ADVERTISEMENT

ಸಚಿವರ ಕಾರ್ಯವೈಖರಿ ವರದಿ ಕೇಳಿದ ಸಿ.ಎಂ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 19:30 IST
Last Updated 30 ಅಕ್ಟೋಬರ್ 2014, 19:30 IST

ಬೆಂಗಳೂರು: ಸಂಪುಟದ ಎಲ್ಲ ಸಚಿವರ ಕಾರ್ಯ­ವೈಖರಿ ಕುರಿತು ವಿಸ್ತೃತವಾದ ವರದಿಯೊಂದನ್ನು ಸಿದ್ಧ­ಪಡಿಸಿ ಕಾಂಗ್ರೆಸ್‌ ಹೈಕಮಾಂಡ್‌ ಮುಂದಿಡಲು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ. ಇದ­ಕ್ಕಾಗಿ ಸಚಿವರ ಜಿಲ್ಲಾ ಪ್ರವಾಸ ಮತ್ತು ಸಭೆಗಳ ವಿವರ ಕೇಳಿದ್ದಾರೆ.

ಕೆಲವು ಸಚಿವರ ಕಾರ್ಯವೈಖರಿ ಕುರಿತು ಆಡ­ಳಿತ ಪಕ್ಷದ ಶಾಸಕರೇ ಪದೇ ಪದೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಕೂಡ ಮುಖ್ಯ­ಮಂತ್ರಿ­ಯವರನ್ನು ಭೇಟಿ ಮಾಡಿರುವ ಕೆಲವು ಶಾಸಕರು ಸಚಿವರ ಕಾರ್ಯವೈಖರಿ ವಿರುದ್ಧ ಅಸ­ಮಾ­ಧಾನ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದ ಸಚಿ­ವರ ಜಿಲ್ಲಾ ಭೇಟಿ ಮತ್ತು ಸಭೆಗಳ ಕುರಿತು ವರದಿ ಸಿದ್ಧಪಡಿಸುವ ಕೆಲಸ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಚಿವರು ವಿಧಾನಸೌಧದಲ್ಲಿ ಕಾರ್ಯ­ನಿರ್ವ­ಹಿ­­ಸಿದ ದಿನಗಳು, ಅವರ ವ್ಯಾಪ್ತಿಯಲ್ಲಿರುವ ಇಲಾ­ಖೆ­ಗ­ಳಲ್ಲಿ ಕಡತ ವಿಲೇವಾರಿ ಪ್ರಮಾಣ, ಜಿಲ್ಲಾ ಉಸ್ತು­ವಾರಿ ಸಚಿವರ ಕಾರ್ಯಭಾರದ ನಿರ್ವಹಣೆ, ­ಜಿಲ್ಲೆ­­ಗಳ ಭೇಟಿ, ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆ­ಸಿರುವ ಕುರಿತು ಮಾಹಿತಿ ಕಲೆ ಹಾಕ­ಲಾಗುತ್ತಿದೆ.

ಮುಖ್ಯಮಂತ್ರಿಯವರ ಸಚಿವಾಲಯವು ವಿವಿಧ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮತ್ತು ಜಿಲ್ಲಾಧಿಕಾರಿಗಳ ಮೂಲಕ ಮಾಹಿತಿ ಸಂಗ್ರಹಿಸುತ್ತಿದೆ. ಒಂದೂವರೆ ವರ್ಷದ ಅವಧಿಯಲ್ಲಿ ಸಚಿವರು ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿರುವ ಕುರಿತು ಸಮಗ್ರ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗೊತ್ತಾಗಿದೆ.

ಹೈಕಮಾಂಡ್‌ಗೆ ವರದಿ: ಸಚಿವರ ಕಾರ್ಯ­ವೈಖ­ರಿಗೆ ಸಂಬಂಧಿಸಿದಂತೆ ಸಿದ್ಧಪಡಿಸುವ ವರದಿಯನ್ನು ಖುದ್ದಾಗಿ ಕಾಂಗ್ರೆಸ್‌ ವರಿಷ್ಠರಿಗೆ ಸಲ್ಲಿಸಲು ಸಿದ್ದ­ರಾಮಯ್ಯ ತೀರ್ಮಾನಿಸಿದ್ದಾರೆ. ಮುಂದಿನ ವಾರ ದೆಹ­ಲಿಗೆ ತೆರಳುವ ಸಾಧ್ಯತೆ ಇದ್ದು, ಅಷ್ಟರೊಳಗೆ ವರದಿ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಚಿವರ ಮೌಲ್ಯಮಾಪನ ನಡೆಸುವುದಾಗಿ ಕೆಪಿ­ಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಅವರು ಹಲವು ಬಾರಿ ಹೇಳಿಕೆ ನೀಡಿದ್ದರು. ಹೈಕಮಾಂಡ್‌ ಕೂಡ ಅದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿತ್ತು. ಮುಂದಿನ ದಿನ­­ಗಳಲ್ಲಿ ಪಕ್ಷದ ಕಡೆಯಿಂದ ಸಚಿವರ ಮೌಲ್ಯ­ಮಾಪನ ನಡೆ­ಸುವುದನ್ನು ತಪ್ಪಿಸುವ ಉದ್ದೇಶದಿಂದ ಸಿದ್ದ­ರಾಮಯ್ಯ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಪುನರ್‌ರಚನೆಗೆ ಅಸ್ತ್ರ: ಸಂಪುಟ ಪುನರ್‌ರಚಿಸ­ಬೇ­ಕೆಂಬ ಒತ್ತಾಯವೂ ಪಕ್ಷದೊಳಗೆ ಇದೆ. ಸರ್ಕಾರ ಎರಡು ವರ್ಷ ಪೂರೈಸಿದ ಬಳಿಕ ಹೈಕಮಾಂಡ್‌ ಬಯ­­­ಸಿದರೆ ಸಂಪುಟ ಪುನರ್‌­ರಚಿಸಲು ಮುಖ್ಯ­ಮಂತ್ರಿ­­ ಯೋಚಿಸಿದ್ದಾರೆ. ಸರಿ­ಯಾಗಿ ಕೆಲಸ ಮಾಡದ ಸಚಿವರನ್ನು ಸಂಪು­ಟ­ದಿಂದ ಕೈಬಿಡಲು ಹೈ­ಕ­ಮಾಂಡ್‌ ಒಪ್ಪಿಗೆ ಪಡೆ­ಯು­ವುದಕ್ಕೆ ಪೂರಕ­ವಾ­ಗಿಯೂ ಈಗ ಸಲ್ಲಿಸುವ ವರದಿ­ ಬಳಸಿ­ಕೊ­ಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ವಾರದಲ್ಲಿ ಮೂರು ದಿನ ಕಡ್ಡಾಯವಾಗಿ ವಿಧಾ­ನ­­­ಸೌಧದಲ್ಲಿ ಕುಳಿತು ಕೆಲಸ ಮಾಡಬೇಕು ಮತ್ತು ಆಗಾಗ್ಗೆ ಜಿಲ್ಲಾ ಪ್ರವಾಸ ಕೈಗೊಳ್ಳಬೇಕು ಎಂದು ಮುಖ್ಯ­ಮಂತ್ರಿ ಎಲ್ಲ ಸಚಿವರಿಗೂ ಸೂಚನೆ ನೀಡಿ­ದ್ದರು. ಹಲವು ಬಾರಿ ಹೇಳಿದರೂ ಈ ಸೂಚನೆ ಕಾರ್ಯ­ಗತವಾಗಿಲ್ಲ. ಮುಂದಿನ ದಿನಗಳಲ್ಲಿ ಈ ವಿಷಯದಲ್ಲಿ ತುಸು ಕಠಿಣವಾಗಿ ನಡೆದುಕೊಳ್ಳುವ ಯೋಚ­ನೆಯನ್ನೂ ಮಾಡಿದ್ದಾರೆ. ಈಗ ಸಿದ್ಧ­ಪಡಿ­ಸುವ ವರದಿಯನ್ನು ಆಧಾರವಾಗಿಟ್ಟುಕೊಂಡು ಕಾರ್ಯ­ವೈಖರಿ ಬದಲಿಸಿಕೊಳ್ಳುವಂತೆ ಕೆಲವು ಸಚಿ­ವ­ರಿಗೆ ತಾಕೀತು ಮಾಡಲು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ.

ಹೊಸ ಸೂತ್ರ: ನಿಗಮ, ಮಂಡಳಿಗಳ ನೇಮಕಾತಿಗೆ ಹೊಸ ಸೂತ್ರ ಅನುಸರಿಸುವ ಬಗ್ಗೆಯೂ ಮುಖ್ಯ­ಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರ ನಡುವೆ ಚರ್ಚೆ ನಡೆ­ಯುತ್ತಿದೆ. ನವೆಂಬರ್‌ 13ಕ್ಕೆ ಸರ್ಕಾರ 18 ತಿಂಗಳು ಪೂರೈಸಲಿದೆ. ಮುಂದಿನ 42 ತಿಂಗಳು­­ಗ­ಳನ್ನು ಎರಡು ಅವಧಿಗಳನ್ನಾಗಿ ವಿಭಜಿಸಿ ತಲಾ 21 ತಿಂಗಳ ಅವಧಿಗೆ ನೇಮಕ ಮಾಡುವ ಯೋಚನೆ ಇದೆ ಎಂದು ಮೂಲಗಳು ತಿಳಿಸಿವೆ.

ವರ್ಗಾವಣೆ ಮುನಿಸು
ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ವರ್ಗಾ­ವಣೆ ಸಂಬಂಧ ಶಾಸಕರು ಶಿಫಾರಸು ನೀಡಿ ಆರು ತಿಂಗಳು ಕಳೆದರೂ ಕೆಲವು ಸಚಿ­ವರು ಆ ಬಗ್ಗೆ ಯಾವುದೇ ನಿರ್ಧಾರ ಕೈ­ಗೊ­ಳ್ಳ­ದಿ­ರುವುದು ಕಾಂಗ್ರೆಸ್‌ನಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

‘ನಾವು ಪತ್ರ ನೀಡಿ ಆರು ತಿಂಗಳು ಕಳೆದಿದೆ. ಕೆಲವು ಸಚಿವರು ಈವರೆಗೆ ಯಾವುದೇ ಪ್ರಕ್ರಿಯೆ ನಡೆಸಿಲ್ಲ. ಈಗ ಸಾಮಾನ್ಯ ವರ್ಗಾ­ವಣೆ ಅವಧಿ ಮುಗಿದಿದೆ. ಸಚಿವರು ನಮ್ಮ ಪತ್ರ­ಗಳಿಗೂ ಬೆಲೆ ಕೊಡದಿದ್ದರೆ ಹೇಗೆ’ ಎಂದು ಕೆಲವು ಶಾಸಕರು ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.