ADVERTISEMENT

ಸಮಸ್ಯೆಗಳ ಸುಳಿಗೆ ಬಡ ವಿದ್ಯಾರ್ಥಿಗಳ ಬಲಿ!

ಶಾಲೆಗಳ ವಾಸ್ತವ ಚಿತ್ರಣ - ಶೂನ್ಯ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 25 ಮೇ 2016, 19:32 IST
Last Updated 25 ಮೇ 2016, 19:32 IST
ಹಿರಿಯೂರು ತಾಲ್ಲೂಕಿನಲ್ಲಿ 2016 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶ ಪಡೆದಿರುವ ನಗರದ ಎಸ್‌ಜೆಆರ್ ಪ್ರೌಢಶಾಲೆ
ಹಿರಿಯೂರು ತಾಲ್ಲೂಕಿನಲ್ಲಿ 2016 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶ ಪಡೆದಿರುವ ನಗರದ ಎಸ್‌ಜೆಆರ್ ಪ್ರೌಢಶಾಲೆ   

ಹಿರಿಯೂರು: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಟ್ಟಣದ ಎಸ್‌ಜೆಆರ್ ಪ್ರೌಢಶಾಲೆಗೆ ಶೂನ್ಯ ಫಲಿತಾಂಶ ಬಂದಿದೆ.
‘ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿಲ್ಲ’ ಎಂದು ಆಡಳಿತ ಮಂಡಳಿಯವರು ದೂರಿದರೆ, ‘ವೇತನ ಕೊಡದಿದ್ದರೆ ಪಾಠ ಮಾಡುವುದು ಹೇಗೆ’ ಎಂದು ಶಿಕ್ಷಕರು ಪ್ರಶ್ನೆ ಮಾಡುತ್ತಾರೆ.

1992ರಲ್ಲಿ ಪ್ರಾರಂಭವಾದ ಈ ಶಾಲೆ ಸರ್ಕಾರದ ನಿಯಮಾನುಸಾರ ನಡೆದಿದ್ದರೆ ಈ ವೇಳೆಗೆ ಅನುದಾನ ಪ್ರಕ್ರಿಯೆಗೆ ಒಳಪಡಬೇಕಿತ್ತು. ಅನುದಾನಕ್ಕೆ ಒಳಪಡದ ಕಾರಣ ಆಡಳಿತ ಮಂಡಳಿಯವರೇ ಶಿಕ್ಷಕರಿಗೆ ವೇತನ ನೀಡಬೇಕಿದೆ.

ಪೋಷಕರೊಬ್ಬರು ಮಾತನಾಡಿ, ‘ಶಾಲೆಯಲ್ಲಿ ಶಿಕ್ಷಕರು ಪಾಠ ಸರಿಯಾಗಿ ಮಾಡುತ್ತಿಲ್ಲ. ಆಡಳಿತ ಮಂಡಳಿಯವರು ಶಿಕ್ಷಕರಿಗೆ ತಿಂಗಳಿಗೆ ಕೇವಲ 3 ಸಾವಿರ ರೂಪಾಯಿ ವೇತನ ನೀಡುತ್ತಾರೆ. ಇಷ್ಟು ಕಡಿಮೆ ವೇತನಕ್ಕೆ ಈ ಕಾಲದಲ್ಲಿ ಯಾರು ತಾನೆ ಸರಿಯಾಗಿ ಪಾಠ ಮಾಡಲು ಸಾಧ್ಯ?

ಮಕ್ಕಳಿಗೆ ಹೆಚ್ಚುವರಿ ತರಗತಿ ತೆಗೆದುಕೊಳ್ಳುವುದು ಇರಲಿ, ಇರುವ ಅವಧಿಯಲ್ಲೂ ಸರಿಯಾಗಿ ಪಾಠ ನಡೆದಿಲ್ಲ. ಅಲ್ಲದೆ ನಮ್ಮ ಮಕ್ಕಳು ಸಹ ಹೇಳಿಕೊಳ್ಳುವಂತಹ ಜಾಣರಲ್ಲ. ಶಿಕ್ಷಕರು ಪರಿಶ್ರಮ ಹಾಕಿದ್ದರೆ ಆರೇಳು ಜನರಾದರೂ ಪಾಸಾಗುತ್ತಿದ್ದರು’ ಎನ್ನುತ್ತಾರೆ.

2014ರವರೆಗೆ ಮುಖ್ಯ ಶಿಕ್ಷಕರಾಗಿದ್ದ ಭರಮಪ್ಪ ಎನ್ನುವವರು ಆಡಳಿತ ಮಂಡಳಿ ಜತೆಗಿನ ಭಿನ್ನಾಭಿಪ್ರಾಯದಿಂದ ಕೆಲಸ ಬಿಟ್ಟು ಹೋದಾಗಿನಿಂದ ಫಲಿತಾಂಶ ಕಳಪೆಯಾಗಿದೆ. ಕೊಡುವ ವೇತನವೂ ಪ್ರತಿ ತಿಂಗಳು ಸಿಗುತ್ತಿಲ್ಲ.

ನಿವೃತ್ತ ಉಪ ವಿಭಾಗಾಧಿಕಾರಿಯಾಗಿದ್ದ ಬ್ರಹ್ಮಾನಂದ ಮುನಿ ಅವರು ಪ್ರಸ್ತುತ ಆಡಳಿತ ಮಂಡಳಿ ಅಧ್ಯಕ್ಷರು. ‘ಸಮಾಜಕ್ಕೆ ಏನಾದರೂ ಒಳಿತು ಮಾಡುವ ಹಂಬಲದಿಂದ ಈ ಶಾಲೆಯ ಹೊಣೆ ಹೊತ್ತುಕೊಂಡೆ. ಶಿಕ್ಷಕರಿಗೆ ಸಂಬಳ ಕೊಡಲು ಎರಡು ನಿವೇಶನ ಮಾರಿದ್ದೇನೆ.

ಬರುವ ಪಿಂಚಣಿ ಮೇಲೆ ಸಾಲ ತೆಗೆದು ಸಂಬಳ ಕೊಟ್ಟಿದ್ದೇನೆ. ಶಿಕ್ಷಕರು ಸರಿಯಾಗಿ ಪಾಠ ಮಾಡಿಲ್ಲ ಎನ್ನುವುದು ಸತ್ಯ ಸಂಗತಿ. ಹಾಗೆಯೇ ಶಿಕ್ಷಕರಿಗೆ ವೇತನ ಕೊಡಲು ನನಗೂ ಕಷ್ಟವಾಗುತ್ತಿದೆ ಎನ್ನುವುದು ಕೂಡ ಸತ್ಯ. ಶೂನ್ಯ ಫಲಿತಾಂಶ ಬಂದಿರುವುದು ಕೇಳಿ ತುಂಬ ನೋವಾಗಿದೆ’ ಎಂದು ಪ್ರತಿಕ್ರಿಯಿಸಿದರು.

‘ಶಾಲೆಯನ್ನು ಅನುದಾನಕ್ಕೆ ಒಳಪಡಿಸಿದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರು ಸಚಿವ ಕಿಮ್ಮನೆ ರತ್ನಾಕರ ಅವರಿಗೆ ನಮ್ಮ ಶಾಲೆಯನ್ನು ಅನುದಾನಕ್ಕೆ ಒಳಪಡಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದರು.

ಶಿಕ್ಷಣ ಸಚಿವರು ಆಯುಕ್ತರಿಗೆ, ಆಯುಕ್ತರು ಇಲ್ಲಿನ ಬಿಇಒಗೆ ಶಾಲೆಯ ಕಡತ ಸಲ್ಲಿಸುವಂತೆ ಪತ್ರದಲ್ಲಿ ಸೂಚಿಸಿದ್ದಾರೆ. ಶಾಲೆ ಅನುದಾನಕ್ಕೆ ಒಳಪಟ್ಟಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ’ ಎಂದು ವಿವರಿಸಿದರು.

ಬುದ್ಧಿಮಾತು ಕೇಳುತ್ತಿಲ್ಲ: ‘ಶಿಕ್ಷಕರು ಹಾಗೂ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಶೂನ್ಯ ಫಲಿತಾಂಶ ಬಂದಿದೆ. ಇಲಾಖೆ ಸೂಚಿಸುವ ಯಾವುದೇ ಪರಿಹಾರ ಬೋಧನಾ ಕ್ರಮಗಳನ್ನು ಈ ಶಾಲೆ ಅನುಸರಿಸುತ್ತಿಲ್ಲ.

ಪೂರಕ ಪರೀಕ್ಷೆಗಾದರೂ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿ ಉತ್ತಮ ಫಲಿತಾಂಶ ಬರುವಂತೆ ಶಿಕ್ಷಕರು ಪ್ರಯತ್ನ ನಡೆಸಬೇಕು’ ಎಂದು ಬಿಇಒ ಹನುಮಂತರಾಯಪ್ಪ ಸಲಹೆ ನೀಡಿದ್ದಾರೆ. ಹತ್ತು ಬಾಲಕರು ಹಾಗೂ ಮೂವರು ಬಾಲಕಿಯರು ಸೇರಿ ಈ ಶಾಲೆಯ 13 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದರು.
- ಸುವರ್ಣ ಬಸವರಾಜ್‌

*
ಈ ಬಾರಿ ಎಸ್‌ಎಸ್ಎಲ್‌ಸಿಯಲ್ಲಿ ರಾಜ್ಯದ 52 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ. ಇವುಗಳಲ್ಲಿ 3 ಸರ್ಕಾರಿ ಶಾಲೆಗಳೂ ಸೇರಿವೆ. ಶೂನ್ಯ ಫಲಿತಾಂಶ ಪಡೆದ ಬಹುತೇಕ ಖಾಸಗಿ ಶಾಲೆಗಳು ಅನುದಾನದ ಆಸೆಯಿಂದ ಶಾಲೆಯನ್ನು ನಡೆಸುತ್ತಿವೆ. ಈ ಬಗ್ಗೆ ‘ಪ್ರಜಾವಾಣಿ’ ಸಮೀಕ್ಷೆ ನಡೆಸಿದಾಗ ಕಂಡು ಬಂದ ಚಿತ್ರವೇ ಬೇರೆ. ಈ ಶಾಲೆಗಳ ವಾಸ್ತವ ಚಿತ್ರಣ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT