ADVERTISEMENT

ಸಂಘರ್ಷಕ್ಕೆ ತಿರುಗಿದ ಬಿಜೆಪಿ ಬೈಕ್ ರ‍್ಯಾಲಿ

400 ವಾಹನ, 1900 ಜನ ವಶಕ್ಕೆ: ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 20:20 IST
Last Updated 5 ಸೆಪ್ಟೆಂಬರ್ 2017, 20:20 IST
ಸಂಘರ್ಷಕ್ಕೆ ತಿರುಗಿದ ಬಿಜೆಪಿ ಬೈಕ್ ರ‍್ಯಾಲಿ
ಸಂಘರ್ಷಕ್ಕೆ ತಿರುಗಿದ ಬಿಜೆಪಿ ಬೈಕ್ ರ‍್ಯಾಲಿ   

ಬೆಂಗಳೂರು: ಸಂಘ– ಪರಿವಾರದ ಕಾರ್ಯಕರ್ತರ ಹತ್ಯೆ ಖಂಡಿಸಿ, ಬಿಜೆಪಿ ಯುವ ಮೋರ್ಚಾ ಮಂಗಳೂರು ಚಲೋ ಅಂಗವಾಗಿ ಏರ್ಪಡಿಸಿರುವ ಬೈಕ್‌ ರ‍್ಯಾಲಿಗೆ ಅನುಮತಿ ನಿರಾಕರಿಸಿದ್ದರಿಂದ ರಾಜ್ಯದ ವಿವಿಧೆಡೆ ಪೊಲೀಸರು ಮತ್ತು ಆ ಪಕ್ಷದ ಕಾರ್ಯಕರ್ತರ ಮಧ್ಯೆ ಜಟಾಪಟಿ ನಡೆದಿದೆ. ಬೆಂಗಳೂರಿನಲ್ಲಿ ರಸ್ತೆ ತಡೆ ಮಾಡಲು ಯತ್ನಿಸಿದವರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆದಿದೆ.

‘ಬೆಂಗಳೂರು ಮತ್ತು ಹುಬ್ಬಳ್ಳಿ ಸೇರಿದಂತೆ ವಿವಿಧೆಡೆ ನಿಷೇಧಾಜ್ಞೆ ಉಲ್ಲಂಘಿಸಿದ ಸುಮಾರು 1,900 ಕಾರ್ಯಕರ್ತರು, 400 ವಾಹನಗಳನ್ನು ಮಂಗಳವಾರ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಬಳಿ ರಸ್ತೆ ತಡೆಗೆ ಯತ್ನಿಸಿದ ಕಾರ್ಯಕರ್ತರಿಗೆ ಪೋಲೀಸರು ಲಾಠಿ ರುಚಿ ತೋರಿಸಿದ್ದಾರೆ.

‘ಸಂಘ–ಪರಿವಾರದ ಕಾರ್ಯಕರ್ತರ ಹತ್ಯೆಗಳನ್ನು ತಡೆಯಲು ಸರ್ಕಾರ ವಿಫಲವಾಗಿದೆ’ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ಮಂಗಳವಾರ ಬೆಂಗಳೂರು ಮತ್ತು ಹುಬ್ಬಳ್ಳಿ–ಧಾರವಾಡದಲ್ಲಿ ಬೈಕ್‌ ರ‍್ಯಾಲಿಗೆ ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ADVERTISEMENT

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರ‍್ಯಾಲಿ ನಡೆಸುವ ಯತ್ನವನ್ನು ಬಿಜೆಪಿ ಘಟಕಗಳು ಮಾಡಿದವು. ಅಗತ್ಯ ಮಾಹಿತಿ ನೀಡದ ಕಾರಣ ಮುಂದೊಡ್ಡಿದ ಆಯಾ ಜಿಲ್ಲಾಡಳಿತ ರ‍್ಯಾಲಿಗೆ ಅನುಮತಿ ನೀಡಿರಲಿಲ್ಲ. ಬೈಕ್ ರ‍್ಯಾಲಿ ನಡೆಸದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

**

ರ‍್ಯಾಲಿಯಲ್ಲಿ ಭಾಗಿಯಾದರೆ ರೌಡಿಶೀಟ್‌ಗೆ

ಮೈಸೂರು: ಬೈಕ್ ರ‍್ಯಾಲಿ ನಿಷೇಧಿಸಲಾಗಿದ್ದು, ಇದರಲ್ಲಿ ಭಾಗವಹಿಸುವವರ ಮೇಲೆ ರೌಡಿಶೀಟ್ ತೆರೆದು, ಬೈಕ್‌ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಇಲ್ಲಿ ಮಂಗಳವಾರ ಎಚ್ಚರಿಕೆ ನೀಡಿದರು.

ಸೆ. 6ರಿಂದ ಎರಡು ದಿನಗಳ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಯುವಕರು ರ‍್ಯಾಲಿಯಲ್ಲಿ ಭಾಗವಹಿಸಬಾರದು ಎಂದು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

**

ಮನೆಯಿಂದ ಹೊರಬರದ ಯಡಿಯೂರಪ್ಪ

ರಾಜ್ಯದ ವಿವಿಧೆಡೆ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಪೊಲೀಸರ ಜತೆಗೆ ಸಂಘರ್ಷಕ್ಕೆ ಮುಂದಾದರೂ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮಾತ್ರ ಮಂಗಳವಾರ ಸಂಜೆಯವರೆಗೆ ಮನೆಯಿಂದ ಹೊರಬರಲಿಲ್ಲ.

ರಾಜ್ಯ ಸರ್ಕಾರ ವಿರುದ್ಧ ಸಂಘರ್ಷಕ್ಕೆ  ಮುಂದಾಗಿ ಎಂಬ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆ ಹಾಗೂ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ ಮಾರ್ಗದರ್ಶನದ ಮೇರೆಗೆ ಯುವ ಮೋರ್ಚಾ ಮಂಗಳೂರು ಚಲೋ ಹಾಗೂ ರ‍್ಯಾಲಿ ಹಮ್ಮಿಕೊಂಡಿದೆ. ರಾಜ್ಯಕ್ಕೆ ಸೋಮವಾರ ಭೇಟಿ ನೀಡಿದ್ದ ಚುನಾವಣಾ ಉಸ್ತುವಾರಿ ಪ್ರಕಾಶ ಜಾವಡೇಕರ್, ಹಿಂದುತ್ವದ ಸಂದೇಶ ಮಂಗಳೂರಿನಿಂದಲೇ ಪಸರಿಸಬೇಕು, ರ‍್ಯಾಲಿ ವಿಫಲವಾಗಬಾರದು ಎಂದು ಎಚ್ಚರಿಕೆ ನೀಡಿದ್ದರು.

‘ಅವರಿಗೆ ಕರೆ ಮಾಡಿದ್ದ ಪೊಲೀಸ್ ಇಲಾಖೆ ಅಧಿಕಾರಿಗಳು ರ‍್ಯಾಲಿ ಭಾಗಿಯಾಗದಂತೆ ಕೋರಿದ್ದರು. ನಿಷೇಧಾಜ್ಞೆ ಇರುವುದರಿಂದ ಕಾನೂನು ಉಲ್ಲಂಘನೆ ಮಾಡಬಾರದು ಕಾರಣಕ್ಕೆ ಅವರು  ಪಾಲ್ಗೊಂಡಿಲ್ಲ’ ಎಂದು ಅವರ ಆಪ್ತರು ತಿಳಿಸಿದ್ದಾರೆ.

**

ಶಾಂತಿ ಕದಡಲು ಷಾ ಸೂಚನೆ: ಸಚಿವ ರೆಡ್ಡಿ ಆರೋಪ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಸೂಚನೆ ಮೇರೆಗೆ ಕಾನೂನು ಸುವ್ಯವಸ್ಥೆ ಹದಗೆಡಿಸಲು ಬಿಜೆಪಿ ಮುಂದಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದರು.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದ್ದರೆ ಚುನಾವಣೆ ಗೆಲ್ಲುವುದು ಕಷ್ಟ. ಹೇಗಾದರೂ ಮಾಡಿ ಅದನ್ನು ಕೆಡಿಸಿ ಎಂದು ಷಾ ಹೇಳಿದ್ದಾರೆ. ಅವರ ಆದೇಶ ಪಾಲಿಸಲು ಯುವ ಮೋರ್ಚಾ ಕಾರ್ಯಕರ್ತರು ಬೈಕ್‌ ರ‍್ಯಾಲಿಗೆ ಮುಂದಾಗಿದ್ದಾರೆ’ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮಂಗಳವಾರ ತಿಳಿಸಿದರು.

‘ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡಲು ನಮ್ಮ ಅಭ್ಯಂತರ ಇಲ್ಲ. ಹದ್ದುಮೀರಿ ವರ್ತಿಸಿ ಶಾಂತಿ ಕದಡುವ ಕೆಲಸ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಕಾನೂನಿಗೆ ಗೌರವ ಕೊಡಲು ಕಲಿಯಬೇಕು. ಐದು ಕಡೆಗಳಿಂದ ಬೈಕ್‌ಗಳಲ್ಲಿ ರ‍್ಯಾಲಿ ಹೊರಟರೆ ಮಂಗಳೂರಿನಲ್ಲಿ ಎಷ್ಟು ಜನ ಸೇರುತ್ತಾರೆ ಎಂಬ ಮಾಹಿತಿಯನ್ನು ಪೋಲೀಸರು ಕೇಳಿದ್ದರು. ಬಿಜೆಪಿಯವರು ಅದನ್ನು ಕೊಟ್ಟಿಲ್ಲ. ಆದ್ದರಿಂದ ಬೈಕ್‌ ರ‍್ಯಾಲಿಗೆ ಅನುಮತಿ ನೀಡಲು ಸಾಧ್ಯವಿಲ್ಲ’ ಎಂದರು.

ಇದಕ್ಕೂ ಮುನ್ನ ಪೊಲೀಸ್‌ ಮಹಾನಿರ್ದೇಶಕ ಆರ್.ಕೆ. ದತ್ತ ಅವರ ಜತೆ ಸಮಾಲೋಚನೆ ನಡೆಸಿದ ಸಚಿವ ರೆಡ್ಡಿ, ಬಿಜೆಪಿ ಹಮ್ಮಿಕೊಂಡಿರುವ ರ‍್ಯಾಲಿ ಹಾಗೂ ಇಲಾಖೆ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ಪಡೆದರು.

**

ದೆಹಲಿ ಚಲೋ ಮಾಡಲಿ: ಸಿದ್ದರಾಮಯ್ಯ ಸವಾಲು

‘ಮಂಗಳೂರು ಚಲೋ ಬದಲಿಗೆ ದೆಹಲಿ ಚಲೋ ಮಾಡಿ ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿ’ ಎಂದು ಬಿಜೆಪಿ ಮುಖಂಡರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

‘ಸಹಕಾರ ಬ್ಯಾಂಕ್ ಗಳಲ್ಲಿ ರೈತರು ಪಡೆದಿರುವ ₹ 50,000 ವರೆಗಿನ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಿದೆ. ರಾಷ್ಟ್ರೀಕೃತ ಮತ್ತು ಗ್ರಾಮೀಣ ಬ್ಯಾಂಕ್ ಗಳಲ್ಲಿ ಇರುವ ₹ 42,000 ಕೋಟಿ ಸಾಲ ಮನ್ನಾ ಮಾಡುವಂತೆ ಪ್ರಧಾನಿ ಮೇಲೆ ಒತ್ತಡ ಹೇರಲು ಹೋರಾಟ ಮಾಡಲಿ, ನಾವೂ ಕೈ ಜೊಡಿಸುತ್ತೇವೆ’ ಎಂದು ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಪಾದಯಾತ್ರೆ ಅಥವಾ ಬಹಿರಂಗ ಸಭೆ ಮಾಡಿದರೆ ನಮ್ಮ ವಿರೋಧ ಇಲ್ಲ. ಆದರೆ, ಬೈಕ್ ರ‍್ಯಾಲಿ ಒಪ್ಪುವುದಿಲ್ಲ. ಸಾವಿರಾರು ಬೈಕ್‍ ಗಳು ಘೋಷಣೆಗಳೊಂದಿಗೆ ರಸ್ತೆಗೆ ಇಳಿದರೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಅದು ಬೇಡ ಎಂಬುದಷ್ಟೇ ನಮ್ಮ ನಿಲುವು’ ಎಂದರು.

‘ಮಂಗಳೂರು ಚಲೋ ಕಾರ್ಯಕ್ರಮಕ್ಕಾಗಿ ಬಿಜೆಪಿ ಮುದ್ರಿಸಿರುವ ಪುಸ್ತಕ ನೋಡಿದ್ದೇನೆ. ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ಹಾಳು ಮಾಡುವ ಭಾಷಣ ಮತ್ತು ಬರಹಗಳಿವೆ. ಸಮಾಜದಲ್ಲಿ ಸಾಮರಸ್ಯ ಕಾಪಾಡುವ ಕೆಲಸ ಮಾಡಬೇಕೇ ಹೊರತು, ಶಾಂತಿ ಭಂಗ ತರುವ ಕೆಲಸ ಮಾಡಬಾರದು’ ಎಂದು ಹೇಳಿದರು.

‘ಬೈಕ್ ರ‍್ಯಾಲಿಗೆ ಯಾರಪ್ಪನ ಅಪ್ಪಣೆಯೂ ಬೇಕಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ. ನಾನೂ ಅವರಂತೆ ಏಕ ವಚನ ಪ್ರಯೋಗಿಸುವುದಿಲ್ಲ. ವೀರಾವೇಷದಿಂದ ಮತನಾಡಿದರೆ ಕಾನೂನು ರೀತಿ ಉತ್ತರ ನೀಡಬೇಕಾಗುತ್ತದೆ’ ಎಂದೂ ಎಚ್ಚರಿಸಿದರು.

**

ಸರ್ಕಾರ ಪೊಲೀಸರನ್ನು ಛೂಬಿಟ್ಟು ಮಂಗಳೂರು ಚಲೋಗೆ ಅಡ್ಡಿ ಪಡಿಸಲು ಮುಂದಾಗಿದೆ. ಎಂತಹದೇ ಕ್ರಮ ಕೈಗೊಂಡರೂ ಚಲೋ ಮತ್ತು ರ‍್ಯಾಲಿ ನಡೆದೇ ನಡೆಯುತ್ತದೆ.
–ಪ್ರತಾಪ ಸಿಂಹ,
ಬಿಜೆಪಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷ

**

ಇದೊಂದು  ಹೇಡಿ ಸರ್ಕಾರ. ಈ ಸರ್ಕಾರದಿಂದ ನಾವು ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಸಂಘ ಪರಿವಾರದ ಕಾರ್ಯಕರ್ತರ ಹತ್ಯೆಯನ್ನು ಸಿಬಿಐ ತನಿಖೆಗೆ ಒಪ್ಪಿಸಿ, ರಮಾನಾಥ ರೈ ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲದು
–ಆರ್‌. ಅಶೋಕ್,
ಬಿಜೆಪಿ ಶಾಸಕ

**

ಹಿಂಸಾಚಾರದಲ್ಲಿ ಭಾಗಿಯಾಗಿರುವವರಿಗೆ ಬೆಂಬಲ ನೀಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಧಾನಸೌಧವನ್ನು ಅಪವಿತ್ರ ಮಾಡಿದೆ.
–ಶೋಭಾ ಕರಂದ್ಲಾಜೆ,
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.