ADVERTISEMENT

ಸರಾಸರಿ ಅಂಕವೇ ಮಾನದಂಡ

ಗೆಜೆಟೆಡ್‌ ಪ್ರೊಬೇಷನರ್‍ ಹುದ್ದೆಗಳಿಗೆ ಸಂದರ್ಶನ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2016, 20:04 IST
Last Updated 9 ನವೆಂಬರ್ 2016, 20:04 IST
ಸರಾಸರಿ ಅಂಕವೇ ಮಾನದಂಡ
ಸರಾಸರಿ ಅಂಕವೇ ಮಾನದಂಡ   

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಗೆಜೆಟೆಡ್‌ ಪ್ರೊಬೇಷನರ್ಸ್ ಹುದ್ದೆಗಳಿಗೆ ನಡೆಸುವ ನೇಮಕಾತಿಗೆ ಸಂದರ್ಶನ ಮಂಡಳಿ ನೀಡುವ ಸರಾಸರಿ ಅಂಕವೇ ಮಾನ ದಂಡವಾಗಲಿದೆ.

ಕೆಪಿಎಸ್‌ಸಿ ಸುಧಾರಣೆಗೆ ಅಗತ್ಯ ಶಿಫಾರಸುಗಳನ್ನು ಮಾಡಲು  ರಾಜ್ಯ  ಸರ್ಕಾರ ನೇಮಿಸಿದ್ದ ಪಿ.ಸಿ. ಹೋಟಾ ಸಮಿತಿಯ ವರದಿ ಹಾಗೂ ಹೈಕೋರ್ಟ್‌  ನಿರ್ದೇಶನದ ಅನ್ವಯ ಈ ತಿದ್ದುಪಡಿ ತರಲು ಸರ್ಕಾರ ತೀರ್ಮಾನಿಸಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಬುಧವಾರ  ಮಾಧ್ಯಮ ಗೋಷ್ಠಿಯಲ್ಲಿ  ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ  ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಪಿಎಸ್‌ಸಿಯ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಪ್ರಸ್ತಾವನೆ ಮಂಡಿಸಲಾಯಿತು.  ಸುದೀರ್ಘ ಚರ್ಚೆಯ ಬಳಿಕ ಎರಡು ಮಹತ್ವದ ನಿರ್ಣಯಗಳನ್ನು ಸಭೆ ಕೈಗೊಂಡಿತು ಎಂದೂ ಅವರು ಹೇಳಿದರು.
ಸಂದರ್ಶನ ಮಂಡಳಿಯಲ್ಲಿರುವ ನಾಲ್ಕು ಸದಸ್ಯರು ನೀಡುವ ಒಟ್ಟು ಮೊತ್ತವನ್ನು ಕೂಡಿ, ಸರಾಸರಿ ಅಂಕವನ್ನು ಕಂಡು ಹಿಡಿದು ಸಂದರ್ಶನ ಎದುರಿಸಿದ ಅಭ್ಯರ್ಥಿಗೆ  ನೀಡಲು ಸಚಿವ ಸಂಪುಟ ಅನುಮೋದನೆ ನೀಡಿತು ಎಂದರು.

ADVERTISEMENT

ನಾಲ್ವರು ಸದಸ್ಯರ ಪೈಕಿ ಅತಿ ಹೆಚ್ಚು, ಅತಿ ಕಡಿಮೆ ಅಂಕವನ್ನು ಬದಿಗಿಟ್ಟು ಉಳಿದ ಇಬ್ಬರು ಸದಸ್ಯರು ನೀಡುವ ಅಂಕವನ್ನೇ ಪರಿಗಣಿಸಬೇಕು ಎಂಬ ಪ್ರಸ್ತಾವನೆ ಇತ್ತು. ಅದಕ್ಕೆ ಸಭೆ ಒಪ್ಪಿಗೆ ಸೂಚಿಸಲಿಲ್ಲ ಎಂದು  ಅವರು ತಿಳಿಸಿದರು.

ಸದಸ್ಯರ ಸಂಖ್ಯೆ 4ಕ್ಕೆ ಮಿತಿ: ಸಂದರ್ಶನ ಮಂಡಳಿಯ ಸದಸ್ಯರ ಸಂಖ್ಯೆಯನ್ನು 4 ಕ್ಕೆ ಮಿತಿಗೊಳಿಸಲು ಹಾಗೂ ಸದಸ್ಯ ಸ್ಥಾನಕ್ಕೆ ಮೀಸಲಾತಿಗಿಂತ ವಿಷಯ ಪರಿಣತಿಯನ್ನೇ ಪರಿಗಣಿಸಲು ಸಂಪುಟ ನಿರ್ಧರಿಸಿದೆ.

ಸಂದರ್ಶನ ಮಂಡಳಿಯಲ್ಲಿ 5 ಸದಸ್ಯರು ಇರಬೇಕು ಹಾಗೂ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಹಾಗೂ ಮಹಿಳಾ ಸಮುದಾಯಕ್ಕೆ ಮೀಸಲಾತಿ ಇರಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು.

ಕೆಪಿಎಸ್‌ಸಿಯ ಇಬ್ಬರು ಹಾಗೂ ಕನ್ನಡ ಭಾಷೆ ಗೊತ್ತಿರುವ ಇಬ್ಬರು ವಿಷಯ ಪರಿಣತರು ಸೇರಿ 4 ಸದಸ್ಯರು ಇರುವ ಸಂದರ್ಶನ ಮಂಡಳಿ ರಚಿಸಲು ಸಚಿವ ಸಂಪುಟ  ಒಪ್ಪಿಗೆ ಸೂಚಿಸಿತು  ಎಂದೂ ಜಯಚಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.