನ್ನು ಸಮತೋಲನ ದಲ್ಲಿಟ್ಟುಕೊಳ್ಳಲು  ನಿಸರ್ಗ ತನ್ನದೇ ಆದ ವ್ಯವಸ್ಥೆಯನ್ನು ಹೊಂದಿರುತ್ತದೆ. ಆನೆಯನ್ನು ದೊಡ್ಡ ಮಾರ್ಜಾಲ ಪ್ರಾಣಿಗಳೂ ತಿನ್ನುವುದಿಲ್ಲ. ಅದರ ನಿಯಂತ್ರಣಕ್ಕೆ ಆಗಾಗ ಆಹಾರ ಹಾಗೂ ನೀರಿನ ಅಭಾವ ಸೃಷ್ಟಿಯಾಗಬೇಕಾಗುತ್ತದೆ. ಬರದ ವೇಳೆ ರೋಗಪೀಡಿತ ಪ್ರಾಣಿಗಳು ಸಾಯುತ್ತವೆ. ಬಲಿಷ್ಠ ಪ್ರಾಣಿಗಳಷ್ಟೇ ಉಳಿಯುತ್ತವೆ.
 
ಇವೆಲ್ಲ ನಿಸರ್ಗದ ನಿಯಮ. ಅದರ ವಿರುದ್ಧ ನಾವು ಕೆಲಸ ಮಾಡಬಾರದು. ನಾವು ಆನೆ, ಹುಲಿಗಳ ಬಗ್ಗೆ ಮಾತ್ರ ಯೋಚಿಸುತ್ತಿದ್ದೇವೆ. ಅವುಗಳಿಗಾಗಿ ಕೆರೆಗಳನ್ನು ಹಾಗೂ ಕೊಳವೆಬಾವಿಗಳನ್ನು ತೋಡುತ್ತೇವೆ. ಉಳಿದ ಸಸ್ಯ ರಾಶಿಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಪ್ರಾಣಿಗಳು ನಮಗಿಂತ 10 ಲಕ್ಷ ವರ್ಷಗಳಷ್ಟು ಮೊದಲು ವಿಕಾಸ ಹೊಂದಿವೆ. ಎಲ್ಲಿ, ಹೇಗೆ ಜೀವನ ನಡೆಸಬೇಕು ಎಂಬುದು ಅವುಗಳಿಗೆ ಗೊತ್ತಿದೆ. 
 
ನಾವು ಅಸಹಜ ರೀತಿಯಲ್ಲಿ ಕಾಡುಪ್ರಾಣಿಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದೇವೆ. ಆದರೆ, ಅರಣ್ಯದ ಪ್ರಮಾಣ ಹೆಚ್ಚಳ ಆಗಿಲ್ಲ. ಅವುಗಳಿಗೆ ಆಹಾರ ಸಿಗುತ್ತಿಲ್ಲ. ಹಾಗಾಗಿ ಕಾಡಿನಿಂದ ಹೊರಕ್ಕೆ ಬರುತ್ತಿವೆ. ಇದರಿಂದಾಗಿ ಮಾನವ– ಕಾಡು ಪ್ರಾಣಿ ಸಂಘರ್ಷ ಹೆಚ್ಚುತ್ತಿದೆ. 
 
* ಜನರ ಒತ್ತಡಕ್ಕೆ ಮಣಿದು ಕಸ್ತೂರಿ ರಂಗನ್‌ ವರದಿಯನ್ನು ರಾಜ್ಯ ಸರ್ಕಾರ ವಿರೋಧಿಸುತ್ತಿದೆ. ಇದರಿಂದ ವನ್ಯಜೀವಿ ಸಂರಕ್ಷಣೆ ಮೇಲಾಗುವ ಪರಿಣಾಮ ಏನು? 
ವರದಿಯ ಬಗ್ಗೆ ಜನರಿಗೆ ತಪ್ಪು ಕಲ್ಪನೆಗಳಿವೆ. ವರದಿ ಜಾರಿಯಾದರೆ ಮನೆ ಕಟ್ಟಲು ಆಗುವುದಿಲ್ಲ, ಚರಂಡಿ ನಿರ್ಮಿಸಲು ಸಾಧ್ಯವಿಲ್ಲ, ಕ್ರಿಮಿನಾಶಕ ಬಳಕೆಗೆ ಕಡಿವಾಣ ಹೇರುತ್ತಾರೆ ಎಂದು ಕೆಲವರು ಗುಲ್ಲು ಎಬ್ಬಿಸುತ್ತಿದ್ದಾರೆ. ಈ ಅಂಶಗಳೆಲ್ಲ ವರದಿಯಲ್ಲಿ ಇಲ್ಲ. ವಾಸ್ತವ ಸಂಗತಿ ತಿಳಿಯದೆ ಜನರು ವಿರೋಧ ಮಾಡುತ್ತಿದ್ದಾರೆ ಅಷ್ಟೆ. ಈ ವರದಿ ಆಂಗ್ಲ ಭಾಷೆಯಲ್ಲಿದೆ. ಇದನ್ನು ಕನ್ನಡಕ್ಕೆ  ತರ್ಜುಮೆ ಮಾಡಿ ಜನರಿಗೆ ಹಂಚಬೇಕಿತ್ತು. ಬಹುತೇಕ ವಿಜ್ಞಾನಿಗಳು ಸೋಲುವುದು ಇಂತಹ ವಿಷಯದಲ್ಲೆ. 
 
* ಪ್ರಶಸ್ತಿ ಪಡೆದ ಬಳಿಕ ನಿಮ್ಮಿಂದ ಜನ ಏನು ಹೊಸತನ್ನು ನಿರೀಕ್ಷಿಸಬಹುದು?
ಅರಣ್ಯ ಸಂರಕ್ಷಣೆಗೆ ನೂರಾರು  ವೀಕ್ಷಕರು ಸದ್ದಿಲ್ಲದೆ ಕೆಲಸ ಮಾಡುತ್ತಿದ್ದಾರೆ. ನನ್ನ ಪ್ರಶಸ್ತಿಯನ್ನು ಅವರಿಗೆ ಅರ್ಪಿಸುತ್ತೇನೆ.  ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಾಗಿದೆ. ಇನ್ನಷ್ಟು ಮೀಸಲು ಅರಣ್ಯಗಳ ಸಂರಕ್ಷಣೆಗೆ ಅವಕಾಶ ಇದೆ. ವನ್ಯಜೀವಿ ಸಂರಕ್ಷಣೆ ಒಂದು ಯೋಜನೆ ಅಲ್ಲ, ಅದೊಂದು ಪ್ರಕ್ರಿಯೆ. ಅದು ರಿಲೇ ಇದ್ದಂತೆ. ಎಂದಿಗೂ ಮುಗಿಯುವುದಿಲ್ಲ. ಉಸಿರು ನಿಲ್ಲುವ ತನಕ ಮುಂದುವರಿಯುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.