ADVERTISEMENT

ಸದನದಲ್ಲೂ ಕಾವೇರಿದ ಉಪಚುನಾವಣೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2017, 19:30 IST
Last Updated 28 ಮಾರ್ಚ್ 2017, 19:30 IST

ಬೆಂಗಳೂರು: ಕಾಂಗ್ರೆಸ್‌–ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿರುವ ನಂಜನಗೂಡು, ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆ ವಿಧಾನಸಭೆ ಕಲಾಪದಲ್ಲಿಯೂ ಮಂಗಳವಾರ ಕಾವೇರಿದ ಚರ್ಚೆಗೆ ಕಾರಣವಾಯಿತು.

‘ಕರ್ನಾಟಕದ ಅಭಿವೃದ್ಧಿ ಮಾದರಿ ಮುಂದಿಟ್ಟುಕೊಂಡು ಮುಂದಿನ ಚುನಾವಣೆಗೆ ಹೋಗುತ್ತೇವೆ. ಬಿಜೆಪಿಗೆ ಅಭಿವೃದ್ಧಿಯ ರಕ್ಷೆಯಿಲ್ಲ, ಮೋದಿ ಗಾಳಿಯ ಅಲೆಯಷ್ಟೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಲೇವಡಿ ಮಾಡಿದರು.
ಇದಕ್ಕೆ ಎದಿರೇಟು ನೀಡಿದ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ‘ನರೇಂದ್ರ ಮೋದಿ ತಂದ ಅಭಿವೃದ್ಧಿಯ ಅಲೆಯೇ ರಾಜ್ಯದಲ್ಲಿ ಬಿಜೆಪಿಗೆ ನೆಲೆ ಕಲ್ಪಿಸಲಿದೆ’ ಎಂದು ಪ್ರತಿಪಾದಿಸಿದರು. 

ಇದಕ್ಕೆ ಧ್ವನಿಗೂಡಿಸಿದ ಸಿ.ಟಿ.ರವಿ, ‘ರಾಜ್ಯವನ್ನು ನೀವು ಅಭಿವೃದ್ಧಿ ಮಾಡಿದ್ದೇ ಆದಲ್ಲಿ, ನೀವು ನಂಜನಗೂಡಿಗೆ ಹೋಗುವುದೇ ಬೇಡ, ಇಲ್ಲಿಯೇ ಕುಳಿತು ಚುನಾವಣೆ ಎದುರಿಸುವ ಧೈರ್ಯ ತೋರಿ’ ಎಂದು ಸಿದ್ದರಾಮಯ್ಯಗೆ ಸವಾಲು ಹಾಕಿದರು. ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ‘ಹಾಗಿದ್ದರೆ ನೀನು (ರವಿ) ಯಾಕೆ ಗುಂಡ್ಲುಪೇಟೆಗೆ ಹೋಗಿದ್ದೆ. ಮೋದಿ ಅಲೆ ಗೆಲ್ಲಿಸುತ್ತೆ ಅಂದಾದರೆ ನಿಮ್ಮ ಯಡಿಯೂರಪ್ಪ 15 ದಿನದಿಂದ ಅಲ್ಲಿಯೇ ಠಿಕಾಣಿ ಹಾಕಿಕೊಂಡು ಕುಳಿತಿರುವುದು ಏಕೆ?’ ಎಂದು ಕುಟುಕಿದರು.

ADVERTISEMENT

ಹಣ ಹಂಚಿಕೆ ಆರೋಪ: ವಾಗ್ವಾದ

ಬೆಂಗಳೂರು: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಅವರ ಕಾರು ಚಾಲಕ ಹಣ ಹಂಚಿದ್ದಾರೆ ಎಂಬ ವಿಷಯ ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರತಿಧ್ವನಿಸಿತು.

ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯರು, ಸಚಿವರ ಕಾರು ಚಾಲಕ ಹಣ ಹಂಚಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೂಡಲೇ ಅವರ ರಾಜೀನಾಮೆ ಪಡೆಯಬೇಕು ಎಂದು ಪಟ್ಟು ಹಿಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಈ ವಿಷಯಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ದೂರು ಕೊಡಿ. ಆ ವಿಷಯ ಚರ್ಚಿಸಲು ಇದು ವೇದಿಕೆಯಲ್ಲ’ ಎಂದರು.

ಈ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಬೇಕು ಎಂಬ ಬಿಜೆಪಿ ಸದಸ್ಯರ ಬೇಡಿಕೆಯನ್ನು  ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ತಳ್ಳಿಹಾಕಿದರು.
ಜೆಡಿಎಸ್‌ನ ಎಂ.ಟಿ. ಕೃಷ್ಣಪ್ಪ, ‘ಬಿಜೆಪಿ  ಮತ್ತು ಕಾಂಗ್ರೆಸ್‌ ಎರಡೂ ಕ್ಷೇತ್ರಗಳಲ್ಲಿ ದುಡ್ಡು ಹಂಚಿವೆ. ಆ ವಿಷಯ ಮುಂದಿಟ್ಟು ಇಲ್ಲಿ ಚರ್ಚೆ ಮಾಡುವುದು ಅನವಶ್ಯಕ. ಚುನಾವಣಾ ಆಯೋಗಕ್ಕೆ ದೂರು ನೀಡಿ ಅಲ್ಲಿಯೇ ನಿಮ್ಮ ತಕರಾರು ಬಗೆಹರಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.