ADVERTISEMENT

ಸಂಪುಟ ಭರ್ತಿಗೆ ಮುಖ್ಯಮಂತ್ರಿ ಒಲವು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 19:30 IST
Last Updated 21 ಏಪ್ರಿಲ್ 2017, 19:30 IST
ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಕಳಲೆ ಕೇಶವಮೂರ್ತಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದರು. ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ, ಶಾಸಕಿ ಎಂ.ಸಿ. ಮೋಹನಕುಮಾರಿ ಇದ್ದರು  ಪ್ರಜಾವಾಣಿ ಚಿತ್ರ
ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಕಳಲೆ ಕೇಶವಮೂರ್ತಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದರು. ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ, ಶಾಸಕಿ ಎಂ.ಸಿ. ಮೋಹನಕುಮಾರಿ ಇದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಂಪುಟದಲ್ಲಿ ಖಾಲಿ ಇರುವ ಎರಡು ಸ್ಥಾನಗಳನ್ನು ಭರ್ತಿ ಮಾಡುವ ಕುರಿತು ಹೈಕಮಾಂಡ್‌ ಜತೆ ಇದೇ  ಭಾನುವಾರ (ಏ.23) ಚರ್ಚೆ ನಡೆಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದಲ್ಲಿ ಶುಕ್ರವಾರ ನಡೆದ ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು,  ‘ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲು ಅಂದು ದೆಹಲಿಗೆ ತೆರಳುತ್ತಿದ್ದೇನೆ. ಖಾಲಿ ಇರುವ ಎರಡು ಸ್ಥಾನಗಳನ್ನು ಭರ್ತಿ ಮಾಡುವ ಅಪೇಕ್ಷೆ ನನ್ನದು’ ಎಂದು ಹೇಳಿದರು.

‘ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆ ಹೈಕಮಾಂಡ್‌ ವಿವೇಚನೆಗೆ ಬಿಟ್ಟಿದ್ದಾಗಿದೆ’ ಎಂದರು.

ADVERTISEMENT

‘ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಕ್ಕೆ   ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಲು ಉದ್ದೇಶಿಸಿದ್ದೆ.  ಕಾರಣಾಂತರಗಳಿಂದ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ’ ಎಂದರು.

ಜಾತ್ಯತೀತ ಶಕ್ತಿಗಳು ಒಗ್ಗೂಡಬೇಕಿದೆ: ‘ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಜಾತ್ಯತೀತ ಶಕ್ತಿಗಳು ಒಗ್ಗೂಡಬೇಕು’ ಎಂದು ಪ್ರತಿಪಾದಿಸಿದರು.

ರಾಷ್ಟ್ರಪತಿ ಚುನಾವಣೆ ಸಂಬಂಧ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌,  ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ‘ಕೋಮುವಾದಿ ಶಕ್ತಿಗಳನ್ನು ಸೋಲಿಸಲು ಎಲ್ಲರೂ ಒಂದಾಗುವ ಕಾಲ ಇದಾಗಿದೆ’ ಎಂದರು.

ಕೃಷ್ಣಪ್ಪ ಹೊಣೆಯಲ್ಲ: ‘ಯಾರೋ ಮಾಡಿದ ತಪ್ಪಿಗೆ ವಸತಿ ಸಚಿವ ಎಂ. ಕೃಷ್ಣಪ್ಪ ಅವರನ್ನು ಹೊಣೆ ಮಾಡುವುದು ಸರಿಯಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.
ವಾಜರಹಳ್ಳಿ, ರಘುವನಹಳ್ಳಿಯ 189 ಎಕರೆ ಭೂಸ್ವಾಧೀನ ಪ್ರಕರಣದಲ್ಲಿ  ಸಚಿವ ಕೃಷ್ಣಪ್ಪ ಅಕ್ರಮ ಎಸಗಿದ್ದಾರೆ ಎಂಬ ಆರೋಪ ಸಂಬಂಧ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ಮಧ್ಯವರ್ತಿಗಳು ತಪ್ಪು ಮಾಡಿರಬಹುದು. ಈ ಪ್ರಕರಣದಲ್ಲಿ ಕೃಷ್ಣಪ್ಪ ಅವರದ್ದೇನೂ ತಪ್ಪಿಲ್ಲ’ ಎಂದು ಸಮರ್ಥಿಸಿಕೊಂಡರು.

ದೇವರ ಹೆಸರಿನಲ್ಲಿ ಪ್ರಮಾಣ
ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ಗೆಲುವು ಸಾಧಿಸಿದ  ಎಂ.ಸಿ. ಮೋಹನಕುಮಾರಿ  ಅವರು  ಮಲೆ ಮಹದೇಶ್ವರ ಹಾಗೂ ಕಳಲೆ ಕೇಶವಮೂರ್ತಿ ನಂಜನಗೂಡಿನ ನಂಜುಂಡೇಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ  ಇಬ್ಬರಿಗೂ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಜರಿದ್ದರು.

ಸಚಿವ ಸ್ಥಾನ ನೀಡಿದರೆ ಅದನ್ನು ನಿಭಾಯಿಸುತ್ತೇನೆ. ಆದರೆ, ಸಚಿವ ಸ್ಥಾನದ ಬಗ್ಗೆ ಯಾರೊಂದಿಗೂ ಮಾತನಾಡಿಲ್ಲ
ಎಂ.ಸಿ. ಮೋಹನಕುಮಾರಿ,ಶಾಸಕಿ

ಕ್ಷೇತ್ರದ ಅಭಿವೃದ್ಧಿಗೆ ಗಮನ ಹರಿಸುತ್ತೇನೆ. ಸಚಿವ ಸ್ಥಾನ ಕೊಡುವುದು ಬಿಡುವುದು ಮುಖ್ಯಮಂತ್ರಿಗೆ ಬಿಟ್ಟ ವಿಷಯ
ಕಳಲೆ ಕೇಶವಮೂರ್ತಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.