ADVERTISEMENT

ಸಂಪುಟಕ್ಕೆ ಮರಳಿದ ಜಾರ್ಜ್‌

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 19:30 IST
Last Updated 26 ಸೆಪ್ಟೆಂಬರ್ 2016, 19:30 IST
ಸಂಪುಟಕ್ಕೆ ಮರಳಿದ ಜಾರ್ಜ್‌
ಸಂಪುಟಕ್ಕೆ ಮರಳಿದ ಜಾರ್ಜ್‌   

ಬೆಂಗಳೂರು: ‘ಪಕ್ಷದ ವರಿಷ್ಠರು ವಿಶ್ವಾಸವಿಟ್ಟು ಮತ್ತೆ ಸಚಿವ ಸ್ಥಾನ ನೀಡಿದ್ದು, ಬೆಂಗಳೂರಿನ ಸಮಗ್ರ ಅಭಿವೃದ್ಧಿ ಸೇರಿದಂತೆ ರಾಜ್ಯದ ಜನರ ಸೇವೆಗೆ ಹಗಲಿರುಳು ಶ್ರಮಿಸುತ್ತೇನೆ’ ಎಂದು ನೂತನ ಸಚಿವ ಕೆ.ಜೆ. ಜಾರ್ಜ್‌ ಹೇಳಿದರು.

ಸಚಿವ ಸಂಪುಟಕ್ಕೆ ಸೋಮವಾರ ಮರು ಸೇರ್ಪಡೆಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಯಾವುದೇ ತಪ್ಪು ಮಾಡದೇ ಇದ್ದರೂ ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ನನ್ನನ್ನು ಸಿಕ್ಕಿಸುವ ಯತ್ನ ಮಾಡಲಾಯಿತು. ನಿರ್ದೋಷಿ ಎಂದು ಸಾಬೀತಾದ ಬಳಿಕ ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಮೇಲೆ ವಿಶ್ವಾಸವಿಟ್ಟು ಸಚಿವ ಸ್ಥಾನ ನೀಡಿದ್ದಾರೆ’ ಎಂದರು.

ಮರಳಿ ಸಂಪುಟಕ್ಕೆ ಸೇರ್ಪಡೆಯಾಗಿರುವುದಕ್ಕೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಅವರಿಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆಯಿಲ್ಲ ಎಂದು ಜಾರ್ಜ್‌ ದೂರಿದರು.

ಪ್ರಮಾಣವಚನ: ಇದಕ್ಕೂ ಮುನ್ನ ರಾಜಭವನದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಜಾರ್ಜ್‌ ಅವರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರತಿಜ್ಞಾವಿಧಿ ಬೋಧಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್‌ ಉಪಸ್ಥಿತರಿದ್ದರು.

ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆಪಾದನೆಗೆ ಗುರಿಯಾಗಿ ಜುಲೈ 18ರಂದು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಜಾರ್ಜ್‌ ಅವರು ಎರಡೆ ತಿಂಗಳಲ್ಲಿ ಮತ್ತೆ ಸಂಪುಟಕ್ಕೆ ಮರಳಿದ್ದಾರೆ.

ಮಾಧ್ಯಮಗಳಿಗೆ ನಿರ್ಬಂಧ: ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಹುತೇಕ ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ರಾಜಭವನದ ಹೊರಗಡೆ ಹಾಕಲಾಗಿದ್ದ ಬೃಹತ್‌ ಪರದೆಯಲ್ಲಿ ಸಮಾರಂಭ ವೀಕ್ಷಿಸುವ ಅವಕಾಶವನ್ನಷ್ಟೇ ನೀಡಲಾಗಿತ್ತು.

ಜಾರ್ಜ್ ಪ್ರತಿನಿಧಿಸುವ ಸರ್ವಜ್ಞನಗರ ವಿಧಾನಸಭೆ ಕ್ಷೇತ್ರದ ಅವರ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಸಮಾರಂಭ ವೀಕ್ಷಿಸಲು ಬಂದಿದ್ದರು. ಅವರಿಗೂ ಪ್ರವೇಶ ನಿರಾಕರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.