ADVERTISEMENT

ಸದನಕ್ಕೆ ಚಕ್ಕರ್‌; ಭತ್ಯೆಗೆ ಹಾಜರ್‌!

ಈವರೆಗೆ 218 ದಿನ ಕಲಾ‍ಪ

ರಾಜೇಶ್ ರೈ ಚಟ್ಲ
Published 12 ನವೆಂಬರ್ 2017, 19:30 IST
Last Updated 12 ನವೆಂಬರ್ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರದಿಂದ (ನ. 13) ಆರಂಭವಾಗಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಶಾಸಕರು ಸಕ್ರಿಯವಾಗಿ ಪಾಲ್ಗೊಳ್ಳುವರೇ ಎಂಬ ಸಂಗತಿ  ಕುತೂಹಲ ಮೂಡಿಸಿದೆ.

ಈ ಹಿಂದೆ ನಡೆದ ಅಧಿವೇಶನಗಳ ಕಲಾಪಗಳಲ್ಲಿ ಮಹತ್ವದ ವಿಚಾರಗಳ ಚರ್ಚೆಯಾಗಿದ್ದರೂ ಹೆಚ್ಚು ಸುದ್ದಿಯಾಗಿದ್ದು ಶಾಸಕರು ಮತ್ತು ಸಚಿವರ ಗೈರು ಹಾಜರಿ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಆಡಳಿತಾವಧಿಯ ನಾಲ್ಕೂವರೆ ವರ್ಷಗಳಲ್ಲಿ ವಿಧಾನ ಮಂಡಲದ 14 ಅಧಿವೇಶನಗಳಲ್ಲಿ, ಒಟ್ಟು 218 ದಿನ ಕಲಾಪ ನಡೆದಿವೆ.

ADVERTISEMENT

ವಿಧಾನಸಭಾ ಸಚಿವಾಲಯದಿಂದ ಸಿಕ್ಕಿದ ದಾಖಲೆಗಳ ಪ್ರಕಾರ, ಕಲಾಪದ ದಿನಗಳಲ್ಲಿ ಕಾಂಗ್ರೆಸ್ಸಿನ ಎಂ.ಎಚ್‌. ಅಂಬರೀಷ್ ಮತ್ತು ಸಂತೋಷ್‌ ಲಾಡ್‌ (ಸಚಿವ ಸ್ಥಾನದ ಅವಧಿ ಹೊರತುಪಡಿಸಿ) ಶಾಸಕರಾಗಿ ಭಾಗವಹಿಸಿದ್ದು ಕ್ರಮವಾಗಿ ನಾಲ್ಕು ಮತ್ತು ಐದು ದಿನ ಮಾತ್ರ!

ಉಳಿದಂತೆ, ಅತಿ ಕಡಿಮೆ ದಿನ ಕಲಾಪಗಳಲ್ಲಿ ಭಾಗವಹಿಸಿದವರ ಪಟ್ಟಿಯಲ್ಲಿ ಸಂಭಾಜಿ ಲಕ್ಷ್ಮಣ ಪಾಟೀಲ (ಎಂಇಎಸ್‌), ಗಣೇಶ ಪ್ರಸಾದ ಹುಕ್ಕೇರಿ (ಕಾಂಗ್ರೆಸ್‌), ಇಕ್ಬಾಲ್‌ ಅನ್ಸಾರಿ (ಜೆಡಿಎಸ್), ಆನಂದ್‌ ಸಿಂಗ್, ಎಸ್‌. ರಘು (ಬಿಜೆಪಿ) ಮುಂಚೂಣಿಯಲ್ಲಿದ್ದಾರೆ.

27 ಶಾಸಕರು ಮಾತ್ರ 200ಕ್ಕೂ ಹೆಚ್ಚು ದಿನ ಕಲಾಪಗಳಲ್ಲಿ ಭಾಗವಹಿಸಿದ್ದಾರೆ. ಬಿ.ಎಂ. ನಾಗರಾಜ, ಪಿ.ಎಂ. ನರೇಂದ್ರ ಸ್ವಾಮಿ, ರಫೀಕ್‌ ಅಹ್ಮದ್‌, ಶಿವರಾಮ ಹೆಬ್ಬಾರ್ (ಎಲ್ಲರೂ ಕಾಂಗ್ರೆಸ್‌) ಬಿಜೆಪಿಯ ಕೆ.ಜಿ. ಬೋಪಯ್ಯ (ಬಿಜೆಪಿ), ಎಚ್‌.ಕೆ. ಕುಮಾರಸ್ವಾಮಿ (ಜೆಡಿಎಸ್‌) ಈ ಪಟ್ಟಿಯಲ್ಲಿ ಇದ್ದಾರೆ.

ವರ್ಷದಲ್ಲಿ ಕನಿಷ್ಠ 60 ದಿನ ಕಲಾಪ ನಡೆಸಬೇಕು ಎಂದು ಉಭಯ ಸದನಗಳಲ್ಲಿ ಮಸೂದೆ ಅಂಗೀಕರಿಸಲಾಗಿದೆ. ಆದರೆ, ಇದು ಪಾಲನೆ ಆಗಿಲ್ಲ. ಮೊದಲ ವರ್ಷ (2013) ಕೇವಲ 30 ದಿನ, 2015ರಲ್ಲಿ 58 ದಿನ ನಡೆದಿದೆ. ಪ್ರಸಕ್ತ ವರ್ಷ (2017) ಈವರೆಗೆ 30 ದಿನ ಕಲಾಪ ನಡೆದಿದ್ದು, ಬೆಳಗಾವಿ ಅಧಿವೇಶನದ 10 ದಿನ ಸೇರಿಸಿದರೆ ಒಟ್ಟು 40 ದಿನ ನಡೆದಂತಾಗುತ್ತದೆ.

‘ಎಲ್ಲ ಶಾಸಕರು ಕಲಾಪಗಳಲ್ಲಿ ಪಾಲ್ಗೊಳ್ಳಬೇಕು, ಹಾಜರಾತಿ ಹೆಚ್ಚಬೇಕು ಎಂಬ ಉದ್ದೇಶದಿಂದ ಬೆಳಿಗ್ಗೆ ಮತ್ತು ಮಧ್ಯಾಹ್ನ ಪ್ರತ್ಯೇಕವಾಗಿ ಶಾಸಕರ ಹಾಜರಾತಿ ತೆಗೆದುಕೊಳ್ಳಲಾಗುತ್ತಿದೆ. ಆದರೆ, ಕೆಲವು ಶಾಸಕರು ಹಾಜರಿ ಹಾಕಲು ನಾವೇನು ಸ್ಕೂಲ್‌ ಮಕ್ಕಳಾ ಎಂದು ಕೇಳಿ ಆ ಪಟ್ಟಿಯನ್ನೇ ಎತ್ತಿಕೊಂಡು ಹೋದ ಪ್ರಸಂಗ ಕಳೆದ ಅಧಿವೇಶನದ ಸಂದರ್ಭದಲ್ಲಿ ನಡೆದಿದೆ ಎಂದು ವಿಧಾನಸಭೆ ಕಾರ್ಯದರ್ಶಿ ಎಸ್‌. ಮೂರ್ತಿ ತಿಳಿಸಿದರು.

‘ಕಲಾಪ ಆರಂಭಿಸಲು 23 ಶಾಸಕರ ಕೋರಂ ಅಗತ್ಯವಿದೆ. ಶಾಸಕರ ಗೈರು ತಪ್ಪಿಸಲು ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ತೆಗೆದುಕೊಂಡ ಕೆಲವು ಕ್ರಮಗಳು ಕೇವಲ ದಾಖಲೆಗಳಲ್ಲಿವೆ. ಕೋರಂಗಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಬೆಲ್‌ ಬಾರಿಸಿದ ನಿದರ್ಶನಗಳಿವೆ. ಮಧ್ಯಾಹ್ನ ನಂತರ ಶಾಸಕರೇ ಇಲ್ಲದೆ ಕಲಾಪ ಮುಂದೂಡಿದ ಸಂದರ್ಭವೂ ಇದೆ’ ಎಂದು ಅವರು ವಿವರಿಸಿದರು.

ಬೆಳಿಗ್ಗೆ 11ರಿಂದ ಸಂಜೆ 6 ಗಂಟೆಯವರೆಗೆ ಕಲಾಪ ನಡೆಯಬೇಕು. ಭೋಜನ ವಿರಾಮದ 1 ಗಂಟೆ ಅವಧಿ.

ಕಲಾಪ ನಡೆಯುವಾಗ ಆಯಾ ದಿನ ಯಾವ್ಯಾವ ಸಚಿವರು ಹಾಜರಿರಬೇಕು ಎಂದು ಮೊದಲೇ ನಿಗದಿಯಾಗಿರುತ್ತದೆ. ಅನಿವಾರ್ಯ ಇದ್ದರೆ ಸಭಾಧ್ಯಕ್ಷರ ಅನುಮತಿ ಮೇರೆಗೆ ಬೇರೆ ಸಚಿವರಿಗೆ ಹೊಣೆಗಾರಿಕೆ ನೀಡಬಹುದು. ಆದರೆ, ಕೆಲವೊಮ್ಮೆ ಗಮನಕ್ಕೂ ತಾರದೆ ಸಚಿವರು ಗೈರು ಹಾಜರಾಗುತ್ತಾರೆ. ಪ್ರಶ್ನೋತ್ತರ ಸಂದರ್ಭದಲ್ಲೂ ಸಚಿವರು ಗೈರು ಹಾಜರಾಗುತ್ತಿರುವ ಬಗ್ಗೆಯೂ ಕೋಳಿವಾಡ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಅವರ ಮಾತಿಗೆ ಯಾರೂ ಕಿವಿಗೊಡುತ್ತಿಲ್ಲ!

* ಅಧಿವೇಶನಕ್ಕೆ ಗೈರಾಗುವ, ಕಲಾಪದಲ್ಲಿ ನಿದ್ದೆ ಹೋಗುವ ಶಾಸಕರು, ಸಚಿವರ ಕುರಿತು ಸುದ್ದಿ ಮಾಡಿದರೂ ಎಚ್ಚೆತ್ತುಕೊಳ್ಳದಿದ್ದರೆ, ಎಚ್ಚೆತ್ತುಕೊಳ್ಳಬೇಕಿರುವುದು ಮತದಾರ.

–ಬಿ.ಎಸ್‌. ಗೌಡ, ಮಾಹಿತಿ ಹಕ್ಕು ಕಾರ್ಯಕರ್ತ

ಈವರೆಗೆ 14 ಅಧಿವೇಶನ, 218 ದಿನ ಕಲಾಪ

200 ದಿನ ಭಾಗವಹಿಸಿದ ಶಾಸಕರು 27

ದಿನದ ಕಲಾಪಕ್ಕೆ ₹ 80 ಲಕ್ಷಕ್ಕೂ ಹೆಚ್ಚು ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.