ADVERTISEMENT

ಸಂವಿಧಾನ–ಮನುಸ್ಮೃತಿ ನಡುವಿನ ಸಂಘರ್ಷವೇ ಸರ್ಜಿಕಲ್‌ ದಾಳಿ: ಚಂಪಾ

ಗಣೇಶ ಚಂದನಶಿವ
Published 4 ಡಿಸೆಂಬರ್ 2016, 19:32 IST
Last Updated 4 ಡಿಸೆಂಬರ್ 2016, 19:32 IST
82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾಹಿತಿ ಚಂದ್ರಶೇಖರ್‌ ಪಾಟೀಲ್‌ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ ಯಡಿಯೂರಪ್ಪ ಮಾತುಕತೆ ನಡೆಸಿದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ ಇದ್ದಾರೆ.  ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌
82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾಹಿತಿ ಚಂದ್ರಶೇಖರ್‌ ಪಾಟೀಲ್‌ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ ಯಡಿಯೂರಪ್ಪ ಮಾತುಕತೆ ನಡೆಸಿದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ ಇದ್ದಾರೆ. ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌   

ಶಾಂತರಸ ಪ್ರಧಾನ ವೇದಿಕೆ (ರಾಯಚೂರು): ‘ಸಾಮಾಜಿಕ ಸರ್ಜಿಕಲ್‌ ದಾಳಿ ಎಂಬುದು ಸಂವಿಧಾನ ಮತ್ತು ಮನುಸ್ಮೃತಿಯ ನಡುವೆ ನಡೆಯುತ್ತಿರುವ ಸಂಘರ್ಷ’ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ವ್ಯಾಖ್ಯಾನಿಸಿದರು.

82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೊನೆಯ ದಿನವಾದ ಭಾನುವಾರ ಸಮಾರೋಪ ಭಾಷಣ ಮಾಡಿದ ಅವರು ‘ರಾಷ್ಟ್ರಪಿತನನ್ನು ಕೊಂದ ಜನ ರಾಷ್ಟ್ರ ಪ್ರೇಮದ ಹೆಸರಿನಲ್ಲಿ ನಮ್ಮ ಮೇಲೆ ನಡೆಸುತ್ತಿರುವ ಈ ದಾಳಿಯನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಹೇಳಿದರು.

‘500 ವರ್ಷಗಳಿಂದಲೂ ಇರುವ ಈ ಗೋಪ್ಯ ಕಾರ್ಯಸೂಚಿ ಈಗ ಬಹಿರಂಗ ಕಾರ್ಯಸೂಚಿಯಾಗಿದೆ’ ಎಂದು ದೂರಿದರು. ‘ಜಗತ್ತಿನ ಮೇಲೆ ಪ್ರಭುತ್ವ ಸಾಧಿಸಬೇಕು ಎಂಬ ಮನಃಸ್ಥಿತಿಯ ಸರ್ವಾಧಿಕಾರಿ ಡೊನಾಲ್ಡ್‌ ಟ್ರಂಪ್‌  ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 

ನಮ್ಮ ಪ್ರಧಾನಿ ನರೇಂದ್ರ ಮೋದಿ ಸಂಘ ಪರಿವಾರದ ಹಿಡಿತದಿಂದ ಪಾರಾಗಿ ಬರಲು ಸಾಧ್ಯವಾಗಿಲ್ಲ. ಅವರು ಒಕ್ಕೂಟ ವ್ಯವಸ್ಥೆಯಿಂದ ಕೂಡಿರುವ ಭಾರತದ ಪ್ರಧಾನಿಯಾಗಿ ಕೆಲಸ ಮಾಡುತ್ತಿಲ್ಲ. ಒಂದು ರಾಜ್ಯದ ಮುಖ್ಯಮಂತ್ರಿಯಂತೆ ವರ್ತಿಸುತ್ತಿದ್ದಾರೆ. ಟ್ರಂಪ್‌, ಮೋದಿ ಇಬ್ಬರೂ ಜನರಿಂದ ಆಯ್ಕೆಯಾಗಿದ್ದಾರೆ ಎಂಬುದು ನಿಜ. ಜನರ ಆಯ್ಕೆ ಪ್ರಜ್ಞಾಪೂರ್ವಕವಾಗಿರಬೇಕು’  ಎಂದರು.

‘ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್– ಹೀಗೆ ಬಹುಸಂಸ್ಕೃತಿಯಿಂದ ಕೂಡಿದ ಈ ದೇಶದಲ್ಲಿ ಧರ್ಮ, ಜಾತಿಯ ಹೆಸರಿನಲ್ಲಿ ದಾಳಿ ಮಾಡುವುದು ಸಲ್ಲದು. ಇದು ಹಿಂದೂ ರಾಷ್ಟ್ರ ಆಗಬೇಕು, ಎಲ್ಲರೂ ಭಾರತ ಮಾತಾಕಿ ಜೈ ಎಂದು ಹೇಳಬೇಕು ಎನ್ನುವುದು ತಪ್ಪು’ ಎಂದು ಪ್ರತಿಪಾದಿಸಿದರು.

‘ನಾವು ಬಂಡಾಯ ಸಾಹಿತಿಗಳು ಎಡಪಂಥೀಯರು. 1979ರಲ್ಲಿ ಧರ್ಮಸ್ಥಳದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಾಗ ಧಾರವಾಡದಲ್ಲಿ ಅದಕ್ಕೆ ಸಮಾನಾಂತವಾಗಿ ಬಂಡಾಯ ಸಾಹಿತ್ಯ ಸಮ್ಮೇಳನ ನಡಸಿದ್ದೆವು. ರಾಯಚೂರಿನ ಈ ಸಮ್ಮೇಳನದ ಗೋಷ್ಠಿಯಲ್ಲಿ ಪಾಲ್ಗೊಂಡವರಲ್ಲಿ ಶೇ 90ರಷ್ಟು ಜನ ಬಂಡಾಯ, ದಲಿತ ಸಾಹಿತಿಗಳಾಗಿದ್ದರು.

ಹೀಗಾಗಿ ಇದು ಕಸಾಪ ನೇತೃತ್ವದ ಅಖಿಲ ಭಾರತ ಮಟ್ಟದ ಬಂಡಾಯ ಸಾಹಿತ್ಯ ಸಮ್ಮೇಳನ ಅನಿಸುತ್ತಿದೆ’ ಎಂದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ನಾವೆಲ್ಲ ಒಟ್ಟಾಗಿ ಜನರು ಬದುಕುವ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿಸಿಕೊಳ್ಳಬೇಕು. ಆ ದೃಷ್ಟಿಕೋನ ಸಾಹಿತಿಗಳಲ್ಲಿ ಇರಬೇಕು’ ಎಂದರು.

‘ಕುರಿಗಳನ್ನು ತಿನ್ನುವುದು ತೋಳಗಳ ಸ್ವಾತಂತ್ರ್ಯ, ಬದುಕುವುದು ಕುರಿಗಳ ಸ್ವಾತಂತ್ರ್ಯ. ಈ ಎರಡರಲ್ಲಿ ನಮ್ಮ ಆಯ್ಕೆ ಕುರಿಗಳು ಬದುಕುವ ಸ್ವಾತಂತ್ರ್ಯವಾಗ ಬೇಕು’ ಎಂದು ಸೂಚ್ಯವಾಗಿ ಹೇಳಿದರು.

ಆಕ್ಷೇಪ: ಚಂಪಾ ಅವರ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಯಚೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ತಿಪ್ಪರಾಜು ಹವಾಲ್ದಾರ, ‘ಸರ್ಜಿಕಲ್‌ ದಾಳಿ ಎಂಬುದು ನಮ್ಮ ಸೈನಿಕರ ಕೊಲೆಗೆ ಹೊಂಚು ಹಾಕಿದವರನ್ನು ಕೊಲ್ಲಲು ನಡೆಸಿದ ದಾಳಿ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಡಿ’ ಎಂದರು.

ರಾಯಚೂರಿನಲ್ಲಿ ನೂತನ ವಿವಿ
ರಾಯಚೂರು ನಗರದಲ್ಲಿ ನೂತನ ವಿಶ್ವವಿದ್ಯಾಲಯ ಸ್ಥಾಪಿಸಿ, ಅದು ಮುಂದಿನ ಶೈಕ್ಷಣಿಕ ವರ್ಷ ದಿಂದಲೇ ಕಾರ್ಯಾರಂಭ ಮಾಡು ವಂತೆ ಕ್ರಮ ಕೈಗೊಳ್ಳು ವುದಾಗಿ  ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಪ್ರಕಟಿಸಿದರು.

ಸಮ್ಮೇಳನದಲ್ಲಿ ಈ ಕುರಿತು ನಿರ್ಣಯ ಅಂಗೀಕರಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಗುಲಬರ್ಗಾ ವಿಶ್ವವಿದ್ಯಾಲಯದ ಸ್ಥಳೀಯ ಸ್ನಾತಕೋತ್ತರ ಕೇಂದ್ರದಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪಿಸಲು ಬೇಕಿರುವ ಎಲ್ಲ ಮೂಲಸೌಲಭ್ಯಗಳು ಇವೆ. ನಾವೆಲ್ಲ ಜನಪ್ರತಿನಿಧಿಗಳು ಮುಖ್ಯಮಂತ್ರಿ ಮನವೊಲಿಸಿ, ಇಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪಿಸುತ್ತೇವೆ ಎಂದರು.

ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಕೇಂದ್ರ ಸರ್ಕಾರದಿಂದ ₹500 ಕೋಟಿ ಅನುದಾನ ಕೊಡಿಸಬೇಕು. ಐಐಐಟಿಯನ್ನು ರಾಯಚೂರಿನಲ್ಲಿ ಸ್ಥಾಪಿಸಲು ಉಚಿತ ಜಮೀನು ನೀಡಲು ರಾಜ್ಯಸರ್ಕಾರ ಸಿದ್ಧವಿದ್ದು ಇದು ಹಾಗೂ ಧಾರವಾಡದ ಐಐಟಿ ಪ್ರವೇಶದಲ್ಲಿ  ಕರ್ನಾಟಕದ ಮಕ್ಕಳಿಗೆ ಶೇ 25ರಷ್ಟು ಮೀಸಲಾತಿ ಕಲ್ಪಿಸುವ ವಿಷಯದಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ವೇದಿಕೆಯಲ್ಲಿದ್ದ ಸಂಸದ ಬಿ.ಎಸ್‌. ಯಡಿಯೂರಪ್ಪ ಅವರನ್ನು ಕೋರಿದರು.

‘ಬೆಂಗಳೂರಲ್ಲಿ ಭುವನೇಶ್ವರಿ ಪುತ್ಥಳಿ ಸ್ಥಾಪಿಸಿ’
‘ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿ ಬೆಂಗಳೂರಿನಲ್ಲಿ ಬೃಹತ್‌ ಗಾತ್ರದ ಭುವನೇಶ್ವರಿ ಪುತ್ಥಳಿ ಸ್ಥಾಪಿಸಲು ನಾನು ಮುಖ್ಯಮಂತ್ರಿ ಆಗಿದ್ದಾಗ ಘೋಷಿಸಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪುತ್ಥಳಿ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಮಗೆ ಒಳ್ಳೆಯ ಕಾಲ ಬಂದಾಗ ನಾವೇ ಪುತ್ಥಳಿ ಸ್ಥಾಪಿಸುತ್ತೇವೆ’ ಎಂದು ಸಂಸದ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ಇಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಅವರು ಮಾತನಾಡಿದರು.

ಏಟು– ಎದಿರೇಟು
‘ಕಸಾಪ ಪಟ್ಟಭದ್ರರ ಭದ್ರಕೋಟೆ ಆಗದಿರಲಿ’
ಸಾಹಿತ್ಯ ಸಮ್ಮೇಳನ ರಾಜಕೀಯ ಸಮ್ಮೇಳನ ಆಗಬಾರದು. ಕಸಾಪ ವಿದ್ಯಮಾನದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು.  ಕಸಾಪ ಪಟ್ಟಭದ್ರರ ಕೋಟೆಯೂ ಆಗಬಾರದು.ಈ ಸಮ್ಮೇಳನಕ್ಕೆ ರಾಜ್ಯ ಸರ್ಕಾರ ₹4 ಕೋಟಿ ಅನುದಾನ ನೀಡಿದೆ ನಿಜ. ಅದು ನಮ್ಮ ದುಡ್ಡು.  ಹೋರಾಟ ಹತ್ತಿಕ್ಕುವುದು ಪ್ರಭುತ್ವದ ಲಕ್ಷಣವಾಗಿದ್ದರಿಂದ ಇಂತಹ ವಿಷಯದಲ್ಲಿ ಸಾಹಿತಿಗಳು ಎಚ್ಚರ ವಹಿಸಬೇಕು. ಈ ಸಮ್ಮೇಳನದಲ್ಲಿ ಹಿರಿಯ ಸಾಹಿತಿಗಳು ಪಾಲ್ಗೊಂಡಿಲ್ಲ ಎಂಬ ಆಕ್ಷೇಪವೂ ಕೆಲವರಿಂದ ವ್ಯಕ್ತವಾಯಿತು. ಮುಂದಿನ ಸಮ್ಮೇಳನಕ್ಕೆ ಎಲ್ಲ ಹಿರಿಯ ಸಾಹಿತಿಗಳನ್ನೂ ಆಹ್ವಾನಿಸಬೇಕು.
-ಪ್ರೊ.ಚಂದ್ರಶೇಖರ ಪಾಟೀಲ, ಹಿರಿಯ ಸಾಹಿತಿ

ಯಾವ ರಾಜಕಾರಣಿಯೂ ಒತ್ತಡ ಹೇರಿಲ್ಲ
ಈ ಸಾಹಿತ್ಯ ಸಮ್ಮೇಳನಕ್ಕೆ ಇವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು. ಗೋಷ್ಠಿಗಳಿಗೆ ಇಂಥವರನ್ನೇ ಕರೆಯಬೇಕು ಎಂದು ಯಾವ ರಾಜಕಾರಣಿಯೂ ನನಗೆ ಹೇಳಿಲ್ಲ. ರಾಜಕಾರಣಿಗಳೂ ಕನ್ನಡಿಗರು. ಅವರೇನು ಬ್ರಿಟಿಷರಲ್ಲ. ಸಮ್ಮೇಳನಕ್ಕೆ ಎಲ್ಲರೂ ಬೇಕು. ರಾಜಕೀಯ ಒತ್ತಡಕ್ಕೆ ನಾನು ಮಣಿದಿಲ್ಲ. ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆರೋಗ್ಯಕರವಾದ ವಾತಾವರಣ ಇದೆ. ಸಾಮಾಜಿಕ, ಪ್ರತಿಭಾ ಮತ್ತು ಪ್ರಾದೇಶಿಕ ನ್ಯಾಯ ಕಾಪಾಡಿದ್ದೇವೆ.
-ಮನು ಬಳಿಗಾರ್‌,  ಕಸಾಪ ಅಧ್ಯಕ್ಷ

 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.