ADVERTISEMENT

ಸಭಾಧ್ಯಕ್ಷರಿಗೆ ತುರ್ತು ನೋಟಿಸ್‌

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 19:56 IST
Last Updated 21 ಮಾರ್ಚ್ 2018, 19:56 IST
ಸಭಾಧ್ಯಕ್ಷರಿಗೆ ತುರ್ತು ನೋಟಿಸ್‌
ಸಭಾಧ್ಯಕ್ಷರಿಗೆ ತುರ್ತು ನೋಟಿಸ್‌   

ಬೆಂಗಳೂರು: ‘ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್‌ನ ಏಳು ಬಂಡಾಯ ಶಾಸಕರು ನಾಳೆ (ಮಾ.23) ಮತ ಚಲಾಯಿಸಲು ಅರ್ಹರು’ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್‌, ಸ್ಪೀಕರ್‌ ಮತ್ತು ಸಚಿವಾಲಯ ಕಾರ್ಯದರ್ಶಿಗೆ ತುರ್ತು ನೋಟಿಸ್‌ ಜಾರಿಗೊಳಿಸಲು ಆದೇಶಿಸಿದೆ.

ಈ ಸಂಬಂಧ ಜೆಡಿಎಸ್‌ ಶಾಸಕರಾದ ಮೂಡಿಗೆರೆಯ ಬಿ.ಬಿ.ನಿಂಗಯ್ಯ ಹಾಗೂ ಶ್ರವಣಬೆಳಗೊಳ ಶಾಸಕ ಸಿ.ಎನ್‌. ಬಾಲಕೃಷ್ಣ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಆರ್‌.ಎಸ್. ಚೌಹಾಣ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

‘ಸ್ಪೀಕರ್ ಸ್ಥಾನದ ಘನತೆಯ ಬಗ್ಗೆ ನ್ಯಾಯಪೀಠಕ್ಕೆ ಸಮಗ್ರ ಅರಿವಿದೆ. ಅವರಿಗೆ ಮುಜುಗರ ಉಂಟುಮಾಡಲು ನಾವು ಬಯಸುವುದಿಲ್ಲ. ಅವರು ತಮ್ಮ ತೀರ್ಮಾನ ಪ್ರಕಟಿಸುವವರೆಗೂ ಏಳೂ ಶಾಸಕರು ಹಕ್ಕು ಚಲಾಯಿಸಲು ಅರ್ಹರು ಎಂದೇ ಪರಿಗಣಿಸಬೇಕಾಗುತ್ತದೆ. ಅಷ್ಟಕ್ಕೂ ಸ್ಪೀಕರ್‌ ನಿರ್ಣಯದ ನಡುವೆ ಪ್ರವೇಶಿಸಲು ನಾವು ಯಾರು’ ಎಂದು ನ್ಯಾಯಮೂರ್ತಿ ಚೌಹಾಣ್‌ ಅರ್ಜಿದಾರರ ಪರ ಹಿರಿಯ ವಕೀಲ ಉದಯ ಹೊಳ್ಳ ಅವರನ್ನು ಪ್ರಶ್ನಿಸಿದರು.

ADVERTISEMENT

‘ವಿಪ್‌ ಉಲ್ಲಂಘನೆ ಮಾಡಿದ ಮಾತ್ರಕ್ಕೆ ಅವರೆಲ್ಲಾ ತಪ್ಪಿತಸ್ಥರೇ, ವಿಪ್‌ ಕಾನೂನು ಬದ್ಧವಾಗಿದೆಯೊ ಇಲ್ಲವೊ ಎಂಬುದನ್ನು ಪರಿಶೀಲಿಸಬೇಕಲ್ಲವೇ. ಇದನ್ನೆಲ್ಲಾ ಸ್ಪೀಕರ್‌ ವಿಚಾರಣೆ ವೇಳೆ ಪರಿಶೀಲಿಸಿದ್ದಾರೆ. ಅವರ ತೀರ್ಪು ಮೊದಲು ಹೊರಬರಲಿ. ಆಮೇಲೆ ಬೇಕಾದರೆ ಅದನ್ನು ಪ್ರಶ್ನಿಸಿಕೊಳ್ಳಿ’ ಎಂದರು.

‘ನ್ಯಾಯಪೀಠ ಈ ಹಂತದಲ್ಲಿ ಹೇಳಬಹುದಾದ್ದೇನೆಂದರೆ, ಆದಷ್ಟು ಶೀಘ್ರ ಅಂದರೆ; ಏಪ್ರಿಲ್‌ 30ರೊಳಗೆ ಸ್ಪೀಕರ್‌ ತಮ್ಮ ತೀರ್ಪು ಪ್ರಕಟಿಸಲಿ ಎಂಬ ನಿರ್ದೇಶನ ನೀಡಬಹುದಷ್ಟೇ’ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಪ್ರತಿವಾದಿಗಳ ಪರ ಹಾಜರಿದ್ದ ಹಿರಿಯ ವಕೀಲರಾದ ಪ್ರೊ.ರವಿವರ್ಮ ಕುಮಾರ್, ಕೆ.ಜಿ.ರಾಘವನ್‌ ಮತ್ತು ಧ್ಯಾನ್‌ ಚಿನ್ನಪ್ಪ, ‘ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲು ತುಳಿಯುವಲ್ಲಿ ವಿಳಂಬ ಮಾಡಿದ್ದಾರೆ. ಆದ್ದರಿಂದ ಶಾಸಕರು ತಮ್ಮ ಮತ ಚಲಾಯಿಸಲು ಅವಕಾಶ ನೀಡಬೇಕು. ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾಯಿಸುವುದನ್ನು ತಡೆಯಬೇಕು ಎಂಬುದೇ ಅರ್ಜಿದಾರರ ಉದ್ದೇಶ’ ಎಂದು ಆಕ್ಷೇಪಿಸಿದರು.

ಮೆಮೊ ಸಲ್ಲಿಕೆ: ‘ನಾನು ಪ್ರಕರಣದ ಕೂಲಂಕಷ ಅಧ್ಯಯನ ನಡೆಸಬೇಕಿದೆ. ಆದ್ದರಿಂದ ಇಂತಿಷ್ಟೇ ಸಮಯದಲ್ಲಿ ತೀರ್ಪು ಪ್ರಕಟಿಸಿ ಎಂದರೆ ಆಗುವುದಿಲ್ಲ’ ಎಂದು ಸ್ಪೀಕರ್‌ ತಿಳಿಸಿರುವುದಾಗಿ ಅಡ್ವೊಕೇಟ್‌ ಜನರಲ್‌ ಎಂ.ಆರ್. ನಾಯಕ್‌ ಹಾಗೂ ಹೆಚ್ಚುವರಿ ಅಡ್ವೊಕೇಟ್‌ ಜನರಲ್ ಎ.ಎಸ್.ಪೊನ್ನಣ್ಣ ಈ ಕುರಿತ ಜ್ಞಾಪನಾ ಪತ್ರವನ್ನು (ಮೆಮೊ) ನ್ಯಾಯಪೀಠಕ್ಕೆ ಸಲ್ಲಿಸಿದರು. ವಿಚಾರಣೆಯನ್ನು ಗುರುವಾರಕ್ಕೆ (ಮಾ.22) ಮುಂದೂಡಲಾಗಿದೆ.

ಪ್ರಕರಣವೇನು?: ‘ಪ್ರತಿವಾದಿ ಶಾಸಕರಾದ ಜಮೀರ್‌ ಅಹಮದ್ ಖಾನ್‌, ಚೆಲುವರಾಯ ಸ್ವಾಮಿ, ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಎಚ್‌.ಸಿ.ಬಾಲಕೃಷ್ಣ, ಆರ್.ಅಖಂಡ ಶ್ರೀನಿವಾಸ ಮೂರ್ತಿ, ಇಕ್ಬಾಲ್‌ ಅನ್ಸಾರಿ ಹಾಗೂ ಎಸ್.ಭೀಮಾನಾಯ್ಕ್‌ 2016ರ ಜೂನ್‌ 11ರಂದು ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ್ದಾರೆ. ಆದ್ದರಿಂದ ಇವರನ್ನು ಪಕ್ಷಾಂತರ ನಿಷೇಧ ಕಾಯ್ದೆ–1986ರ ಅನ್ವಯ ಅನರ್ಹಗೊಳಿಸಿ’ ಎಂದು ನಿಂಗಯ್ಯ ಹಾಗೂ ಬಾಲಕೃಷ್ಣ ಸ್ಪೀಕರ್‌ಗೆ ದೂರು ಸಲ್ಲಿಸಿದ್ದರು.

‘ಈ ದೂರಿನ ವಿಚಾರಣೆಯನ್ನು ಇದೇ 19ರಂದು ಪೂರ್ಣಗೊಳಿಸಿರುವ ಸ್ಪೀಕರ್ ಕೆ.ಬಿ. ಕೋಳಿವಾಡ ತೀರ್ಪನ್ನು ಕಾಯ್ದಿರಿಸಿದ್ದಾರೆ. ಹೀಗಾಗಿ ಈ ಏಳೂ ಶಾಸಕರು ರಾಜ್ಯಸಭೆ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸದಂತೆ ನಿರ್ದೇಶಿಸಬೇಕು’ ಎಂದು ಕೋರಿ ನಿಂಗಯ್ಯ ಹಾಗೂ ಬಾಲಕೃಷ್ಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.